ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ಕಾರ ಅಭದ್ರಗೊಳಿಸುವ ಕುತಂತ್ರ ಈಡೇರದು: ಸಂಸದ ಇ. ತುಕಾರಾಂ

ಕಾಂಗ್ರೆಸ್‌, ವಿವಿಧ ಸಂಘಟನೆಗಳಿಂದ ಪ್ರತಿಭಟನೆ
Published : 5 ಆಗಸ್ಟ್ 2024, 15:46 IST
Last Updated : 5 ಆಗಸ್ಟ್ 2024, 15:46 IST
ಫಾಲೋ ಮಾಡಿ
Comments

ಬಳ್ಳಾರಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ದಕ್ಷವಾಗಿ ಆಡಳಿತ ನಡೆಸುತ್ತಿರುವುದನ್ನು ಸಹಿಸದ ಬಿಜೆಪಿ ನೀಚ ಬುದ್ಧಿಯಿಂದ ಸರ್ಕಾರ ಅಭದ್ರಗೊಳಿಸಲು ಹೊರಟಿದೆ. ಆದರೆ, ಅವರ ಕುತಂತ್ರ ಈಡೇರದು’ ಎಂದು ಸಂಸದ ಇ. ತುಕಾರಾಂ ಹೇಳಿದರು. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ, ಜೆಡಿಎಸ್‌ ಹಮ್ಮಿಕೊಂಡಿರುವ ಪಾದಯಾತ್ರೆ ವಿರೋಧಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಾಗೂ ಹಿಂದುಳಿದ ಜಾತಿಗಳ ಒಕ್ಕೂಟದಿಂದ ಸೋಮವಾರ ಪ್ರತಿಭಟನೆ ನಡೆಯಿತು. 

ಈ ವೇಳೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿವೆ. ಸಂವಿಧಾನ, ಪ್ರಜಾಪ್ರಭುತ್ವದಲ್ಲಿ ಬಿಜೆಪಿಗೆ ನಂಬಿಕೆ ಇಲ್ಲ. ದೇಶದ ವಿವಿಧ ರಾಜ್ಯಗಳಲ್ಲಿ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರಗಳನ್ನು ಉರುಳಿಸುತ್ತಾ ಬಂದಿದೆ. ಇಲ್ಲಿಯೂ ಸಿದ್ದರಾಮಯ್ಯನ್ನು ಸಹಿಸದ ಬಿಜೆಪಿ, ಸರ್ಕಾರ ಉರುಳಿಸುವ ಪ್ರಯತ್ನ ಮಾಡಿದೆ. ಅದರೆ ಅದು ಈಡೇರದು. ವಾಲ್ಮೀಕಿ ನಿಗಮ, ಮುಡಾದಲ್ಲಿನ ಹಗರಣಗಳು ಸರ್ಕಾರಕ್ಕೆ ಸಂಬಂಧವೇ ಇಲ್ಲದ ವಿಚಾರಗಳು. ಈಗಾಗಲೇ ಎಸ್‌ಐಟಿ ತನಿಖೆಯನ್ನೂ ಮಾಡುತ್ತಿದೆ. ಆದರೆ ಬಿಜೆಪಿಗೆ ತನಿಖೆಯಲ್ಲಿ ನಂಬಿಕೆಯೇ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಕಂಪ್ಲಿ ಶಾಸಕ ಜೆ .ಎನ್. ಗಣೇಶ್ ಮಾತನಾಡಿ, ‘ಸಿದ್ಧರಾಮಯ್ಯ ಜತೆ ರಾಜ್ಯದ ಜನತೆ ಇದ್ದಾರೆ. ಬಿಜೆಪಿ ಸಂಚು ರೂಪಿಸಿ ರಾಜ್ಯಪಾಲರನ್ನು ಬಳಸಿಕೊಳ್ಳುತ್ತಿದೆ. ಸಿದ್ದರಾಮಯ್ಯ ಅವರನ್ನು ಮುಟ್ಟಿದರೆ ದೇಶವನ್ನೇ ಮುಟ್ಟಿದಂತೆ. ಕೇಂದ್ರ ಸರಕಾರವು ಹಿಟ್ಲರ್ ರೀತಿ ನಡೆಸುಕೊಳ್ಳುತ್ತಿದೆ. ಬಿಜೆಪಿಯವರಿಗೆ ಹಿಂದುಳಿದ ನಾಯಕರೆಂದರೆ ಅಸೂಯೆ. ಅನೇಕ ಹಗರಣಗಳು ಬಿಜೆಪಿಯ ಅವಧಿಯಲ್ಲಿ ನಡೆದಿದೆ. ಅವುಗಳನ್ನು ಪಟ್ಟಿ ಮಾಡಿ ಸಿಎಂ ಅವರಿಗೆ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಅವುಗಳು ಬೆಳಕಿಗೆ ಬರುತ್ತವೆ. ರಾಜ್ಯಪಾಲರು ಕೇಂದ್ರದ ಕೈಗೊಂಬೆಯಾಗಿದ್ದಾರೆ’ ಎಂದು ಆರೋಪಿಸಿದರು.

ನಗರ ಶಾಸಕ ಭರತ್ ರೆಡ್ಡಿ ಮಾತನಾಡಿ, ‘ಸಿಎಂ ಸಿದ್ದರಾಮಯ್ಯ ಅವರ ಒಳ್ಳೆ ನಾಯಕತ್ವವನ್ನು ಕೇಂದ್ರ ಸರ್ಕಾರ ಸಹಿಸುತ್ತಿಲ್ಲ. ನೂರಕ್ಕೆ ನೂರು ಸಿದ್ದರಾಮಯ್ಯ ಮುಂದಿನ ಪೂರ್ಣ ಅವಧಿಗೆ ಮುಖ್ಯಮಂತ್ರಿಯಾಗಿರಲಿದ್ದಾರೆ‘ ಎಂದರು. 

ಪಾಲಿಕೆ ಮೇಯರ್ ಮುಲ್ಲಂಗಿ ನಂದೀಶ್, ಉಪ ಮೇಯರ್ ಡಿ.ಸುಕುಂ, ಸದಸ್ಯ ಪ್ರಭಂಜನ ಕುಮಾರ್, ಮಾಜಿ ಉಪ ಮೇಯರ್ ಜಾನಕಿ, ಗ್ಯಾರಂಟಿ ಜಾರಿ ಸಮಿತಿಯ ಅಧ್ಯಕ್ಷ ಚಿದಾನಂದ, ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ್, ಬುಡ ಅಧ್ಯಕ್ಷ ಜಿ.ಎಸ್.ಆಂಜನೇಯಲು ಸೇರಿ ಹಲವರು ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT