ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಳಾದ ರಸ್ತೆ, ಫ್ಲೋರೈಡ್‌ಯುಕ್ತ ನೀರು

Last Updated 4 ಏಪ್ರಿಲ್ 2012, 8:00 IST
ಅಕ್ಷರ ಗಾತ್ರ

ರಾಜ್ಯದ ಬೊಕ್ಕಸಕ್ಕೆ ಇಲ್ಲಿನ ಗಣಿಗಾರಿಕೆಯಿಂದ ತೆರಿಗೆ ರೂಪದಲ್ಲಿ ಕೋಟಿಗಟ್ಟಲೆ ಆದಾಯ ನೀಡುವ  ತಾಲ್ಲೂಕಿನ ಜನರು ಸರಿಯಾದ ರಸ್ತೆ ಹಾಗೂ ಶುದ್ಧ ಕುಡಿವ ನೀರಿನ ಕೊರತೆಯಿಂದ ಬಳಲುತ್ತಿದ್ದಾರೆ.

ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾಳಾಗಿದ್ದು ಅವುಗಳ ಅಭಿವೃದ್ಧಿ ಪಡಿಸಬೇಕಾದ ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ದೂರುತ್ತಾರೆ.

ಅಬ್ಬರದ ಗಣಿಗಾರಿಕೆ ಇದ್ದ (2006ರಿಂದ 2011) ದಿನಗಳಲ್ಲಿ ಸಂಡೂರು-ಹೊಸಪೇಟೆ ರಸ್ತೆಯ ಸುಶೀಲಾನಗರ, ಜೈಸಿಂಗ್‌ಪುರ, ಸಿದ್ದಾಪುರ, ಕಲ್ಲಹಳ್ಳಿ ಮಾರ್ಗದ ಜನರು ಅಕ್ಷರಶಃ ಕೆಟ್ಟ ರಸ್ತೆಗಳಿಂದ ರೋಸಿ ಹೋಗಿದ್ದರು.

ಮಳೆಗಾಲದಲ್ಲಂತೂ ಕೆಸರು, ಮೊಣಕಾಲೆತ್ತರದ ಗುಂಡಿ ಬಿದ್ದ ರಸ್ತೆಗಳಲ್ಲಿ ಜನರು ಓಡಾಡುವುದು ಕಷ್ಟಕರವಾಗಿತ್ತು. ಬಸಿರು ಹೆಂಗಸರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಕೂಸು ಸಮೇತ ಹಲವರು ಸಾವನ್ನಪ್ಪಿದ್ದ ಘಟನೆಗಳು ಜರುಗಿದ್ದವು.

ಕಳೆದ ವರ್ಷದ ಜೂನ್ ತಿಂಗಳಲ್ಲಿ ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ ಮತ್ತು ಅಂದಿನ ಜಿಲ್ಲಾ ಮಂತ್ರಿ ಮಾಜಿ ಸಚಿವ ಜನಾರ್ದನ ರೆಡ್ಡಿ, ಮಾಜಿ ಸಚಿವ ಬಿ.ಶ್ರೀರಾಮುಲು, ಸ್ಥಳೀಯ ಶಾಸಕ ಈ.ತುಕಾರಾಂ ಸಂಡೂರು- ಹೊಸಪೇಟೆ ಮತ್ತು ತೋರಣಗಲ್ಲು ಸಂಡೂರು ಕೂಡ್ಲಿಗಿ ರಸ್ತೆಗಳ ಅಭಿ ವೃದ್ಧಿಗೆ ಭೂಮಿ ಪೂಜೆ ನೆರವೇರಿಸಿದ್ದರು.

90 ಕೋಟಿ ರೂಪಾಯಿಗಳ ಸಂಡೂರು- ಹೊಸಪೇಟೆ  ಸಿಮೆಂಟ್ ರಸ್ತೆ ನಿರ್ಮಾಣದ  ಕಾಮಗಾರಿ ಆಮೆ ವೇಗದಲ್ಲಿದೆ. ಜೊತೆಗೆ ನಿರೀಕ್ಷಿತ ಗುಣಮಟ್ಟದ ಕೆಲಸವಾಗುತ್ತಿಲ್ಲ ಎಂಬುದು ಸ್ಥಳೀಯರ ದೂರು. 120 ಕೋಟಿ ವೆಚ್ಚದ ತೋರಣಗಲ್ಲು ಕೂಡ್ಲಿಗಿ ರಸ್ತೆ ಕಾಮಗಾರಿ ಆರಂಭವಾಗಬೇಕಿದೆ.

ಅಲ್ಲದೇ ತೋರಣಗಲ್ಲು, ತಾರಾನಗರ, ಬನ್ನಿಹಟ್ಟಿ, ಸಂಡೂರು, ಧರ್ಮಾಪುರ, ಯಶವಂತನಗರ, ಅಂತಾಪುರ, ಬಸಾಪುರ, ಮೆಟ್ರಿಕಿ, ಮೋತಲಕುಂಟ, ಯರಯ್ಯನಹಳ್ಳಿ ಗ್ರಾಮಗಳ ರಸ್ತೆಗಳು ಹಾಳಾಗಿವೆ. ತಾಲ್ಲೂಕಿನಲ್ಲಿರುವ ಮೇಲು ಸೇತುವೆಗಳು ದುರ್ಬಲವಾಗಿದ್ದು ತಡೆ ಗೋಡೆಗಳು ಸಂಪೂರ್ಣ ಜೀರ್ಣಾವಸ್ಥೆ ಯಲ್ಲಿವೆ.

ಫ್ಲೋರೈಡ್‌ಯುಕ್ತ ನೀರು: ತಾಲ್ಲೂಕಿನ 23 ಗ್ರಾಮ ಪಂಚಾಯಿತಿಗಳ ಶೇ 70ರಷ್ಟು ಹಳ್ಳಿಗಳ ನೀರಿನಲ್ಲಿ ಅಧಿಕ ಫ್ಲೋರೈಡ್ ಅಂಶವಿರುವುದು ವೈಜ್ಞಾನಿಕ ವರದಿಯಿಂದ ದೃಢಪಟ್ಟಿದೆ.

ಜನರಿಗೆ ದಂತ ಫ್ಲೋರೋಸಿಸ್ ಕಾಯಿಲೆ, ಮಕ್ಕಳಲ್ಲಿ ನೀಲಿಮಾ ಕಾಯಿಲೆ ಮತ್ತು ಅಂಗವಿಕಲತೆಯಿಂದ ಬಳಲುತ್ತಿ ರುವವರ ಸಂಖ್ಯೆ ಹೆಚ್ಚುತ್ತಿದೆ. ಫ್ಲೋರೈಡ್ ನೀರಿನ ಬದಲಾಗಿ ಜನರಿಗೆ ಶುದ್ಧ ಕುಡಿವ ನೀರನ್ನ ಮತ್ತು ಸಂಚಾರ ಯೋಗ್ಯ ರಸ್ತೆಗಳನ್ನು ನಿರ್ಮಿಸಿ ಕೊಡುವಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತ ಮುಂದಾಗಬೇಕಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT