ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸಪೇಟೆ: ವೈದ್ಯ ಗಣೇಶನಿಂದ ಡೆಂಗಿ ಅರಿವು!

ಮನಸೂರೆಗೊಂಡ ವಿವಿಧ ಮಾದರಿಯ ಗಣಪತಿ ಮೂರ್ತಿಗಳು
Published : 9 ಸೆಪ್ಟೆಂಬರ್ 2024, 5:16 IST
Last Updated : 9 ಸೆಪ್ಟೆಂಬರ್ 2024, 5:16 IST
ಫಾಲೋ ಮಾಡಿ
Comments

ಹೊಸಪೇಟೆ (ವಿಜಯನಗರ): ಡೆಂಗಿ ತಡೆಗೆ ಅರಿವು ಮೂಡಿಸಲು ಸ್ಟೆತೋಸ್ಕೋಪ್‌ ಹಿಡಿದ ಡಾಕ್ಟರ್‌ ಗಣೇಶ, 18 ಅಡಿ ಎತ್ತರದ ಬೃಹತ್ ವಿನಾಯಕ, ‘ಓಂ ಗಂ ಗಣಪತಯೇ’ ಎಂದು ಮೈಮೇಲೆ ಬರೆಸಿಕೊಂಡ ಮೂಷಕ ವಾಹನ, ರಾಘವೇಂದ್ರ ಸ್ವಾಮಿ ಅವತಾರದ ಲಂಬೋಧರ, ಧಾನ್ಯಗಳ ಮಹತ್ವ ತಿಳಿಸುವ ಗಜಕರ್ಣ... ನಗರ ಮತ್ತು ಜಿಲ್ಲೆಯ ವಿವಿಧೆಡೆ ಸಾರ್ವಜನಿಕ ಗಣೇಶೋತ್ಸವದ ಪೆಂಡಾಲ್‌ಗಳಲ್ಲಿ ಇಂತಹ ವಿಶಿಷ್ಟ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.

ಶನಿವಾರ ಆಗಾಗ ಸುರಿಯುತ್ತಿದ್ದ ಮಳೆಯ ನಡುವೆಯೂ ಸಂಭ್ರಮ ಮುಗಿಲು ಮುಟ್ಟಿತ್ತು.  ಜಾತಿ, ಧರ್ಮ ಮೀರಿ ಜನರು ಸೌಹಾರ್ದದಿಂದ ಹಬ್ಬ ಆಚರಿಸಿದರು.

ಪಟೇಲ್‌ ನಗರ 5ನೇ ಕ್ರಾಸ್‌ನಲ್ಲಿ ವೈದ್ಯರ ಅವತಾರದ ಗಣಪ, ಪಾಂಡುರಂಗ ದೇವಸ್ಥಾನದಲ್ಲಿ ಅನಂತ ಚತುರ್ದಶಿವರೆಗೆ ಪೂಜಿಸುವ ಗಣಪತಿ, ಮೇನ್‌ ಬಜಾರ್‌ನ ಸೋನಿ ಗ್ರೂಪ್‌ ಪ್ರತಿಷ್ಠಾಪಿಸಿದ ಗಣಪತಿ, ಮುದ್ಲಾಪುರದ ತಾಯಮ್ಮ ಯುವಕರ ಸಂಘ ಕೌಲ್‌ ಪೇಟೆಯಲ್ಲಿ ಸ್ಥಾಪಿಸಿದ ಗಣಪತಿ, ಮಡ್ಡಿಕಟ್ಟಿ ಗಣಪತಿ, ರಾಣಿಪೇಟೆಯ ರಾಮಸ್ವಾಮಿ ದೇವಸ್ಥಾನದ ಗಣೇಶ ಮೂರ್ತಿಗಳು ಭಕ್ತರನ್ನು ಸೆಳೆಯುತ್ತಿದೆ.

ಬಳ್ಳಾರಿ ರಸ್ತೆಯ ಕಾಳಮ್ಮ ದೇವಸ್ಥಾನದ ಸಮೀಪ ವಿಜಯನಗರ ಹಿಂದೂ ಮಹಾಗಣಪತಿ ಮೂರ್ತಿ 18 ಅಡಿ ಎತ್ತರವಿದ್ದು, 9 ದಿನ ಆರಾಧನೆ ನಡೆಯಲಿದೆ. 

ದ್ವಿಚಕ್ರ ವಾಹನ, ಕಾರು, ರಿಕ್ಷಾ, ಬೃಹತ್ ವಾಹನಗಳಲ್ಲಿ ವಿನಾಯಕನ ಮೂರ್ತಿಗಳನ್ನು ಭಜನೆ, ಡೊಳ್ಳು ಹಾಗೂ ಸಕಲ ಮಂಗಳವಾದ್ಯಗಳೊಂದಿಗೆ ಕೊಂಡೊಯ್ಯಲಾಯಿತು.

ವಿವಿಧ ಗಣೇಶ ಯುವ ಮಂಡಲಗಳ ಸದಸ್ಯರು ಪರಸ್ಪರ ಗುಲಾಲು ಎರಚಿ, ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿದರು. ಪ್ರತಿಷ್ಠಾಪನೆ ಬಳಿಕ ವಿಶೇಷ ಪೂಜೆ ಸಲ್ಲಿಸಿದರು. ಕಡಬು, ಹೋಳಿಗೆ, ಶಾವಿಗಿ ಪಾಯಸ, ಚಕ್ಕುಲಿ, ಲಾಡು, ವಿವಿಧ ಹಣ್ಣುಗಳ ನೈವೇದ್ಯ ಅರ್ಪಿಸಲಾಯಿತು. ಕೆಲವರು ಒಂದೇ ದಿನಕ್ಕೆ ವಿಸರ್ಜನೆ ನೆರವೇರಿಸಿದರು.

ಕಡಿವಾಣ: ಪೆಂಡಾಲ್‌ಗಳಲ್ಲಿ ಅಶ್ಲೀಲ ಹಾಡುಗಳ ಪ್ರಸಾರಕ್ಕೆ ಕತ್ತರಿ ಬಿದ್ದಿದ್ದು, ಭಕ್ತಿಗೀತೆಗಳು ಎಲ್ಲೆಡೆ ಮೊಳಗಿತು. ರಂಗೋಲಿ ಸಹಿತ ವಿವಿಧ ಸ್ಪರ್ಧೆಗಳು ನಡೆದವು. ಗಣಪತಿ ಮೂರ್ತಿ, ಧ್ವನಿವರ್ಧಕ ಕಳವಿನಂತಹ ಒಂದೆರಡು ಘಟನೆಗಳ ಹೊರತಾಗಿ ಶಾಂತಿ ಹಾಗೂ ಸೌಹಾರ್ದದಿಂದ ಉತ್ಸವ ನಡೆಯುತ್ತಿದೆ.

1,818 ಮೂರ್ತಿ: ಜಿಲ್ಲೆಯಲ್ಲಿ ವಿವಿಧ ಗಣೇಶ ಮಂಡಲಗಳು 1,818 ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿದ್ದು, ಮೊದಲನೆ ದಿನವೇ 63 ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ.

ಸೆ.10ರಂದು 1,282 ಮೂರ್ತಿಗಳು, 5ನೇ ದಿನ 429, 7ನೇ ದಿನ 12, 9ನೇ ದಿನ 16, 11ನೇ ದಿನ 10 ಹಾಗೂ 13ನೇ ದಿನ ಒಂದು ಗಣಪತಿ ಮೂರ್ತಿ ವಿಸರ್ಜನೆ ಆಗಲಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಹಲವು ರೂಪ: ಹೊಸಪೇಟೆಯ ಕಂಚುಗಾರ ಪೇಟೆಯಲ್ಲಿ ಕನ್ನಡ ಯುವಕ ಸಂಘದವರು ಪ್ರತಿಷ್ಠಾಪಿಸಿದ  ‘ಕೃಷ್ಣಂ ವಂದೇ ಜಗದ್ಗುರುಂ’ ಪರಿಕಲ್ಪನೆ ಆಕರ್ಷಿಸುತ್ತಿದೆ. ರಾಮ, ಶ್ರೀರಾಮ, ಹನುಮ ಮೂರ್ತಿಗಳು ಗಣೇಶನ ಆಕಾರದಲ್ಲಿ ಮೂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT