ಮಂಗಳವಾರ, ಮಾರ್ಚ್ 21, 2023
27 °C
ವಾಡಿಕೆಗಿಂತ ಅಧಿಕ ಮಳೆ; ತಾಲ್ಲೂಕಿನಲ್ಲಿ 135.78 ಹೆಕ್ಟೇರ್ ಬೆಳೆ ನಷ್ಟ

ಹಗರಿಬೊಮ್ಮನಹಳ್ಳಿ: ಎಚ್‌.ಬಿ.ಹಳ್ಳಿಯಲ್ಲಿ 2 ಸಾವು, 110 ಮನೆ ಹಾನಿ

ಸಿ.ಶಿವಾನಂದ­­ Updated:

ಅಕ್ಷರ ಗಾತ್ರ : | |

Prajavani

ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ) : ತಾಲ್ಲೂಕಿನಲ್ಲಿ ಈ ವರ್ಷ ವಾಡಿಕೆಗಿಂತ ಅಧಿಕ ಮಳೆಯಾಗಿದ್ದು, ಸಾವು ನೋವಿಗೆ ಕಾರಣವಾಗಿದೆ.

ತಾಲ್ಲೂಕಿನ ಬಲ್ಲಾಹುಣ್ಸಿಯಲ್ಲಿ ಗಾಳಿ ಮಳೆಗೆ ನಿರ್ಮಾಣದ ಹಂತದಲ್ಲಿದ್ದ ರೇಷ್ಮೆ ಮನೆ ಕುಸಿದು ಇಬ್ಬರು ಕೂಲಿಕಾರ್ಮಿಕರು ಮೃತಪಟ್ಟಿದ್ದರು. ಗುಡುಗು ಸಿಡಿಲಿನಿಂದಾಗಿ ಎರಡು ಜಾನುವಾರುಗಳು ಸಾವನ್ನಪ್ಪಿವೆ.

ವಾಡಿಕೆ 417.6 ಮಿ.ಮೀ ಮಳೆಯಾಗುತ್ತದೆ. ಆದರೆ, 539.2 ಮಿ.ಮೀ ಅಧಿಕ ಮಳೆಯಾಗಿದೆ. ರೈತರ ಜೀವನಾಡಿ ಮಾಲವಿ ಜಲಾಶಯಕ್ಕೆ ಅಪಾರ ನೀರು ಬಂದಿದ್ದು, ಅದಕ್ಕೆ ಜೀವ ಕಳೆ ಬಂದಿದೆ. ಮಗಿಮಾವಿನಹಳ್ಳಿಯ ದೊಡ್ಡಕೆರೆ, ಬನ್ನಿಕಲ್ಲು ಕೆರೆ, ಅಂಕಸಮುದ್ರ ತುಂಬಿದೆ. ಹಂಪಾಪಟ್ಟಣದ ತಿಗಳನ ಕೆರೆ, ಭೀಮನಕೆರೆ, ಓಬಳಾಪುರ ಕೆರೆ, ಉಪ್ಪಾರಗಟ್ಟಿ ಕೆರೆ ಸೇರಿದಂತೆ ತಾಲ್ಲೂಕಿನಲ್ಲಿರುವ ಎಲ್ಲ ಕೆರೆಗಳು ಮೈದುಂಬಿಕೊಂಡಿವೆ. ಕೃಷಿ ಹೊಂಡಗಳು, ಚೆಕ್ ಡ್ಯಾಂಗಳು ಭರ್ತಿಯಾಗಿವೆ. ಕೊಳವೆಬಾವಿಗಳಗಳಲ್ಲಿ ಅಂತರ್ಜಲ ಹೆಚ್ಚಾಗಿದೆ.

ನಷ್ಟದ ಪ್ರಮಾಣ:

ಅತಿವೃಷ್ಟಿಗೆ ತಾಲ್ಲೂಕಿನಲ್ಲಿ ಒಟ್ಟು 110 ಮನೆಗಳು, 306 ವಿದ್ಯುತ್ ಕಂಬಗಳು, 20 ವಿದ್ಯುತ್ ಪರಿವರ್ತಕಗಳಿಗೆ ಹಾನಿಯಾಗಿದೆ. 65,864 ಹೆಕ್ಟೇರ್ ಸಾಗುವಳಿ ಕ್ಷೇತ್ರವಿದ್ದು, ಮಳೆಯಾಶ್ರಿತ 49,044, ನೀರಾವರಿ 16,820 ಹೆಕ್ಟೇರ್ ಪ್ರದೇಶವಿದೆ.

ಭತ್ತ, ಮೆಕ್ಕೆಜೋಳ, ಹೈಬ್ರಿಡ್ ಜೋಳ, ಸಜ್ಜೆ, ಸೂರ್ಯಕಾಂತಿ, ಶೇಂಗಾ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾಗಿದ್ದು, ಉತ್ತಮ ಇಳುವರಿ ನಿರೀಕ್ಷೆ ಇದೆ. 68.24 ಹೆಕ್ಟೇರ್ ಕೃಷಿ ಜಮೀನುಗಳಲ್ಲಿನ ಭತ್ತ ಮತ್ತು ಮೆಕ್ಕೆಜೋಳ ಬೆಳೆಗಳು, 67.54 ಹೆಕ್ಟೇರ್ ತೋಟಗಾರಿಕೆ ಬೆಳೆಗಳಾದ ಈರುಳ್ಳಿ, ಮೆಣಸಿನಕಾಯಿ, ದಾಳಿಂಬೆ ನಷ್ಟವಾಗಿದೆ. ಮೃತ ಇಬ್ಬರು ಕೂಲಿ ಕಾರ್ಮಿಕರ ಕುಟುಂಬದವರಿಗೆ ತಲಾ ₹5 ಲಕ್ಷ ಪರಿಹಾರ ನೀಡಲಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.