ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ | ಬಿಸಿಲ ಬೇಗೆ: ‘ಕರೆಂಟ್‌ ಶಾಕ್‌’

ಹೆಚ್ಚಿನ ಯೂನಿಟ್‌ ವಿದ್ಯುತ್‌ ಬಳಕೆ ಮಾಡಿದ 75,248 ಗ್ರಾಹಕರು
Published 29 ಮೇ 2024, 4:52 IST
Last Updated 29 ಮೇ 2024, 4:52 IST
ಅಕ್ಷರ ಗಾತ್ರ

ಬಳ್ಳಾರಿ: ಕೆಂಡದಂತಾ ಬಿಸಿಲು, ಬಿಸಿಗಾಳಿ ಇದರ ಜತೆಗೆ ಬರ. ಇದೆಲ್ಲದರ ಪರಿಣಾಮವಾಗಿ ಈ ಬಾರಿಯ ಬೇಸಿಗೆ ಸಹಿಸಲಾಗದ ಋತುವಾಗಿ ಪರಿಣಮಿಸಿತ್ತು. ಈ ಬೇಗೆಯಿಂದ ಪಾರಾಗಲು ಎಡೆಬಿಡದೇ ಫ್ಯಾನ್‌, ಕೂಲರ್‌, ಎ.ಸಿ ಫ್ರಿಡ್ಜ್‌ಗಳನ್ನು ಬಳಿಸಿದ ಜೆಸ್ಕಾಂ ಗ್ರಾಹಕರು ತಮ್ಮ ಗಮನಕ್ಕೆ ಬಾರದೇ ನಿಗದಿತ ಯೂನಿಟ್‌ಗಳ ಮಿತಿ ದಾಟಿದ್ದು, ಬಿಲ್‌ ಬಂದಾಗ ‘ಶಾಕ್‌’ಗೆ ಒಳಗಾಗಿದ್ದಾರೆ. 

ಗೃಹ ಜ್ಯೋತಿಗೆ ನೋಂದಣಿಯಾಗಿ ಸರ್ಕಾರ ನಿಗದಿ ಮಾಡಿದ ಮಿತಿಯನ್ನು ಮೀರಿ ವಿದ್ಯುತ್‌ ಬಳಸಿದ ಗ್ರಾಹಕರು ಏಪ್ರಿಲ್‌ ತಿಂಗಳಲ್ಲಿ ಪೂರ್ತಿ ಬಿಲ್‌ ಪಾವತಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. 

ರಾಜ್ಯ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಐದು ‘ಗ್ಯಾರಂಟಿ’ ಕಾರ್ಯಕ್ರಮಗಳಲ್ಲಿ ‘ಗೃಹಜ್ಯೋತಿ’ಯೂ ಒಂದು. ಕಳೆದ ವರ್ಷ ಈ ಕಾರ್ಯಕ್ರಮ ಜಾರಿಗೆ ಬಂದಿದ್ದು, ಗ್ರಾಹಕರೂ ಉಚಿತ ವಿದ್ಯುತ್‌ಗೆ ಹರ್ಷ ವ್ಯಕ್ತಪಡಿಸಿದ್ದರು. ಆದರೆ, ಮಾರ್ಚ್‌ನಿಂದ ಸತತವಾಗಿ ಬಿಸಿಲು ಏರುಮುಖವಾಗಿದ್ದರಿಂದ ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚಿನವರು ನಿಗದಿತ ಮಿತಿಗಿಂತ ಹೆಚ್ಚುವರಿ ಯೂನಿಟ್‌ ವಿದ್ಯುತ್‌ ಬಳಸಿದ್ದಾರೆ. 

ಗೃಹ ಜ್ಯೋತಿ ಕಾರ್ಯಕ್ರಮದ ಪ್ರಕಾರ, ಗ್ರಾಹಕರೊಬ್ಬರಿಗೆ 200 ಯೂನಿಟ್‌ ವರೆಗೆ ಉಚಿತ ವಿದ್ಯುತ್‌ ಲಭ್ಯ. ಆದರೆ, ಈ ಹಿಂದಿನ ವರ್ಷಗಳಲ್ಲಿ ಬಳಸಿದ ಸರಾಸರಿ ಆಧರಿಸಿ ಸರ್ಕಾರ ಯೂನಿಟ್‌ಗಳ ಮಿತಿ ವಿಧಿಸಿದೆ. ಅದರ ಮೇಲೆ 10 ಯೂನಿಟ್‌ ಹೆಚ್ಚಿಗೆ ಬಳಸಲೂ ಅವಕಾಶ ನೀಡಿದೆ.

ಈ ಬಾರಿ ಏಪ್ರಿಲ್‌ನಲ್ಲಿ ಎ.ಸಿ, ಕೂಲರ್‌, ಫ್ಯಾನ್‌, ಫ್ರಿಡ್ಜ್‌ಗಳನ್ನು ಹೆಚ್ಚಾಗಿ ಬಳಸಿರುವುದರಿಂದ ಬಳ್ಳಾರಿ ವ್ಯಾಪ್ತಿಯ ಜೆಸ್ಕಾಂನ ಸಾವಿರಾರು ಗ್ರಾಹಕರು ನಿಗದಿತ ಮಿತಿಯ ಯೂನಿಟ್‌ಗಳನ್ನು ಮೀರಿ ವಿದ್ಯುತ್‌ ಬಳಸಿದ್ದಾರೆ. ಹೀಗಾಗಿ ಇವರೆಲ್ಲರೂ ಪೂರ್ತಿ ಬಿಲ್‌ ಪಾವತಿಸಬೇಕಾಗಿ ಬಂದಿದೆ. 

‘ಗೃಹ ಜ್ಯೋತಿಗೂ ಮುನ್ನ ನಮಗೆ ₹1,500 ಬಿಲ್‌ ಬರುತ್ತಿತ್ತು. ಗೃಹ ಜ್ಯೋತಿಗೆ ನೋಂದಣಿ ಮಾಡಿಕೊಂಡ ಬಳಿಕ ₹2  ಬಿಲ್‌ ಬರುತ್ತಿತ್ತು. ಇದರಿಂದ ನಮಗೆ ಬಹಳ ಅನುಕೂಲವಾಗಿತ್ತು. ಆದರೆ, ಏಪ್ರಿಲ್‌ ತಿಂಗಳಲ್ಲಿ ₹1,800 ಬಿಲ್‌ ಬಂದಿದೆ. ಬಿಲ್‌ ಪರಿಶೀಲಿಸಿದಾಗ ಹೆಚ್ಚಿನ ಯೂನಿಟ್‌ಗಳ ಬಳಕೆಯಾಗಿರುವುದು ಕಂಡು ಬಂದಿದೆ. ಏಪ್ರಿಲ್‌ನಲ್ಲಿ ನಾವು ಎ.ಸಿಯನ್ನು ಯಾವಾಗಲೂ ಚಾಲು ಇಟ್ಟಿರುತ್ತಿದ್ದೆವು. ಅದಕ್ಕಾಗಿಯೇ ಹೀಗೆ ಆಗಿದೆ ಎಂಬುದು ನಮಗೆ ಮನವರಿಕೆಯಾಯಿತು’ ಎಂದು ಬ್ಯಾಂಕ್‌ ಉದ್ಯೋಗಿ ಪ್ರಕಾಶ್‌ ರೆಡ್ಡಿ ಎಂಬುವವರು ಹೇಳಿದ್ದಾರೆ.   

ಅಂದಹಾಗೆ ಜೆಸ್ಕಾಂನ ಬಳ್ಳಾರಿ ಜಿಲ್ಲೆ ವ್ಯಾಪ್ತಿಯಲ್ಲಿ ಒಟ್ಟು 2,12,662 ಗ್ರಾಹಕರು ಗೃಹ ಜ್ಯೋತಿಗೆ ನೋಂದಾಯಿಸಿಕೊಂಡಿದ್ದಾರೆ. ಅದರಲ್ಲಿ 75,248 ಗ್ರಾಹಕರು ನಿಗದಿತ ಮಿತಿಗಿಂತಲೂ ಹೆಚ್ಚಿನ ಯೂನಿಟ್‌ಗಳ ವಿದ್ಯುತ್‌ ಬಳಕೆ ಮಾಡಿರುವುದಾಗಿ ಜೆಸ್ಕಾಂನಿಂದ ಸಿಕ್ಕ ಅಧಿಕೃತ ಅಂಕಿ ಅಂಶಗಳಿಂದ ಗೊತ್ತಾಗಿದೆ. ಹೆಚ್ಚಿನ ವಿದ್ಯುತ್‌ ಬಳಸಿದವರಿಗೆ ಯೂನಿಟ್‌ಗೆ ₹5.90 ದರದಲ್ಲಿ ಬಿಲ್‌ ನೀಡಲಾಗಿದೆ.

45 ಡಿಗ್ರಿ ಸೆಲ್ಸಿಯಸ್‌ ತಲುಪಿದ್ದ ತಾಪಮಾನ 

ಬಳ್ಳಾರಿಯ ಬಿಸಿಲೆಂದರೆ ಎಂಥವರೂ ನಡುಗುವುದೇ. ಆದರೆ ಈ ಬಾರಿ ಬರ ಬಂದು ಬಿಸಿಲ ಬೇಗೆ ಮತ್ತಷ್ಟು ಹೆಚ್ಚಾಗಿತ್ತು. ಹೀಗಾಗಿ ಇಲ್ಲಿ 45 ಡಿಗ್ರಿ ಸೆಲ್ಸಿಯಸ್‌ ವರೆಗೆ ತಾಪಮಾನ ದಾಖಲಾಯಿತು. ನಿಂತಲ್ಲಿ ನಿಲ್ಲಲಾಗದೆ ಕೂತಲ್ಲಿ ಕೂರಲಾಗದಂಥ ತಳಮಳಕ್ಕೆ ಸಾಕ್ಷಿಯಾಗಿದ್ದ ಈ ಬೇಸಿಗೆ ಜನರನ್ನು ಹೈರಾಣಾಗಿಸಿತ್ತು. ಎಲೆಕ್ಟ್ರಾನಿಕ್‌ ಮಳಿಗೆಗಳಲ್ಲಿ ಫ್ಯಾನ್‌ ಎ.ಸಿ ಕೂಲರ್ ಫ್ರಿಡ್ಜ್‌ಗಳು ಹೆಚ್ಚಾಗಿ ಮಾರಾಟವಾಗಿದ್ದವು. ಹಲವು ಮಳಿಗೆಗಳಲ್ಲಿ ಕೂಲರ್‌ ಎ.ಸಿ ನೋಸ್ಟಾಕ್‌ ಎನ್ನುವಂತಾಗಿತ್ತು. ಬುಕ್‌ ಮಾಡಿ ಒಂದು ವಾರ ಕಾದ ಬಳಿಕ ಎ.ಸಿ ಕೂಲರ್‌ಗಳು ಸಿಗುತ್ತಿದ್ದವು. 

ಬಳಸಿದಷ್ಟು ಬಿಲ್‌ 

ಜಿಲ್ಲೆಯಲ್ಲಿ 212662 ಗೃಹ ಜ್ಯೋತಿ ಫಲಾನುಭವಿಗಳಿದ್ದಾರೆ. ಈ ಪೈಕಿ 75248 ಗ್ರಾಹಕರು ಏಪ್ರಿಲ್‌ ತಿಂಗಳಲ್ಲಿ ನಿಗದಿತ ಯೂನಿಟ್‌ಗಳಿಗಿಂತಲೂ ಹೆಚ್ಚಿನ ವಿದ್ಯುತ್‌ ಬಳಕೆ ಮಾಡಿದ್ದಾರೆ. ಬೇಸಿಗೆ ಕಾರಣದಿಂದ ಜನ ಹವಾನಿಯಂತ್ರಣ ವ್ಯವಸ್ಥೆಯನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ. ಹೀಗಾಗಿಯೇ ವಿದ್ಯುತ್‌ ಬಳಕೆಯೂ ಹೆಚ್ಚಾಗಿರುವ ಸಾಧ್ಯತೆ ಇದೆ. ಯಾರೆಲ್ಲ ಮಿತಿ ಮೀರಿದ ವಿದ್ಯುತ್‌ ಬಳಕೆ ಮಾಡಿದ್ದಾರೋ ಅವರಿಗೆ ಬಳಸಿದ ಅಷ್ಟೂ ಯೂನಿಟ್‌ಗೂ ಬಿಲ್‌ ನೀಡಲಾಗಿದೆ. ಈ ಬಗ್ಗೆ ನಮಗೆ ಹಲವರು ದೂರು ನೀಡಿದ್ದಾರೆ. ಅವರಿಗೆಲ್ಲ ಸಮಜಾಯಿಷಿ ನೀಡಲಾಗಿದೆ. ಅವರಿಗೂ ಸಂಗತಿ ಅರಿವಿಗೆ ಬಂದಿದೆ ಎಂದು ಜೆಸ್ಕಾಂ ಸೂಪರಿಟೆಂಡೆಂಟ್ ಎಂಜಿನಿಯರ್ ವೆಂಕಟೇಶ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT