ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಲಾರ ಜಾತ್ರೆ: ಭದ್ರಾ ಜಲಾಶಯದಿಂದ ನದಿಗೆ ನೀರು

ನೀರಿನ ಅಭಾವ: ಕೃಷಿ ಚಟುವಟಿಕೆಗೆ ನದಿ ನೀರು ಬಳಸದಂತೆ ನಿರ್ಬಂಧ
Published 20 ಫೆಬ್ರುವರಿ 2024, 15:48 IST
Last Updated 20 ಫೆಬ್ರುವರಿ 2024, 15:48 IST
ಅಕ್ಷರ ಗಾತ್ರ

ಹೂವಿನಹಡಗಲಿ: ತಾಲ್ಲೂಕಿನ ಐತಿಹಾಸಿಕ ಸುಕ್ಷೇತ್ರ ಮೈಲಾರದಲ್ಲಿ ನಡೆಯುವ ವಾರ್ಷಿಕ ಜಾತ್ರೆ ಪ್ರಯುಕ್ತ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ನೀರು ಹರಿಸಲಾಗಿದೆ. ಸೋಮವಾರ ಸಂಜೆ ನೀರು ಕುರುವತ್ತಿ ಗ್ರಾಮ ತಲುಪಿದೆ.

ಫೆ.26 ರಂದು ಜರುಗುವ ಮೈಲಾಲಿಂಗೇಶ್ವರ ಸ್ವಾಮಿ ಕಾರಣಿಕ ಮಹೋತ್ಸವದಲ್ಲಿ ನಾಡಿನ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ. ಜನರಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ಭದ್ರಾ ಜಲಾಶಯದಿಂದ ಫೆ.18 ರಿಂದ 23ರ ವರೆಗೆ ಪ್ರತಿದಿನ 500 ಕ್ಯೂಸೆಕ್‌ನಂತೆ ನದಿಗೆ ನೀರು ಹರಿಸಲಾಗುತ್ತಿದೆ. ಮಳೆ ಕೊರತೆಯಿಂದ ಈ ಬಾರಿ ಬೇಸಿಗೆ ಮುನ್ನವೇ ನದಿಪಾತ್ರ ಬತ್ತಿ ಹೋಗಿತ್ತು. ಭದ್ರಾದಿಂದ ಹರಿಸಿದ ನೀರು ತಾಲ್ಲೂಕಿನ ಗಡಿಗ್ರಾಮ ಹರವಿಯನ್ನು ಮಧ್ಯಾಹ್ನ ತಲುಪಿದಾಗ ಗ್ರಾಮದ ಜನರು ಸಂಭ್ರಮಿಸಿದರು.

ಜಾತ್ರೆ ಮತ್ತು ಕುಡಿಯುವ ನೀರಿನ ಉದ್ದೇಶಕ್ಕೆ ಭದ್ರಾ ಜಲಾಶಯದಿಂದ ಹರಿಸಿದ ನೀರನ್ನು ಕೃಷಿ ಚಟುವಟಿಕೆಗಳಿಗೆ ಬಳಸದಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಆ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತ ಕಾರ್ಯೋನ್ಮುಖವಾಗಿದ್ದು, ನದಿ ತೀರದಲ್ಲಿ ರೈತರು ಅಳವಡಿಸಿರುವ ಮೋಟಾರ್‌ಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಕ್ರಮ ಕೈಗೊಂಡಿದೆ.

ತಹಶೀಲ್ದಾರ್ ವಿ.ಕಾರ್ತಿಕ್‌, ಜೆಸ್ಕಾಂ ಎಇಇ ಗದುಗಿನ ಕೇದಾರನಾಥ ಅವರು ಸಿಬ್ಬಂದಿಯೊಂದಿಗೆ ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿ, ರೈತರ ಮನವೊಲಿಸಿ ನದಿಗೆ ಅಳವಡಿಸಿರುವ ಮೋಟಾರ್‌ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ತಾಲ್ಲೂಕಿನ ಹರವಿಯಿಂದ ಹಕ್ಕಂಡಿ ಗ್ರಾಮವರೆಗೆ ನದಿ ತೀರದ ಮೋಟಾರ್‌ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಕ್ರಮ ಕೈಗೊಂಡಿದ್ದು, ಇದಕ್ಕೆ ಕೆಲವೆಡೆ ವಿರೋಧ ವ್ಯಕ್ತವಾಗಿದೆ.

‘ನೀರಿನ ಅಭಾವವಿರುವುದರಿಂದ ನದಿ ನೀರು ಅವಲಂಬಿಸಿ ಕೃಷಿ ಚಟುವಟಿಕೆ ನಡೆಸಬಾರದು ಎಂದು ರೈತರಿಗೆ ಮೊದಲೇ ತಿಳಿಸಲಾಗಿತ್ತು. ಬೇಸಿಗೆಯಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಆಗದಂತೆ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಆ ಹಿನ್ನೆಲೆಯಲ್ಲಿ ನದಿ ತೀರದ ಮೋಟಾರ್‌ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿದ್ದು, ರೈತರು ಸಹಕರಿಸಬೇಕು’ ಎಂದು ತಹಶೀಲ್ದಾರ್ ವಿ. ಕಾರ್ತಿಕ್‌ ಹೇಳಿದರು.

ಹೂವಿನಹಡಗಲಿ ತಾಲ್ಲೂಕಿನ ನದಿ ತೀರದಲ್ಲಿ ಅಧಿಕಾರಿಗಳು ಭೇಟಿ ನೀಡಿ ಮೋಟಾರ್ ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು.
ಹೂವಿನಹಡಗಲಿ ತಾಲ್ಲೂಕಿನ ನದಿ ತೀರದಲ್ಲಿ ಅಧಿಕಾರಿಗಳು ಭೇಟಿ ನೀಡಿ ಮೋಟಾರ್ ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT