ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಗರ ನಕ್ಸಲ’ರಿಂದ ಭಾರತ ಚೂರು..ಚೂರು: ಚಕ್ರವರ್ತಿ ಸೂಲಿಬೆಲೆ ಆರೋಪ

ಯುವ ಬ್ರಿಗೇಡ್‌ ಮಾರ್ಗದರ್ಶಕ
Last Updated 8 ಅಕ್ಟೋಬರ್ 2018, 4:11 IST
ಅಕ್ಷರ ಗಾತ್ರ

ಹೊಸಪೇಟೆ: ‘ಭಾರತೀಯತೆ ಬಗ್ಗೆ ದೇಶದ ಜನರಲ್ಲಿ ಈಗ ಜಾಗೃತಿ ಉಂಟಾಗುತ್ತಿದೆ. ಆದರೆ, ‘ನಗರ ನಕ್ಸಲರು’ ಅದನ್ನು ಮರೆಮಾಚುವ ಕೆಲಸ ಮಾಡುತ್ತಿದ್ದಾರೆ’ ಎಂದು ಯುವ ಬ್ರಿಗೇಡ್‌ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಆರೋಪಿಸಿದರು.

ಸ್ವಾಮಿ ವಿವೇಕಾನಂದರು ಷಿಕಾಗೊದಲ್ಲಿ 125 ವರ್ಷಗಳ ಹಿಂದೆ ಮಾಡಿದ ಭಾಷಣದ ಸವಿನೆನಪಿಗಾಗಿ ಯುವ ಬ್ರಿಗೇಡ್‌ ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾನದಿಂದ ಭಾನುವಾರ ಸಂಜೆ ನಗರದಲ್ಲಿ ಹಮ್ಮಿಕೊಂಡಿದ್ದ ‘ಮತ್ತೊಮ್ಮೆ ದಿಗ್ವಿಜಯ ಯಾತ್ರೆ’ಯಲ್ಲಿ ಪಾಲ್ಗೊಂಡು ಮಾತನಾಡಿದರು.

‘ನಗರ ನಕ್ಸಲರು ಭಾರತವನ್ನು ಒಳಗಿನಿಂದ ಚೂರು ಚೂರು ಮಾಡುತ್ತಿದ್ದಾರೆ. ಅವರು ಸಂತರು, ಅಧಿಕಾರಿಗಳು, ಸರ್ಕಾರಿ ನೌಕರರು, ಪ್ರಾಧ್ಯಾಪಕರು ಸೇರಿದಂತೆ ಹಲವು ವಲಯಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಹಿಮ್ಮೆಟ್ಟಿಸುವ ಕೆಲಸವಾಗಬೇಕು. ಭಾರತೀಯತೆ ಜಾಗೃತಗೊಳಿಸಬೇಕು. ಸ್ವಾಮಿ ವಿವೇಕಾನಂದರನ್ನು ನಮ್ಮಲ್ಲಿ ಬರಮಾಡಿಕೊಂಡು ಹೊಸ ಭಾರತವನ್ನು ಕಟ್ಟುವ ಕೆಲಸ ಮಾಡಬೇಕು’ ಎಂದು ಹೇಳಿದರು.

‘ವಿವೇಕಾನಂದರು ಮೇಲ್ನೋಟಕ್ಕೆ ಒಬ್ಬ ಸನ್ಯಾಸಿ, ಸಂತರಾಗಿದ್ದರು. ನಿಜ ಅರ್ಥದಲ್ಲಿ ಅವರೊಬ್ಬ ಅದ್ಭುತ ಯೋಧ ಸನ್ಯಾಸಿಯಾಗಿದ್ದರು. ಭಾರತ, ಹಿಂದೂ ಧರ್ಮದ ವಿರುದ್ಧ ಯಾರಾದರೂ ಮಾತನಾಡಿದರೆ ಸಹಿಸಿಕೊಳ್ಳುತ್ತಿರಲಿಲ್ಲ. ಸ್ವಾಭಿಮಾನಿ ಭಾರತೀಯ ಜಗತ್ತು ಆಳುತ್ತಾನೆ ಎಂದು ವಿವೇಕರು ಹೇಳಿದ್ದರು. ಆ ಸ್ವಾಭಿಮಾನ ಈಗ ಎದ್ದು ಕಾಣುತ್ತಿದೆ’ ಎಂದರು.

‘ವಿವೇಕಾನಂದರ ಅದ್ಭುತ ವಾಣಿಗೆ ಮರುಳಾಗಿ ಇಂಗ್ಲೆಂಡಿನ ಮಾರ್ಗರೆಟ್‌ ನೊಬೆಲ್‌ ಅವರು ಭಾರತಕ್ಕೆ ಬಂದು ಅವರ ಶಿಷ್ಯರಾಗಿದ್ದರು. ನಿವೇದಿತಾ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದ ಅವರು, ಸ್ವಾತಂತ್ರ್ಯ ಹೋರಾಟಗಾರರಿಗೆ ಮಾರ್ಗದರ್ಶನ, ಹಣಕಾಸಿನ ನೆರವು, ಸಂಕಷ್ಟದಲ್ಲಿರುವವರ ಸಹಾಯಕ್ಕೆ ಧಾವಿಸುತ್ತಿದ್ದರು. ಆದರೆ, ಅವರ ಬಗ್ಗೆ ನಮ್ಮ ಪಠ್ಯದಲ್ಲಾಗಲಿ, ಧಾರಾವಾಹಿಗಳಲ್ಲಾಗಲಿ ಉಲ್ಲೇಖ ಇಲ್ಲದಿರುವುದು ದುರದೃಷ್ಟಕರ ಸಂಗತಿ’ ಎಂದು ಹೇಳಿದರು.

‘125 ವರ್ಷಗಳ ಹಿಂದೆ ವಿವೇಕಾನಂದರು ಷಿಕಾಗೊದಲ್ಲಿ ಮಾಡಿದ ಮೂರುವರೆ ನಿಮಿಷಗಳ ಭಾಷಣ ಇಡೀ ಜಗತ್ತು ಭಾರತವನ್ನು ನೋಡುವ ದೃಷ್ಟಿಕೋನವನ್ನೇ ಬದಲಿಸಿತು. ಜತೆಗೆ ಭಾರತ ತನ್ನತನವನ್ನು ನೋಡುವ, ತನ್ನನ್ನು ಹಿಂದೂ ಎಂದು ಹೇಳಿಕೊಳ್ಳುವ ಮನಸ್ಥಿತಿ ಸೃಷ್ಟಿ ಮಾಡಿತು’ ಎಂದು ತಿಳಿಸಿದರು.

ಹಂಸಾಂಬ ಆಶ್ರಮದ ಮಾತಾ ಪ್ರಮೋದಾಮಯಿ ಮಾತನಾಡಿ, ‘ನಮ್ಮನ್ನು ಆಳುವವರಿಗೆ ಧರ್ಮ, ಸಂಸ್ಕೃತಿಯ ಉಪದೇಶ ಮಾಡಿ ಭಾರತದ ಹಿರಿಮೆ, ಗರಿಮೆಯನ್ನು ಪರಿಚಯಿಸಿದ ಕೀರ್ತಿ ವಿವೇಕಾನಂದರಿಗೆ ಸಲ್ಲುತ್ತದೆ. ಯುವಜನಾಂಗ ವಿವೇಕಾನಂದರನ್ನು ಆದರ್ಶವಾಗಿ ಇಟ್ಟುಕೊಂಡು ಅವರು ಹಾಕಿಕೊಟ್ಟ ದಾರಿಯಲ್ಲಿ ಮುನ್ನಡೆಯಬೇಕು’ ಎಂದು ಕಿವಿಮಾತು ಹೇಳಿದರು.

ಗೀತಾಶ್ರಮದ ಸುಬೇಧಾನಂದ ಸ್ವಾಮೀಜಿ, ಹೂವಿನಹಡಗಲಿಯ ಅಭಿನವ ಹಾಲಶ್ರೀ ಸ್ವಾಮೀಜಿ ಇದ್ದರು. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಮೆರವಣಿಗೆಗೆ ಪೊಲೀಸರು ಅವಕಾಶ ಕಲ್ಪಿಸಲಿಲ್ಲ. ಕಾರ್ಯಕ್ರಮ ಆಯೋಜಿಸಿದ್ದ ಮುನ್ಸಿಪಲ್‌ ಮೈದಾನದ ಬಳಿಯಿಂದ ವೇದಿಕೆಯ ವರೆಗೆ ಸಾಂಕೇತಿಕವಾಗಿ ಸ್ವಾಮಿ ವಿವೇಕಾನಂದರು ಹಾಗೂ ನಿವೇದಿತಾ ಅವರ ಪ್ರತಿಮೆಯಿದ್ದ ರಥದ ಮೆರವಣಿಗೆ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT