ಹೊಸಪೇಟೆ: ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣವಾಗಿರುವ ಇಲ್ಲಿನ ಉಪಕಾಲುವೆಗಳ ಆಧುನೀಕರಣಕ್ಕೆ ಕೋಟ್ಯಂತರ ರೂಪಾಯಿ ಮಂಜೂರಾಗಿದೆ. ಆದರೆ, ಅವುಗಳ ಜೀರ್ಣೋದ್ಧಾರಕ್ಕೆ ಉತ್ಸಾಹದ ಕೊರತೆ ಎದ್ದು ಕಾಣುತ್ತಿದೆ.

ಉಪಕಾಲುವೆಗಳ ಆಧುನೀಕರಣಕ್ಕೆ ಏಷ್ಯನ್ ಅಭಿವೃದ್ಧಿ ಬ್ಯಾಂಕಿನಿಂದ ಒಪ್ಪಿಗೆ ದೊರೆತು ₹430 ಕೋಟಿ ಮಂಜೂರಾಗಿ ವರ್ಷಗಳೇ ಕಳೆದಿವೆ. ಆದರೆ, ಇದುವರೆಗೆ ಕೆಲಸ ಮಾತ್ರ ಆರಂಭವಾಗಿಲ್ಲ. ಇನ್ನೊಂದು ತಿಂಗಳು ಕಳೆದರೆ ಮುಂಗಾರು ಮಳೆ ಆರಂಭವಾಗುತ್ತದೆ. ತುಂಗಭದ್ರಾ ಜಲಾಶಯ ಭರ್ತಿಯಾದರೆ ಕಾಲುವೆಗಳಿಗೆ ನೀರು ಹರಿಸಲಾಗುತ್ತದೆ. ಆಗ ಮತ್ತೆ ಕೆಲಸ ಕೈಗೆತ್ತಿಕೊಳ್ಳಲು ಆಗುವುದಿಲ್ಲ. ಈ ವರ್ಷ ಕೂಡ ಕಾಲುವೆಗಳ ಆಧುನೀಕರಣ ಕೆಲಸ ಆರಂಭಗೊಳ್ಳುವುದು ಅನುಮಾನ.

ವಿಜಯನಗರ ಕಾಲದ ಉಪಕಾಲುವೆಗಳಾದ ರಾಯ, ಬಸವ, ಬೆಲ್ಲ, ಕಾಳಘಟ್ಟ, ತುರ್ತಾ ಇವುಗಳನ್ನು ಆಧುನೀಕರಣಗೊಳಿಸಬೇಕೆಂದು ರೈತರು ಅನೇಕ ದಶಕಗಳಿಂದ ಹೋರಾಟ ನಡೆಸುತ್ತಿದ್ದಾರೆ. ಆದರೆ, ಇದುವರೆಗೆ ಈ ನಿಟ್ಟಿನಲ್ಲಿ ಯಾವುದೇ ಪ್ರಗತಿಯಾಗಿಲ್ಲ.

ಎಲ್ಲ ಕಾಲುವೆಗಳಲ್ಲಿ ಮುಳ್ಳಿನ ಕಂಟಿ, ಪೊದೆ ಬೆಳೆದು ನಿಂತಿದೆ. ಪ್ಲಾಸ್ಟರ್ ಕಿತ್ತು ಹೋಗಿದೆ. ಅನೇಕ ಕಡೆಗಳಲ್ಲಿ ಕಾಲುವೆ ಇದೆಯೋ ಇಲ್ಲವೋ ಎಂದು ಗೊತ್ತಾಗುವುದಿಲ್ಲ. ಅಷ್ಟರಮಟ್ಟಿಗೆ ಹಾಳಾಗಿದ್ದು, ಚರಂಡಿಗಳಂತೆ ಭಾಸವಾಗುತ್ತಿವೆ. ಅನೇಕ ಕಡೆಗಳಲ್ಲಿ ಕಾಲುವೆಗಳಲ್ಲಿ ಬಿರುಕು ಮೂಡಿದೆ. ಎರಡ್ಮೂರು ಸಲ ಕಾಲುವೆ ಒಡೆದು ಅಪಾರ ಪ್ರಮಾಣದಲ್ಲಿ ನೀರು ಪೋಲಾದ ನಿದರ್ಶನಗಳಿವೆ. ಕಾಲುವೆಗಳು ಸಂಪೂರ್ಣವಾಗಿ ಹಾಳಾಗಿರುವ ಕಾರಣ ಕೊನೆಯ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ.

ಕಾಲುವೆಗಳ ಆಧುನೀಕರಣಕ್ಕೆ ಸಂಬಂಧಿಸಿದಂತೆ ರೈತರ ಸಲಹೆ ಆಲಿಸಲು ಹಿಂದಿನ ವರ್ಷ ಕೊಪ್ಪಳ ಜಿಲ್ಲೆಯ ಆನೆಗುಂದಿಯಲ್ಲಿ ಸಭೆ ಕರೆಯಲಾಗಿತ್ತು. ಆದರೆ, ಕಾಲುವೆ ಭಾಗದ ರೈತರು, ರೈತ ಸಂಘಟನೆಗಳ ಮುಖಂಡರನ್ನು ಹೊರಗಿಟ್ಟು ಸಭೆ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಮತ್ತೊಮ್ಮೆ ಸಭೆ ಕರೆಯಬೇಕೆಂದು ರೈತ ಸಂಘಟನೆಗಳು ಆಗ್ರಹಿಸಿದ್ದವು. ಆದರೆ, ಸಭೆ ಕರೆದಿಲ್ಲ.

‘ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಾಲುವೆಗಳ ಆಧುನೀಕರಣ ಮಾಡುವುದು ಸರಿಯಲ್ಲ. ಅಧಿಕಾರಿಗಳು ನಾಲ್ಕು ಗೋಡೆಗಳ ಮಧ್ಯೆ ಕೈಗೊಂಡ ನಿರ್ಣಯವನ್ನು ರೈತರ ಮೇಲೆ ಹೇರಲು ಹೊರಟಿರುವುದು ಸೂಕ್ತವಲ್ಲ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಜೆ. ಕಾರ್ತಿಕ್ ಹೇಳಿದ್ದಾರೆ.

‘ತುಂಗಭದ್ರಾ ಜಲಾಶಯದ ಬಲದಂಡೆ ಮೇಲ್ಮಟ್ಟದ ಕಾಲುವೆ (ಆರ್.ಬಿ.ಎಚ್.ಎಲ್.ಸಿ.), ಕೆಳಮಟ್ಟದ ಕಾಲುವೆಗಳನ್ನು (ಆರ್.ಬಿ.ಎಲ್.ಎಲ್.ಸಿ.) ಪ್ರತಿ ವರ್ಷ ಆಡಳಿತ ಮಂಡಳಿ ದುರಸ್ತಿಗೊಳಿಸುತ್ತದೆ. ಅದೇ ರೀತಿ ವಿಜಯನಗರ ಕಾಲುವೆಗಳ ನಿರ್ವಹಣೆ ಆಗಬೇಕು’ ಎಂದು ಆಗ್ರಹಿಸಿದರು.

‘ವಿಜಯನಗರ ಕಾಲದ ಅರಸರು ಬಹಳ ದೂರದೃಷ್ಟಿ ಇಟ್ಟುಕೊಂಡು ಕಾಲುವೆಗಳನ್ನು ನಿರ್ಮಿಸಿದ್ದರು. ಆದರೆ, ಈಗ ತಂತ್ರಜ್ಞಾನದಲ್ಲಿ ಪ್ರಗತಿಯಾಗಿದ್ದರೂ ಅವುಗಳನ್ನು ನಿರ್ವಹಣೆ ಮಾಡಲು ಆಗುತ್ತಿಲ್ಲ. ಇದೇ ರೀತಿ ನಿರ್ಲಕ್ಷ್ಯ ತೋರಿದರೆ ಕಾಲುವೆಗಳ ಅವಶೇಷಗಳಷ್ಟೇ ಉಳಿಯಬಹುದು’ ಎಂದು ರೈತ ಬಸಯ್ಯ ಸ್ವಾಮಿ ಆತಂಕ ವ್ಯಕ್ತಪಡಿಸಿದರು.

‘ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಆರ್.ಎನ್. ಶೆಟ್ಟಿ ಎಂಬ ಗುತ್ತಿಗೆದಾರರಿಗೆ ಕೆಲಸ ಒಪ್ಪಿಸಲಾಗಿದೆ. ಇಷ್ಟರಲ್ಲೇ ಕೆಲಸ ಆರಂಭಗೊಳ್ಳಲಿದೆ. ಒಟ್ಟು 30 ತಿಂಗಳಲ್ಲಿ ಕೆಲಸ ಪೂರ್ಣಗೊಳಿಸಲು ಗಡುವು ಹಾಕಿಕೊಳ್ಳಲಾಗಿದೆ. ರೈತರ ಬೆಳೆಗೆ ತೊಂದರೆ ಆಗದಂತೆ ಹಂತ ಹಂತವಾಗಿ ಕೆಲಸ ಕೈಗೆತ್ತಿಕೊಳ್ಳಲಾಗುವುದು. ಒಂದೇ ಸಲಕ್ಕೆ ದುರಸ್ತಿ ಮುಗಿಸುವುದು ಕಷ್ಟ’ ಎಂದು ತುಂಗಭದ್ರಾ ನೀರಾವರಿ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ನಾಗಭೂಷಣ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.