ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟ ಪುನೀತ್‌ ರಾಜಕುಮಾರ್‌ ಮರಣದ ನಂತರ ಜಿಮ್‌ಗಳಲ್ಲಿ ತಗ್ಗಿದ ಯುವಕರ ಸಂಖ್ಯೆ

Last Updated 2 ನವೆಂಬರ್ 2021, 6:08 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನಟ ದಿವಂಗತ ಪುನೀತ್‌ ರಾಜಕುಮಾರ್‌ ಮರಣದ ನಂತರ ಯುವಕರು ನಗರದಲ್ಲಿನ ಜಿಮ್‌ಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ ಎಂದು ಗೊತ್ತಾಗಿದೆ.

ಅತಿಯಾದ ದೇಹ ದಂಡನೆಯ ನಂತರ ಪುನೀತ್‌ ರಾಜಕುಮಾರ್ ಇಹಲೋಕ ತ್ಯಜಿಸಿದ್ದರು. ಹೆಚ್ಚಿನ ದೈಹಿಕ ಕಸರತ್ತು ಕೂಡ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಕೆಲ ವೈದ್ಯರು ಎಚ್ಚರಿಸಿದ್ದಾರೆ. ಯುವಕರ ಹಿಂಜರಿಕೆಗೆ ಇದೇ ಮುಖ್ಯ ಕಾರಣ ಎಂದು ತಿಳಿದು ಬಂದಿದೆ.

ಸಾಮಾನ್ಯವಾಗಿ ವಾರಾಂತ್ಯಕ್ಕೆ ಜಿಮ್‌ಗಳಲ್ಲಿ ಯುವಕರ ಸಂಖ್ಯೆ ಹೆಚ್ಚಿರುತ್ತದೆ. ಬೆಳಿಗ್ಗೆ ಹಾಗೂ ಹಗಲಿನ ವೇಳೆಯಲ್ಲಿ ಹೆಚ್ಚಿನ ಸಂಖ್ಯೆಯ ಯುವಕರು ಹೋಗಿ ದೈಹಿಕ ಕಸರತ್ತು ಮಾಡುತ್ತಾರೆ. ಆದರೆ, ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ಗಣನೀಯ ಪ್ರಮಾಣದಲ್ಲಿ ಯುವಕರ ಸಂಖ್ಯೆ ತಗ್ಗಿದೆ. ಇದನ್ನು ಸ್ವತಃ ಜಿಮ್‌ ನಡೆಸುವವರೇ ಒಪ್ಪಿಕೊಂಡಿದ್ದಾರೆ.

‘ಸಾಮಾನ್ಯವಾಗಿ ವಾರದ ಕೊನೆಯ ದಿನಗಳಲ್ಲಿ ಹೆಚ್ಚಾಗಿ ಯುವಕರು ಜಿಮ್‌ಗೆ ಬಂದು ಬೆವರು ಹರಿಸುತ್ತಾರೆ. ಆದರೆ, ಈ ವಾರ ಸಾಕಷ್ಟು ಯುವಕರು ಜಿಮ್‌ ಕಡೆ ಬಂದಿಲ್ಲ. ನಾಲ್ಕು ದಿನಗಳಿಂದ ಯುವಕರು ಬರದ ಕಾರಣ ಜಿಮ್ ಬಿಕೊ ಎನ್ನುತ್ತಿದೆ’ ಎಂದು ನಗರದ ಜಿಮ್‌ ಟ್ರೈನರ್‌ ಸುನೀಲ್‌ ಹೇಳಿದರು.

‘ಜಿಮ್‌ಗಳಲ್ಲಿ ಎರಡು ತರಹ ಇರುತ್ತದೆ. ಕೆಲವರು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವುದಕ್ಕಾಗಿ ಕಸರತ್ತು ನಡೆಸುತ್ತಾರೆ. ಮತ್ತೆ ಕೆಲವರು ಫಿಟ್‌ ಆಗಿರಲು ಮಾಡುತ್ತಾರೆ. ನಗರದಲ್ಲಿ ಸ್ಪರ್ಧೆಗೆ ಅಣಿಗೊಳಿಸುವಂತಹ ದೊಡ್ಡ ಜಿಮ್‌ಗಳಿಲ್ಲ. ಇಲ್ಲೆಲ್ಲಾ ಇರುವುದು ಫಿಟ್ನೆಸ್‌ ಜಿಮ್‌ಗಳು. ಹಾಗಾಗಿ ಯುವಕರು ಬಂದರೆ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದು ತಿಳಿಸಿದರು.

‘ಪುನೀತ್‌ ರಾಜಕುಮಾರ್‌ ಅವರು ದೈಹಿಕ ಕಸರತ್ತಿನ ನಂತರವೇ ಮರಣ ಹೊಂದಿದ್ದಾರೆ ಎನ್ನುವುದು ನಿಜ. ಆದರೆ, ದೈಹಿಕ ಕಸರತ್ತಿನಿಂದಲೇ ನಿಧನರಾಗಿದ್ದಾರೆ ಎನ್ನುವುದು ಸಾಬೀತಾಗಿಲ್ಲ. ಕೆಲವರಿಗೆ ಆನುವಂಶಿಕವಾಗಿ ಕಾಯಿಲೆಗಳು ಬರುತ್ತವೆ. ಅದರಿಂದಲೂ ಸಾವು ಬರಬಹುದು. ಹೀಗಾಗಿ ಜಿಮ್ ಮಾಡಿದರೆ ಸಾವು ಬರುತ್ತದೆ. ಅದಕ್ಕಾಗಿ ನಾನು ಹೋಗುವುದಿಲ್ಲ ಎಂಬ ಧೋರಣೆ ಸರಿಯಿಲ್ಲ’ ಎಂದು ಮತ್ತೊಬ್ಬ ಜಿಮ್‌ ಟ್ರೈನರ್‌ ಶಿವಕುಮಾರ ಹೇಳಿದರು.

‘ಜಿಮ್‌ನಲ್ಲಿ ಯಾವುದೇ ರೀತಿಯ ಕಸರತ್ತು ಮಾಡುವುದಕ್ಕೂ ಮುಂಚೆ ಅಲ್ಲಿರುವ ಟ್ರೈನರ್‌ಗಳಿಂದ ನೋಡಿ ತಿಳಿಯಬೇಕು. ನಂತರ ಮುಂದುವರೆಯಬೇಕು. ಮನಸ್ಸಿಗೆ ತೋಚಿದಂತೆ ವರ್ಕೌಟ್‌ ಮಾಡಿದರೆ ಅದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಖಚಿತ’ ಎಂದು ಎಚ್ಚರಿಸಿದರು.

‘ನಾನು ಒಂದು ದಿನವೂ ಜಿಮ್‌ ತಪ್ಪಿಸುವುದಿಲ್ಲ. ಆದರೆ, ನಾಲ್ಕು ದಿನಗಳಿಂದ ಹೋಗಿಲ್ಲ. ಪುನೀತ್‌ ಅವರ ಸಾವಿನ ನಂತರ ಹೋಗಲು ಮನಸ್ಸಾಗುತ್ತಿಲ್ಲ. ಮನೆಯಲ್ಲಿ ಕೂಡ ಜಿಮ್‌ಗೆ ಹೋಗುವುದು ಬೇಡ ಅನ್ನುತ್ತಿದ್ದಾರೆ. ಹೀಗಾಗಿ ಸ್ವಲ್ಪ ದಿನಗಳ ಕಾಲ ದೂರವಿರಲು ನಿರ್ಧರಿಸಿದ್ದೇನೆ’ ಎಂದು ಯುವಕ ಶಿವರಾಜ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT