ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತೆಕ್ಕಲಕೋಟೆ: ಮೇವು, ನೀರು ಅರಸಿ ಹಸುಗಳೊಂದಿಗೆ ಗುಳೆ ಬಂದ ಗೋಪಾಲಕರು

Published : 14 ಜನವರಿ 2024, 6:51 IST
Last Updated : 14 ಜನವರಿ 2024, 6:51 IST
ಫಾಲೋ ಮಾಡಿ
Comments

ತೆಕ್ಕಲಕೋಟೆ: ಬರ ಬಂದ ಹಿನ್ನೆಲೆಯಲ್ಲಿ ಕೂಲಿ ಅರಸಿ ಕಾರ್ಮಿಕರು ಗುಳೆ ಹೋಗುವುದು ಸಾಮಾನ್ಯ. ಆದರೆ ಸಿರುಗುಪ್ಪ ತಾಲ್ಲೂಕಿಗೆ ಮೇವು, ನೀರು ಅರಸಿ ಸಾವಿರಾರು ರಾಸುಗಳು ಕೊಪ್ಪಳ ಜಿಲ್ಲೆಯಿಂದ ವಲಸೆ ಬಂದಿವೆ.

ಸಿರುಗುಪ್ಪ ತಾಲ್ಲೂಕಿನ ಎಲ್‌ಎಲ್‌ಸಿ ಕಾಲುವೆ ಮತ್ತು ಇತರೆ ನೀರಿನ ಮೂಲಗಳನ್ನು ಬಳಸಿ ರೈತರು ಭತ್ತ, ಸಜ್ಜೆ, ಜೋಳ ಬೆಳೆದಿದ್ದು, ಕಟಾವು ಭರದಿಂದ ಸಾಗಿ ಮುಕ್ತಾಯದ ಹಂತದಲ್ಲಿದೆ. ಕಟಾವಿನ ನಂತರ ಸಿಗುವ ಮೇವು ಹಾಗೂ ರೈತರು ನೀಡುವ ಹಣಕ್ಕಾಗಿ ಕೊಪ್ಪಳ ಜಿಲ್ಲೆಯ ಹಸುಗಳ ಮಾಲೀಕರು ಕುಟುಂಬ ಸಮೇತ ತಾಲ್ಲೂಕಿನ ದರೂರು, ಕರೂರು, ಚಾನಾಳ, ಬಗ್ಗೂರು, ಎಚ್.ಹೊಸಳ್ಳಿ, ತಾಳೂರು ಸೇರಿದಂತೆ ವಿವಿಧ ಗ್ರಾಮದಲ್ಲಿ ಸಾವಿರಾರು ಹಸುಗಳೊಂದಿಗೆ ಬೀಡು ಬಿಟ್ಟಿದ್ದಾರೆ.

ಕೊಪ್ಪಳ ಜಿಲ್ಲೆಯ ಗಂಗಾವತಿ, ಕನಕಗಿರಿ ಮತ್ತು ಬೂದುಗುಪ್ಪ, ಮಲ್ಲಾಪುರ, ಬಂಕಾಪುರ, ಹಳೆಕುಮ್ಮಟ, ಎಚ್ಆರ್‌ಜಿ ಕ್ಯಾಂಪ್ ಗ್ರಾಮಗಳಿಂದ ವಲಸೆ ಬಂದಿರುವ ದನಗಳಿಗೆ ತಮ್ಮ ಜಿಲ್ಲೆಯ ಸುತ್ತಮುತ್ತ ತಿನ್ನಲು ಹುಲ್ಲು, ನೀರು ಸಿಗದೆ ಇರುವುದರಿಂದ ಸಾಮೂಹಿಕವಾಗಿ 200ರಿಂದ 400 ಹಸುಗಳ ಸುಮಾರು 80ಕ್ಕೂ ಹೆಚ್ಚು ಗುಂಪುಗಳು ಕಾಲ್ನಡಿಗೆಯಲ್ಲಿ ಇಲ್ಲಿಗೆ ಬಂದಿದ್ದಾರೆ.

ಹಗರಿನದಿ ಹಾಗೂ ಸುತ್ತಲಿನ ಹಳ್ಳಕೊಳ್ಳಗಳಲ್ಲಿ ನೀರು ಅಲ್ಲಲ್ಲಿ ಸಂಗ್ರಹ ಇರುವುದರಿಂದ ಹಸುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಅನುಕೂಲವಿದೆ. ಅಲ್ಲದೆ ಭತ್ತ ಕೊಯ್ಲು ಆಗಿರುವ ಗದ್ದೆಗಳಲ್ಲಿ ಹಸುಗಳಿಗೆ ಹಸಿಮೇವು ಸಿಗುತ್ತದೆ ಎನ್ನುವ ಕಾರಣಕ್ಕೆ ವಲಸೆ ಬಂದಿರುವುದಾಗಿ ಹಸುಗಳ ಮಾಲೀಕ ಮಲ್ಲಾಪುರ ಮಂಜಪ್ಪ ತಿಳಿಸಿದರು.

ರೈತರ ಹೊಲಗಳಲ್ಲಿ ಒಂದು ರಾತ್ರಿ ಹಸುಗಳನ್ನು ಬಿಡಲು ರೈತರಿಂದ ₹5 ಸಾವಿರ ತೆಗೆದುಕೊಳ್ಳುತ್ತಿದ್ದು, ಹಸುಗಳು ರಾತ್ರಿ ಹೊಲದಲ್ಲಿ ಹಾಕುವ ಗಂಜಲ ಮತ್ತು ಸಗಣಿಯಿಂದ ಭೂಮಿಯ ಫಲವತ್ತತೆ ಹೆಚ್ಚುತ್ತದೆ. ಇದರಿಂದಾಗಿ ತಾಲ್ಲೂಕಿನ ರೈತರು ತಮ್ಮ ಹೊಲಗಳಲ್ಲಿ ದನಗಳನ್ನು ತರುಬಿಸುತ್ತಿದ್ದಾರೆ. ಹಸುಗಳ ಮಾಲೀಕರಿಗೆ ಜೀವನೋಪಾಯಕ್ಕೆ ಒಂದಷ್ಟು ಹಣ ದೊರೆಯುತ್ತದೆ.

ನಮ್ಮಲ್ಲಿ ಮೇವು ನೀರಿನ ಕೊರತೆ ಹೆಚ್ಚು. ಅದರಲ್ಲೂ ಈ ಬಾರಿ ಬರಗಾಲದಿಂದಾಗಿ ಬೇಗ ಇಲ್ಲಿಗೆ ವಲಸೆ ಬಂದಿದ್ದೇವೆ ಎನ್ನುತ್ತಾರೆ ಹಸುಗಳ ಮಾಲೀಕರಾದ ಬಾಬಣ್ಣ, ಬಾಗಪ್ಪ, ನಾಗಪ್ಪ ಬಂಡೇರ, ಪಾಮಪ್ಪ ಬಂಡೇರ, ಮುದುಕಪ್ಪ ಮೂನೂರು.

ತೆಕ್ಕಲಕೋಟೆ ಸಮೀಪದ ದರೂರು ಕ್ಯಾಂಪ್ ಚಾನಾಳ್ ಗ್ರಾಮಗಳಲ್ಲಿ ಹಸುಗಳೊಂದಿಗೆ ಬೀಡು ಬಿಟ್ಟಿರುವ ಗೋಪಾಲಕರು
ತೆಕ್ಕಲಕೋಟೆ ಸಮೀಪದ ದರೂರು ಕ್ಯಾಂಪ್ ಚಾನಾಳ್ ಗ್ರಾಮಗಳಲ್ಲಿ ಹಸುಗಳೊಂದಿಗೆ ಬೀಡು ಬಿಟ್ಟಿರುವ ಗೋಪಾಲಕರು
ತೆಕ್ಕಲಕೋಟೆ ಸಮೀಪದ ದರೂರು ಕ್ಯಾಂಪ್ ಚಾನಾಳ್ ಗ್ರಾಮಗಳಲ್ಲಿ ಹಸುಗಳೊಂದಿಗೆ ಬೀಡು ಬಿಟ್ಟಿರುವ ಗೋಪಾಲಕರು
ತೆಕ್ಕಲಕೋಟೆ ಸಮೀಪದ ದರೂರು ಕ್ಯಾಂಪ್ ಚಾನಾಳ್ ಗ್ರಾಮಗಳಲ್ಲಿ ಹಸುಗಳೊಂದಿಗೆ ಬೀಡು ಬಿಟ್ಟಿರುವ ಗೋಪಾಲಕರು
ನಮ್ಮ ತಾಲ್ಲೂಕಿನಲ್ಲಿ ದನಗಳ ಸಂಖ್ಯೆ ಕಡಿಮೆ ಇದೆ. ವಲಸೆ ಬಂದ ಗೋವುಗಳನ್ನು ಹೊಲದಲ್ಲಿ ತರುಬಿಸುವುದರಿಂದ ಸಾವಯವ ಕೃಷಿಗೆ ಉತ್ತಮ ಇಳುವರಿ ಬರಲು ಅನುಕೂಲವಾಗುತ್ತದೆ
–ನಾಗಪ್ಪ ದರೂರು ಗ್ರಾಮದ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT