ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Year Ender 2022| ವಿಜಯನಗರ: ಕೋವಿಡ್‌ ಶೂನ್ಯಕ್ಕಿಳಿದ ವರ್ಷ

ನೂತನ ವಿಜಯನಗರ ಜಿಲ್ಲೆ ಪಾಲಿಗೆ ನೋವು ನಲಿವಿನ ವರ್ಷ
Last Updated 30 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): 2021ರ ಫೆಬ್ರುವರಿ 8ರಂದು ರಾಜ್ಯದ 31ನೇ ಜಿಲ್ಲೆಯಾಗಿ ಉದಯವಾದ ವಿಜಯನಗರ ಜಿಲ್ಲೆಗೆ 2022ನೇ ವರ್ಷ, ಒಂದು ವರ್ಷ ಪೂರೈಸಿದ ಸಂಭ್ರಮದ ವರ್ಷ. ವಿಶ್ವಪ್ರಸಿದ್ಧ ಹಂಪಿಯಿಂದ ವಿಶ್ವದ ನಕಾಶೆಯಲ್ಲಿ ವಿಶೇಷ ಸ್ಥಾನ, ಮಹತ್ವ ಪಡೆದಿರುವ ಜಿಲ್ಲೆಗೆ 2022ನೇ ಇಸ್ವಿ ಏಳು–ಬೀಳು, ನೋವು–ನಲಿವಿನ ವರ್ಷ. ವರ್ಷದ ಅಂಚಿನಲ್ಲಿರುವ ನಾವೆಲ್ಲರೂ ಜನವರಿಯಿಂದ ಜೂನ್‌ ವರೆಗೆ ಜಿಲ್ಲೆಯಲ್ಲಿ ನಡೆದ ಪ್ರಮುಖ ಘಟನಾವಳಿಗಳನ್ನು ನೆನಪಿಸುವ ಸಂದರ್ಭವಿದು.

ಜನವರಿ: ಕೋವಿಡ್‌ ತಡೆಗೆ ಜಿಲ್ಲೆಯಾದ್ಯಂತ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಲಾಯಿತು.ಹೊಸಪೇಟೆ ನಗರಸಭೆಯ ಎಂಟು ಜನ ಪಕ್ಷೇತರರು, ಎಎಪಿಯ ಒಬ್ಬ ಸದಸ್ಯ ಬಿಜೆಪಿಗೆ ಸೇರ್ಪಡೆಯಾದರು. ವರ್ಷದ ಆರಂಭದಲ್ಲೇ ಜಿಲ್ಲೆಯಲ್ಲಿ ‘ಆಪರೇಷನ್‌ ಕಮಲ’ಕ್ಕೆ ನಾಂದಿ. ಪೂರ್ಣ ಬಹುಮತ ಗಳಿಸಿದ ಬಿಜೆಪಿ ನಗರಸಭೆಯಲ್ಲಿ ಅಧಿಕಾರದ ಚುಕ್ಕಾಣಿ. ಜ. 25ರಂದು ಶಶಿಕಲಾ ಜೊಲ್ಲೆ ಜಿಲ್ಲಾ ಉಸ್ತುವಾರಿಯಾಗಿ ನೇಮಕಗೊಂಡರು. ಸಚಿವ ಆನಂದ್‌ ಸಿಂಗ್‌ ಅವರಿಗೆ ಕೊಪ್ಪಳದ ಜವಾಬ್ದಾರಿ ವಹಿಸಲಾಯಿತು. ಒಲ್ಲದ ಮನಸ್ಸಿನಿಂದಲೇ ಅವರು ಅದರ ಹೊಣೆ ಹೊತ್ತುಕೊಂಡರು.

ಫೆಬ್ರುವರಿ: * ರಾಜ್ಯದ ವಿವಿಧ ಕಡೆಗಳಲ್ಲಿ ವಿವಾದ ಸೃಷ್ಟಿಸಿದ್ದ ಹಿಜಾಬ್‌–ಕೇಸರಿ ವಿಷಯ ಜಿಲ್ಲೆಗೂ ಕಾಲಿರಿಸಿತು. ನಗರ ಸೇರಿದಂತೆ ಜಿಲ್ಲೆಯ ಹಲವೆಡೆಗಳಲ್ಲಿ ಪರ–ವಿರುದ್ಧ ಪ್ರತಿಭಟನೆಗಳು ನಡೆದವು. ದಿವಂಗತ ನಟ ಡಾ. ಪುನೀತ್‌ ರಾಜಕುಮಾರ್‌ ಗೌರವಾರ್ಥ ನಗರದ ವೃತ್ತ ಹಾಗೂ ಜಿಲ್ಲಾ ಕ್ರೀಡಾಂಗಣಕ್ಕೆ ಅವರ ಹೆಸರು ನಾಮಕರಣ ಮಾಡಲು ನಗರಸಭೆ ಒಮ್ಮತದ ತೀರ್ಮಾನ ಕೈಗೊಂಡಿತು.

ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸರ್ಕಾರ ಅನುಮೋದನೆ. ಕೋವಿಡ್‌ ನಡುವೆಯೂ ಮೈಲಾರ ಜಾತ್ರೆ, ಕಾರಣಿಕ ಸಂಪನ್ನ. ಭ್ರಷ್ಟಾಚಾರದಂಥ ಗಂಭೀರ ಆರೋಪಗಳಿದ್ದರೂ ಪ್ರೊ.ಸ.ಚಿ. ರಮೇಶ ಅವರನ್ನು ಹಂಪಿ ಕನ್ನಡ ವಿ.ವಿ. ಕುಲಪತಿಯಾಗಿ ಒಂದು ವರ್ಷ ಅವಧಿ ವಿಸ್ತರಿಸಿ ಸರ್ಕಾರ ಆದೇಶ.

ಮಾರ್ಚ್‌:* ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಜಿಲ್ಲೆಗೆ ಬಿಡಿಗಾಸೂ ಅನುದಾನ ನೀಡಲಿಲ್ಲ. ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಲ್ಲಿ ಕೋಟ್ಯಂತರ ರೂಪಾಯಿ ಇರುವುದರಿಂದ ಅದರ ಅಗತ್ಯವಿಲ್ಲ. ಕಾಲಕಾಲಕ್ಕೆ ಜಿಲ್ಲೆಗೆ ಬೇಕಾದ ಮೂಲಸೌಕರ್ಯಕ್ಕೆ ಅನುದಾನ ಬಿಡುಗಡೆಗೊಳಿಸಲಾಗುವುದು ಎಂದು ಸರ್ಕಾರ ಹೇಳಿ ನುಣುಚಿಕೊಂಡಿತು.ಮಾ.24ರಂದು ಕೊಟ್ಟೂರು ಮಠದ ನೂತನ ಉತ್ತರಾಧಿಕಾರಿಯಾಗಿ ಬಸವಲಿಂಗ ಸ್ವಾಮೀಜಿ ಪೀಠ ಅಲಂಕರಿಸಿದರು. ಹಂಪಿಯಲ್ಲಿ ವಿದೇಶಿಗರಿಂದ ಹೋಳಿ ರಂಗಿನಾಟ.

ಏಪ್ರಿಲ್‌: * ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರತಿಷ್ಠಿತ ನಾಡೋಜ ಗೌರವ ಪದವಿಯನ್ನು ಭಾಷ್ಯಂ ಸ್ವಾಮಿ, ಗೊ.ರು.ಚನ್ನಬಸಪ್ಪ, ವೆಂಕಟಾಚಲಶಾಸ್ತ್ರಿ ಅವರಿಗೆ ರಾಜ್ಯಪಾಲರು ನುಡಿಹಬ್ಬದಲ್ಲಿ ಪ್ರದಾನ. ತಾಲ್ಲೂಕಿನ ಮರಿಯಮ್ಮನಹಳ್ಳಿಯಲ್ಲಿ ಅಗ್ನಿ ದುರಂತದಲ್ಲಿ ಒಂದೇ ಕುಟುಂಬದ ನಾಲ್ವರ ಸಾವು.ಸಾಹಿತಿ ಕುಂ. ವೀರಭದ್ರಪ್ಪ ಅವರಿಗೆ ಜೀವ ಬೆದರಿಕೆ ಪತ್ರ.

ಏ. 16,17ರಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ಹೊಸಪೇಟೆ ನಗರ ಸಾಕ್ಷಿ. ಜಾನಪದ ಸಮ್ಮೇಳನಕ್ಕೆ ಜಿಲ್ಲೆ ಸಾಕ್ಷಿಯಾದರೆ,ಹೊಸಪೇಟೆ–ಕೊಟ್ಟೂರು–ಹರಿಹರ ನಡುವೆ ಡೆಮು ರೈಲು ಸಂಚಾರ ಆರಂಭ.

ಮೇ: ಕೋವಿಡ್‌ ಪ್ರಕರಣಗಳು ಶೂನ್ಯಕ್ಕಿಳಿದ ತಿಂಗಳು. ಅಕಾಲಿಕ ಮಳೆಗೆ ಬಾಳೆ ಹಾಳು.ನಕಲಿ ದಾಖಲೆ ಸೃಷ್ಟಿಸಿ, ಜಮೀನು ಕಬಳಿಸಿ ಸರ್ಕಾರಕ್ಕೆ ವಂಚಿಸಿರುವ ದೂರಿನ ನಗರಸಭೆ ಸಿಬ್ಬಂದಿ ಸೇರಿದಂತೆ ಒಟ್ಟು 17 ಮಂದಿ ವಿರುದ್ಧ ಪ್ರಕರಣ ದಾಖಲು. ಹೊಸಪೇಟೆ ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿ ಕಾಮಗಾರಿ ಆರಂಭ.

ಜೂನ್‌:ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಪಿ. ಅವರ ದಕ್ಷ ಆಡಳಿತದ ಪರಿಣಾಮ ವಿಜಯನಗರ ಜಿಲ್ಲೆ ‘ಸಕಾಲ’ದಲ್ಲಿ 3ನೇ ಸ್ಥಾನಕ್ಕೇರಿತು.ಜೂ. 5ಕ್ಕೆ ಡಾ. ಪುನೀತ್‌ ರಾಜಕುಮಾರ್‌ ಪ್ರತಿಮೆ ಅನಾವರಣ. ಕೊಟ್ಟೂರಿನ ‘ಇಂದು’ ಕಾಲೇಜು ಸತತ 7ನೇ ವರ್ಷವೂ ಪಿಯು ಪರೀಕ್ಷೆಯಲ್ಲಿ ಮೊದಲ ರ್‍ಯಾಂಕ್‌ ಗಳಿಸಿ ಸಾಧನೆ.

(ಜುಲೈನಿಂದ ಡಿಸೆಂಬರ್‌ ಘಟನಾವಳಿಗಳು ನಾಳಿನ ಸಂಚಿಕೆಯಲ್ಲಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT