ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ | ದೇವದಾರಿಗಿಲ್ಲ ‘ದಾರಿ’: ಜಿಲ್ಲೆಯಲ್ಲಿ ಹರ್ಷ

ಬಳ್ಳಾರಿಯಲ್ಲಿನ ಸೀಮಿತ ಅರಣ್ಯ ಪ್ರದೇಶದ ಉಳಿವಿನ ಚರ್ಚೆ ಮುನ್ನೆಲೆಗೆ
Published 24 ಜೂನ್ 2024, 4:50 IST
Last Updated 24 ಜೂನ್ 2024, 4:50 IST
ಅಕ್ಷರ ಗಾತ್ರ

ಬಳ್ಳಾರಿ: ಸಂಡೂರು ತಾಲ್ಲೂಕಿನ ಸ್ವಾಮಿಮಲೈ ಪ್ರದೇಶದ ದೇವದಾರಿ ಶ್ರೇಣಿಯಲ್ಲಿ ಕುದುರೆಮುಖ ಐರನ್‌ ಓರ್‌ ಕಂಪನಿಯ (ಕೆಐಒಸಿಎಲ್‌) ಗಣಿಗಾರಿಕೆಗೆ ಅರಣ್ಯ ಭೂಮಿಯನ್ನು ನೀಡದಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಆದೇಶ ನೀಡಿರುವುದಕ್ಕೆ ಪರಿಸರ ಪ್ರೇಮಿಗಳು, ಹೋರಾಟಗಾರರು ಹರ್ಷ ವ್ಯಕ್ತಪಡಿಸಿದ್ದಾರೆ. ಇದರ ಜತೆಗೇ, ಪರಿಸರದ ಮೇಲಿನ ದಾಳಿಗಳನ್ನು ಜನ ಹೋರಾಟದ ಮೂಲಕ ಹಿಮ್ಮೆಟ್ಟಿಸಬೇಕು ಎಂಬ ಅಭಿಪ್ರಾಯವೂ ಕೇಳಿ ಬಂದಿದೆ. 

‘ಪ್ರಕೃತಿ ಮಾನವರದ್ದು ಮಾತ್ರವೇ ಅಲ್ಲ. ಎಲ್ಲ ಜೀವಿಗಳಿಗೂ ಸೇರಿದ ಸ್ವತ್ತು. ಅದನ್ನು ಉಳಿಸಿಕೊಳ್ಳಬೇಕು. ಅಭಿವೃದ್ಧಿಯ ಹೆಸರಲ್ಲಿ ದೋಚಬಾರದು’ ಎಂಬ ಆಗ್ರಹಗಳೂ ಕೇಳಿ ಬಂದಿವೆ. 

ಸದ್ಯಕ್ಕೆ ಪಾರಾಗಿದ್ದೇವೆ: ‘ಬಯಲುಸೀಮೆಯ, ಬರದ ನಾಡಿನ ಬಳ್ಳಾರಿಯಲ್ಲಿರುವ ಸಂಡೂರಿನ ಕಿರು ಅರಣ್ಯ ಪ್ರದೇಶ ಅತ್ಯಂತ ವಿಶಿಷ್ಟವಾದದ್ದು. ಇದು ಪಶ್ಚಿಮ ಘಟ್ಟದಂಥ ರಚನೆಯನ್ನೇ ಹೊಂದಿದೆ. ಇಲ್ಲಿನ ಗಣಿಗಾರಿಕೆಗಳಿಂದ ಈಗಾಗಲೇ ಸಾವಿರಾರು ಎಕರೆ ಪ್ರದೇಶದ ಅರಣ್ಯ ನಾಶವಾಗಿದೆ. ಜೀವವೈವಿಧ್ಯಕ್ಕೂ ಪೆಟ್ಟು ಬಿದ್ದಿದೆ. ವನ್ಯಜೀವಿ ಸಂಘರ್ಷ ತಾರಕಕ್ಕೇರಿದೆ. ಈ ಮಧ್ಯೆ ಕೆಐಒಸಿಎಲ್‌ ಗಣಿಗಾರಿಕೆ ನಡೆಸಿದ್ದರೆ ಮತ್ತೊಂದಷ್ಟು ಸಾವಿರ ಪ್ರದೇಶದಲ್ಲಿ ಅರಣ್ಯ ನಾಶವಾಗುತ್ತಿತ್ತು. ಜೀವವೈವಿಧ್ಯತೆಗೆ ಮತ್ತೆ ಪೆಟ್ಟು ಬೀಳುತ್ತಿತ್ತು. ವನ್ಯಜೀವಿ ಸಂಘರ್ಷ ಮತ್ತಷ್ಟು ಹೆಚ್ಚಾಗುತ್ತಿತ್ತು. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲೇ ಸರ್ಕಾರ ಎಚ್ಚೆತ್ತುಕೊಂಡಿದೆ. ಆಪತ್ತಿನಿಂದ ಸದ್ಯ ಪಾರಾಗಿದ್ದೇವೆ’ ಎಂದು ಹೋರಾಟಗಾರರು ಹೇಳಿದ್ದಾರೆ.

ದೇವದಾರಿ ಎಂಬ ತೂಗುಗತ್ತಿ:

‘ಕೆಐಒಸಿಎಲ್‌ನ ದೇವದಾರಿ ಗಣಿಗಾರಿಕೆಗೆ ಸದ್ಯಕ್ಕೆ ತಡೆ ಬಿದ್ದಿರಬಹುದು. ಆದರೆ, ಇದೊಂದು ತೂಗುಗತ್ತಿ. ಯಾವಾಗ ಬೇಕಾದರೂ ಸಂಡೂರಿನ ಅರಣ್ಯದ ಮೇಲೆ ಈ ಕತ್ತಿ ಪ್ರಹಾರ ನಡೆಸಬಹುದು’ ಎಂಬ ಆತಂಕವೂ ಹೋರಾಟಗಾರರಿಂದ ವ್ಯಕ್ತವಾಗಿದೆ. 

‘ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ ಅವರು ಸಹಿ ಹಾಕಿದ ಕಾರಣಕ್ಕೆ ರಾಜ್ಯ ಸರ್ಕಾರ ಅರಣ್ಯ ಭೂಮಿ ಮಂಜೂರು ಮಾಡದಿರಲು ನಿರ್ಧರಿಸಿದೆ ಎಂಬಂತೆ ಈ ಪ್ರಕರಣ ಸದ್ಯ ಬಿಂಬಿತವಾಗುತ್ತಿದೆ. ಆದರೆ, ಹೋರಾಟಗಾರರ ಒತ್ತಾಯಕ್ಕೆ ಮಣಿದು ಸರ್ಕಾರ ಈ ನಿರ್ಧಾರಕ್ಕೆ ಬಂದಿತು. ಒಂದು ವೇಳೆ ಇದು ರಾಜಕೀಯ ಸ್ವರೂಪ ಪಡೆದು, ಮುಂದಿನ ಸರ್ಕಾರಗಳು ಕೆಐಒಸಿಎಲ್‌ಗೆ ಅರಣ್ಯ ಭೂಮಿ ಹಸ್ತಾಂತರ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಆದ್ದರಿಂದ ಜಿಲ್ಲೆಯ ಜನರು ಎಚ್ಚರದಿಂದ ಇರಬೇಕು. ಯಾವುದೇ ಹಂತದಲ್ಲೂ ಪರಿಸರ ಹಾನಿಯಾಗಲು ಬಿಡಬಾರದು’ ಎನ್ನುತ್ತಾರೆ ಹೋರಾಟಗಾರ ಶ್ರೀಶೈಲ ಆಲದಹಳ್ಳಿ.  

ವಿಸ್ತೃತ ವರದಿ:

ಕೆಐಒಸಿಎಲ್‌ನ ಗಣಿ ಕಾರ್ಯಾಚರಣೆಗೆ ಸಂಬಂಧಿಸಿದ ಕಡತಕ್ಕೆ ಕೇಂದ್ರ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್‌.ಡಿ.ಕುಮಾರಸ್ವಾಮಿ ಜೂನ್‌ 13ರಂದು ಸಹಿ ಹಾಕಿದ್ದರು. ಆದರೆ, ಗಣಿಗಾರಿಕೆಗೆ ಅನುಮತಿ ಪಡೆಯುವಲ್ಲಿ ಹಲವು ಹಂತಗಳಲ್ಲಿ ಆಗಿದ್ದ ಲೋಪದೋಷಗಳ ಕುರಿತು ‘ಪ್ರಜಾವಾಣಿ’ ಸರಣಿ ವರದಿಗಳನ್ನು ಪ್ರಕಟಿಸಿತ್ತು.

ಬಳ್ಳಾರಿಯ ಅಂದಿನ ಅರಣ್ಯ ಉಪ ಸಂರಕ್ಷಣಾಧಿಕಾರಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಹೆಚ್ಚುವರಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳು ಗಣಿಗಾರಿಕೆಗೆ ವಿರೋಧ ವ್ಯಕ್ತಪಡಿಸಿದ್ದರ ಬಗ್ಗೆ ಮತ್ತು ಅಧಿಕಾರಿಗಳ ವರದಿಯನ್ನು ಮರೆಮಾಚಿ ರಾಜ್ಯ ಸರ್ಕಾರ, ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರ ಬಗ್ಗೆ, ಆಕ್ಷೇಪಗಳ ನಡುವೆಯೂ ಕೆಐಒಸಿಎಲ್‌ನ ಗಣಿಗಾರಿಕೆಗೆ ಸ್ಟೇಜ್‌–1 ಮತ್ತು ಸ್ಟೇಜ್‌ –2 ಅನುಮತಿ ಸಿಕ್ಕಿರುವ ಬಗ್ಗೆ ಮತ್ತು ಗಣಿಗಾರಿಕೆ ವಿರೋಧಿಸಿ 2021ರಲ್ಲಿ ರಿಟ್‌ ಅರ್ಜಿ ಸಲ್ಲಿಕೆಯಾಗಿರುವ ಬಗ್ಗೆ ವರದಿಗಳ ಮೂಲಕ ಸರ್ಕಾರದ ಗಮನ ಸೆಳೆಯಲಾಗಿತ್ತು. 

ಸರಣಿ ವರದಿಗಳಿಂದ ಎಚ್ಚೆತ್ತ ರಾಜ್ಯ ಸರ್ಕಾರ ಕೆಐಒಸಿಎಲ್‌ಗೆ ಅರಣ್ಯ ತೀರುವಳಿ ಪತ್ರ ನೀಡುವುದನ್ನು ತಡೆ ಹಿಡಿದಿದೆ. ಜತೆಗೆ, ಕಂಪನಿಯು ಕುದುರೆಮುಖದಲ್ಲಿ ನಡೆಸಿದ್ದ ಅರಣ್ಯ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರದ ಉನ್ನತಾಧಿಕಾರ ಸಮಿತಿ (ಸಿಇಸಿ) ಶಿಫಾರಸುಗಳನ್ನು ಪಾಲಿಸುವ ವರೆಗೆ ಅರಣ್ಯ ಭೂಮಿ ಮಂಜೂರು ಮಾಡದಂತೆ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರ ಗಣಿಗಾರಿಕೆಗೆ ಭೂಮಿ ನೀಡದಿರಲು ನಿರ್ಧರಿಸಿರುವುದು ಉತ್ತಮ ಬೆಳವಣಿಗೆ. ಆದರೂ ಮುಂದೊಂದು ದಿನ ಬೇರೆ ಸರ್ಕಾರ ಬಂದು ಗಣಿಗಾರಿಕೆಗೆ ಮತ್ತೆ ಅನುಮತಿ ನೀಡುವ ಸಾಧ್ಯತೆಗಳಿವೆ. ಯಾವುದೇ ಸರ್ಕಾರ ಬಂದರೂ ಪರಿಸರ ಕಾಳಜಿ ಇರಬೇಕು
ಸಂತೋಶ್‌ ಮಾರ್ಟೀನ್‌ ಪರಿಸರ ಹೋರಾಟಗಾರ ಬಳ್ಳಾರಿ
ಭೂಮಿ ಮನುಷ್ಯನೊಬ್ಬನ ಸ್ವತ್ತಲ್ಲ. ಸಕಲ ಜೀವರಾಶಿಗಳಿಗೂ ಸೇರಿದ್ದು. ಬರಪೀಡಿತ ಬಳ್ಳಾರಿಯಲ್ಲಿ ಸಂಡೂರಿನಂಥ ಅರಣ್ಯ ಇರುವುದು ನಮ್ಮ ಅದೃಷ್ಟ. ಅದನ್ನು ಉಳಿಸಿಕೊಳ್ಳಬೇಕೆ ಹೊರತು ದೋಚಬಾರದು. ಈ ನಿಟ್ಟಿನಲ್ಲಿ ಸರ್ಕಾರಗಳು ಯೋಚಿಸಬೇಕಿತ್ತು. ಆದರೆ ಅದು ಆಗದೇ ಇರುವುದು ಬೇಸರದ ಸಂಗತಿ. ಇಂಥವುಗಳ ವಿರುದ್ಧ ಜನ ಹೋರಾಡಬೇಕು
ಮಲ್ಲಿಕಾರ್ಜುನ ರೆಡ್ಡಿ ವಕೀಲರು ಬಳ್ಳಾರಿ 
ಸಂಡೂರಿನ ಪರಿಸರ ಕಾಪಾಡಲು ನಾಡಿನ ಸಂಪತ್ತು ಉಳಿಸುವ ನಿಟ್ಟಿನಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಉತ್ತಮ ಕೆಲಸ ಮಾಡಿದ್ದಾರೆ. ಇಲ್ಲಿನ ಲಕ್ಷಾಂತರ ಮರಗಳ ಮಾರಣ ಹೋಮಕ್ಕೆ ಕಾರಣವಾಗುವ ಗಣಿಗಾರಿಕೆಗೆ ಅವಕಾಶ ನೀಡಬಾರದು ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ವಹಿಸಬೇಕು ಎಂಬುದೇ ಜನರ ಆಶಯ. ಅದರಂತೆ ಸರ್ಕಾರ ನಡೆದುಕೊಂಡಿದೆ
ವೆಂಕಟೇಶ್‌ ಹೆಗಡೆ ಕಾಂಗ್ರೆಸ್‌ ಮುಖಂಡ ಬಳ್ಳಾರಿ 

ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆ

ದೇವದಾರಿ ಶ್ರೇಣಿಯಲ್ಲಿ ಗಣಿಗಾರಿಕೆ ನಡೆಸಲು ಅರಣ್ಯ ಭೂಮಿ ಹಸ್ತಾಂತರ ಮಾಡದಿರುವ ಸರ್ಕಾರದ ನಿರ್ಧಾರದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ.  ‘ಅರಣ್ಯ ಸಚಿವರಾಗಿ ಈಶ್ವರ ಖಂಡ್ರೆ ಉತ್ತಮ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರ ನಡೆ ಪ್ರಶಂಸನೀಯ‘ ಎಂದು ಸಂದೀಪ್‌ ಹೆಗ್ಡೆ (@SandeepHegde) ಎಂಬುವವರು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ. ‘ಸ್ಥಳೀಯರ ಧ್ವನಿಯಾಗಿದ್ದಕ್ಕಾಗಿ ಧನ್ಯವಾದಗಳು’ ಎಂದು ಎಕ್ಸ್‌ ಖಾತೆ(@wikki6)ಯೊಂದರಲ್ಲಿ ಪೋಸ್ಟ್‌ ಮಾಡಲಾಗಿದೆ. ಸಂಡೂರಿನ ಅರಣ್ಯ ಉಳಿಸಲು #SaveSandurForest ಅಭಿಯಾನದಲ್ಲಿ ಪಾಲ್ಗೊಂಡ ಎಲ್ಲರಿಗೂ ಧನ್ಯವಾದ ಎಂದು @TweetzBallari ಎಂಬ ಖಾತೆಯಲ್ಲಿ ಪೋಸ್ಟ್‌ ಮಾಡಲಾಗಿದೆ. ಜಿಲ್ಲೆಯ ಬೆಳವಣಿಗೆಗಳ ಬಗ್ಗೆ ‘ಬಳ್ಳಾರಿ ಟ್ವೀಟ್ಸ್‌’ ಖಾತೆ ಸದಾ ಜನರಿಗೆ ಮಾಹಿತಿ ನೀಡುತ್ತಿದೆ. ‘ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಕೊನೆಗೂ ಸಂಡೂರು ಅರಣ್ಯದಲ್ಲಿನ ಗಣಿಗಾರಿಕೆಗೆ ಅನುಮತಿ ನಿರಾಕರಿಸಿದ್ದಾರೆ’ ಎಂದು ಶರಣ್‌ (@shar_567) ಎಂಬುವವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT