ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೇಕಲ್: 16 ಖಾಸಗಿ ಶಾಲೆಗಳಿಗೆ ಹುಸಿ ಬಾಂಬ್ ಸಂದೇಶ

Published 2 ಡಿಸೆಂಬರ್ 2023, 6:20 IST
Last Updated 2 ಡಿಸೆಂಬರ್ 2023, 6:20 IST
ಅಕ್ಷರ ಗಾತ್ರ

ಆನೇಕಲ್ : ತಾಲ್ಲೂಕಿನ 16 ಖಾಸಗಿ ಶಾಲೆಗಳಿಗೆ ಹುಸಿ ಬಾಂಬ್‌ ಬೆದರಿಕೆ ಇ–ಮೇಲ್‌ ಸಂದೇಶ ಬಂದಿದ್ದರಿಂದ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ತಾಲ್ಲೂಕಿನ 16 ಖಾಸಗಿ ಶಾಲೆಗಳಿಗೆ ಶುಕ್ರವಾರ ಬೆಳಗ್ಗೆ ಶಾಲೆಗಳ ಇ-ಮೇಲ್‌ಗೆ ಶಾಲೆಗಳಲ್ಲಿ ಬಾಂಬ್‌ ಇರಿಸಿರುವುದಾಗಿ ಸಂದೇಶ ಬಂದಿತು. ಆತಂಕಕ್ಕೊಳಗಾದ ಆಡಳಿತ ಮಂಡಳಿ ಸಿಬ್ಬಂದಿಯನ್ನು ಹೊರ ಕಳುಹಿಸಿದರು. ಮಕ್ಕಳು ಶಾಲೆಯ ಒಳಗೆ ಬರದಂತೆ ಹೊರಗಡೆಯೇ ತಡೆ ಹಿಡಿಯಲಾಯಿತು.

ಬನ್ನೇರುಘಟ್ಟ, ಸರ್ಜಾಪುರ ಮತ್ತು ಹೆಬ್ಬಗೋಡಿ ಪೊಲೀಸರು, ಶ್ವಾನದಳ ಮತ್ತು ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿ ತಪಾಸಣೆ ನಡೆಸಿದರು. ಎಲ್ಲಾ ತರಗತಿ ಕೊಠಡಿ, ಶೌಚಾಲಯ ಸೇರಿದಂತೆ ಎಲ್ಲೆಡೆ ತಪಾಸಣೆ ನಡೆಸಲಾಯಿತು. ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ.  ನಂತರ ಇದೊಂದು ಹುಸಿ ಬಾಂಬ್‌ ಬೆದರಿಕೆ ಎಂದು ತಿಳಿದುಬಂದಿದೆ.

ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಮನೆಗೆ ತೆರಳುವಂತೆ ಸೂಚಿಸಲಾಯಿತು. ಇನ್ನೂ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಗೆ ಕಳುಹಿಸಿ ಬಾಂಬ್‌ ನಿಷ್ಕ್ರಿಯ ದಳ ಮತ್ತು ಶ್ವಾನದಳದ ತಪಾಸಣೆಯ ನಂತರ ತರಗತಿ ಆರಂಭಿಸಲಾಯಿತು. ಕೆಲವೆಡೆ ಪೋಷಕರು ತಮ್ಮ ಮಕ್ಕಳನ್ನು ಮನೆಗೆ ಕರೆದು ಹೋಗುತ್ತಿದ್ದ ದೃಶ್ಯ ಕಂಡು ಬಂದಿತು. ಇನ್ನೂ ಕೆಲ ಶಾಲೆಗಳು ರಜೆ ಘೋಷಣೆ ಮಾಡಿದವು.

ಯಾವ್ಯಾವ ಶಾಲೆ:

ತಾಲ್ಲೂಕಿನ ಬನ್ನೇರುಘಟ್ಟ ಪೊಲೀಸ್‌ ಠಾಣೆ ವ್ಯಾಪ್ತಿಯ ಗ್ರೀನ್‌ ಹುಡ್‌ ಹೈ ಸ್ಕೂಲ್‌, ಗ್ಲೋಬಲ್‌ ಇಂಟರ್‌ನ್ಯಾಷನನಲ್‌ ಶಾಲೆ, ರಾಯನ್‌ ಇಂಟರ್‌ನ್ಯಾಷನಲ್‌ ಶಾಲೆ, ಆಲ್‌ ಬಶೀರ್‌ ಶಾಲೆ, ದೀಕ್ಷಾ ಹೈ ಶಾಲೆ, ಕ್ಯಾಂಡರ್‌ ಇಂಟರ್‌ ನ್ಯಾಷನಲ್‌ ಶಾಲೆ, ಬಿವಿಎಂ ಗ್ಲೋಬಲ್‌ ಶಾಲೆಗಳಿಗೆ ಹುಸಿ ಬಾಂಬ್‌ ಸಂದೇಶ ಬಂದಿತ್ತು.

ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಸಮೀಪದ ಗ್ರೀನ್ ಹುಡ್ ಹೈ ಶಾಲೆಗೆ ಹುಸಿ ಬಾಂಬ್ ಸಂದೇಶ ಬಂದಿದ್ದರಿಂದ ವಿದ್ಯಾರ್ಥಿಗಳು ಆತಂಕದಿಂದ ಮನೆಗಳತ್ತ ತೆರಳುತ್ತಿರುವುದು
ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಸಮೀಪದ ಗ್ರೀನ್ ಹುಡ್ ಹೈ ಶಾಲೆಗೆ ಹುಸಿ ಬಾಂಬ್ ಸಂದೇಶ ಬಂದಿದ್ದರಿಂದ ವಿದ್ಯಾರ್ಥಿಗಳು ಆತಂಕದಿಂದ ಮನೆಗಳತ್ತ ತೆರಳುತ್ತಿರುವುದು

ಸರ್ಜಾಪುರ ಪೊಲೀಸ್‌ ಠಾಣೆ ವ್ಯಾಪ್ತಿಯ ಗ್ರೀನ್‌ ಹುಡ್‌ ಹೈ, ಗ್ಲೋಬಲ್‌ ಇಂಡಿಯನ್‌ ಇಂಟರ್‌ನ್ಯಾಷನಲ್‌ ಶಾಲೆ, ಓಕ್ರಿಡ್ಜ್‌ ಶಾಲೆ, ಟಿಐಎಸ್‌ಬಿ ಶಾಲೆ, ಇನ್‌ವೆಂಚರ್‌ ಶಾಲೆ ಮತ್ತು ಹೆಬ್ಬಗೋಡಿ ಪೊಲೀಸ್‌ ಠಾಣೆ ವ್ಯಾಪ್ತಿಯ ಎಬಿನೇಜರ್‌ ಇಂಟರ್‌ ನ್ಯಾಷನಲ್‌ ಶಾಲೆ, ಡಿವೈನ್‌ ಇಂಟರ್ ನ್ಯಾಷನಲ್‌ ಶಾಲೆ, ಟ್ರಿಮಿಸ್‌ ಇಂಟರ್‌ನ್ಯಾಷನಲ್‌ ಶಾಲೆ, ಫ್ಲಾರೆನ್ಸ್‌ ಇಂಟರ್‌ನ್ಯಾಷನಲ್‌ ಶಾಲೆಗಳಿಗೆ ಹುಸಿ ಬಾಂಬ್‌ ಸಂದೇಶ ಬಂದಿತು.

ಆನೇಕಲ್ ತಾಲ್ಲೂಕಿನ ವಿವಿಧ ಖಾಸಗಿ ಶಾಲೆಗಳ ಇ-ಮೇಲ್‌ಗೆ ಬಂದಿರುವ ಹುಸಿ ಬಾಂಬ್ ಸಂದೇಶ
ಆನೇಕಲ್ ತಾಲ್ಲೂಕಿನ ವಿವಿಧ ಖಾಸಗಿ ಶಾಲೆಗಳ ಇ-ಮೇಲ್‌ಗೆ ಬಂದಿರುವ ಹುಸಿ ಬಾಂಬ್ ಸಂದೇಶ

ಇದೇ ಮೊದಲಲ್ಲ:

2022ರ ಏಪ್ರಿಲ್‌ 8ರಂದು ತಾಲ್ಲೂಕಿನ ವಿವಿಧೆಡೆಯ ಐದು ಶಾಲೆಗಳಿಗೆ ಹುಸಿ ಬಾಂಬ್‌ ಬೆದರಿಕೆಯ ಸಂದೇಶ ಬಂದಿತ್ತು. 2023ರ ಮೇ 9ರಂದು ಎರಡು ಶಾಲೆಗಳಿಗೆ ಹುಸಿ ಬಾಂಬ್‌ ಸಂದೇಶ ಬಂದಿತ್ತು. ಡಿ.1ರ ಶುಕ್ರವಾರ ತಾಲ್ಲೂಕಿನ ವಿವಿಧೆಡೆಯ ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ಹುಸಿ ಬಾಂಬ್‌ ಸಂದೇಶ ಬಂದಿರುವುದು ಗಾಬರಿ ಮೂಡಿಸಿದೆ.

ಆತಂಕ ಹೆಚ್ಚಿಸಿದೆ:

‘ಬಾಂಬ್‌ ಬೆದರಿಕೆಯ ಸುದ್ದಿ ತಿಳಿಯುತ್ತಿದ್ದಂತೆ ಮನೆಯಲ್ಲಿ ಆತಂಕಗೊಂಡು ಶಾಲೆಯ ಬಳಿಗೆ ಬಂದೆವು. ಪೊಲೀಸರು ಹುಸಿ ಬಾಂಬ್‌ ಸಂದೇಶ ಎಂದು ತಿಳಿಸಿದ್ದರಿಂದ ನಿರಾಳವಾಯಿತು. ಆದರೆ ಪದೇ ಪದೇ ಶಾಲೆಗಳಿಗೆ ಹುಸಿ ಬಾಂಬ್ ಸಂದೇಶ ಬರುತ್ತಿರುವುದು ಆತಂಕ ಹೆಚ್ಚಿಸಿದೆ’ ಪೋಷಕರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT