ಭಾನುವಾರ, ಫೆಬ್ರವರಿ 28, 2021
23 °C
ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್ ಗಳ ವಾರ್ಷಿಕ ವಹಿವಾಟು ₹11,240 ಕೋಟಿ

ಗ್ರಾಮಾಂತರ ಜಿಲ್ಲೆಯಲ್ಲಿ 203 ಬ್ಯಾಂಕ್‌ ಶಾಖೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ಪ್ರಸ್ತುತ ಗ್ರಾಮಾಂತರ ಜಿಲ್ಲೆಯಲ್ಲಿ ವಿವಿಧ ಬ್ಯಾಂಕ್‌ಗಳ 203 ಶಾಖೆಗಳು ಸಕ್ರಿಯವಾಗಿ ವಹಿವಾಟು ನಡೆಸುತ್ತಿವೆ ಎಂದು ಕೆನರಾ ಬ್ಯಾಂಕ್ ಸಹಾಯಕ ವ್ಯವಸ್ಥಾಪಕ ಶ್ರೀನಿವಾಸ್ ರಾವ್ ಹೇಳಿದರು.

ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಮಟ್ಟದ ಗ್ರಾಹಕರ ಸಂಪರ್ಕ ಮತ್ತು ಸಾಲಮೇಳ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್ ಗಳ ವಾರ್ಷಿಕ ವಹಿವಾಟು ₹11,240 ಕೋಟಿ ಇದೆ. ನಾಲ್ಕು ತಾಲ್ಲೂಕುಗಳ ಗ್ರಾಹಕರ ಹಿತದೃಷ್ಟಿಯನ್ನು ಬ್ಯಾಂಕ್‌ಗಳು ಹೊಂದಿವೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಬ್ಯಾಂಕ್‌ಗಳಿಗೆ ಗ್ರಾಹಕರೇ ದೇವರು, ಯಾವುದೇ ವ್ಯಕ್ತಿ ಅಭಿವೃದ್ಧಿಯಾಗಬೇಕಾದರೆ ಶಿಕ್ಷಣದ ಜೊತೆಗೆ ಆರ್ಥಿಕನೆರವು ಬೇಕು, ಎರಡು ದಶಕಗಳ ಹಿಂದೆ ಸಾಲ ಪಡೆದವರ ಸ್ಥಿತಿ ಚಿಂತಾಜನಕವಾಗಿರುತ್ತಿತ್ತು. ಜಿಲ್ಲೆಯಲ್ಲಿ 203 ಬ್ಯಾಂಕ್‌ ಶಾಖೆಗಳು, 208 ಎ.ಟಿ.ಎಂ ಗಳು ಸಕ್ರಿಯವಾಗಿವೆ ಎಂದು ತಿಳಿಸಿದರು.

ಬ್ಯಾಂಕ್‌ಗಳು ಸರ್ಕಾರದ ಯೋಜನೆಯಡಿ ನೀಡುವ ಯೋಜನೆ ರಿಯಾಯಿತಿಯೊಂದಿಗೆ ಸಾಲ ನೀಡಲು ಸಹಕರಿಸಬೇಕು ಎಂದು ಹೇಳಿದರು.

‘ಜಿಲ್ಲೆಯಲ್ಲಿ ಶಾಶ್ವತ ನೀರಾವರಿ ಯೋಜನೆಗಳಿಲ್ಲದಿದ್ದರೂ ನೆಲಮಮಗಲ, ದೊಡ್ಡಬಳ್ಳಾಪುರ, ಹೊಸಕೋಟೆ ತಾಲ್ಲೂಕಿನಲ್ಲಿ ಕೈಗಾರಿಕಾ ವಲಯಗಳಿವೆ. ಬ್ಯಾಂಕ್‌ಗಳು ಕೃಷಿ, ತೋಟಗಾರಿಕೆ, ಹೈನು ಉದ್ಯಮಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಕೇಂದ್ರ ಸರ್ಕಾರವು ಮುದ್ರಾ ಯೋಜನೆಯಡಿ ಸಾಲ, ಕಿಸಾನ್ ಮಾನ್ ಧನ್ ಯೋಜನೆಯಡಿ ಮಾಸಿಕ ಪಿಂಚಣಿ ವ್ಯವಸ್ಥೆ ನೆರವು ಇದೆ. ನಿಗದಿತ ಅವಧಿಯಲ್ಲಿ ಬ್ಯಾಂಕ್‌ಗಳು ಸಾಲ ನೀಡಬೇಕು, ಗ್ರಾಹಕರನ್ನು ಅಲೆದಾಡಿಸಬಾರದು. ವಿಳಂಬ ಮಾಡಬಾರದು ಎಂಬುದು ನಮ್ಮ ಕಾಳಜಿ’ ಎಂದು ಹೇಳಿದರು.

ಗ್ರಾಹಕರು ಮನೆ, ನಿವೇಶನ, ಹೈನುಗಾರಿಕೆ, ಗುಡಿ ಕೈಗಾರಿಕೆ, ಕೃಷಿ, ತೋಟಗಾರಿಕೆ, ಪ್ರವಾಸೋದ್ಯಮಕ್ಕಾಗಿ ಟ್ಯಾಕ್ಸಿಗಳಿಗೆ ಪಡೆಯುವ ಸಾಲ ಮತ್ತು ಅದರ ಮೇಲಿನ ಬಡ್ಡಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು. ಗ್ರಾಹಕರ ಕುಂದು ಕೊರತೆಗಳ ಬಗ್ಗೆ ಬ್ಯಾಂಕ್‌ಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

ಸಿಂಡಿಕೇಟ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ನಜೀರ್ ಅಹಮದ್ ಮತ್ತು ಜಿಲ್ಲಾ ನಬಾರ್ಡ್ ನ ಪ್ರಬಂಧಕ ಅರುಣ್ ಕುಮಾರ್ ಮಾತನಾಡಿ, ರಾಜ್ಯವು ನೆರೆ ಹಾವಳಿಯಿಂದ ತತ್ತರಿಸಿವೆ. ಇದರಿಂದ ಆರ್ಥಿಕ ಬೆಳವಣಿಗೆಗೆ ಹಿನ್ನಡೆಯಾಗಲಿದೆ. ಒಂದೊಂದು ರೂಪಾಯಿಗೂ ಮೌಲ್ಯವಿದೆ. ಸಮಯ ಮತ್ತು ಗಳಿಸಿದ ಹಣ ಕಳೆದುಕೊಂಡರೆ ಮತ್ತೆ ಬರುವುದಿಲ್ಲ ಎಂದು ಹೇಳಿದರು.

ಕೆನರಾ ಬ್ಯಾಂಕ್ ಕೇಂದ್ರೀಯ ವ್ಯವಸ್ಥಾಪಕ ಡಿ.ವಿಜಯಕುಮಾರ್ ಮಾತನಾಡಿ, ಗ್ರಾಹಕರ ಅವಶ್ಯಕತೆಗೆ ಅನುಗುಣವಾಗಿ ಬ್ಯಾಂಕ್‌ಗಳು ಸಾಲ ನೀಡಬೇಕು. ಕೇಂದ್ರ ಸರ್ಕಾರದ ಆದೇಶದಂತೆ ದೇಶದಲ್ಲಿ 200 ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಸಾಲಮೇಳ ನಡೆಸಲಾಗುತ್ತಿದೆ. ಪ್ರಸ್ತುತ ಗ್ರಾಮಾಂತರ ಜಿಲ್ಲೆಯಿಂದ ದೇವನಹಳ್ಳಿಯಲ್ಲಿ ಇದೇ ಮೊದಲ ಬಾರಿಗೆ ನಡೆಸಲಾಗುತ್ತಿದೆ ಎಂದು ಹೇಳಿದರು.

ದಸರಾ ಮತ್ತು ದೀಪಾವಳಿ ಸಂದರ್ಭದಲ್ಲಿ ಸಾಲದ ಬೇಡಿಕೆ ಹೆಚ್ಚು ಇರುತ್ತದೆ. ಸಾಲ ನೀಡಲು ಬ್ಯಾಂಕಿನವರು ಸಿದ್ಧರಿದ್ದಾರೆಯೇ ಎಂಬುದನ್ನು ಮೊದಲು ಖಾತ್ರಿ ಪಡಿಸಿಕೊಳ್ಳಬೇಕು, ಬ್ಯಾಂಕ್‌ಗಳಲ್ಲಿ ಸಾಲ ಹೆಚ್ಚಾಗಬೇಕು. ಸಿಬ್ಬಂದಿ ಜವಾಬ್ದಾರಿಯನ್ನು ಮರೆಯಬಾರದು. ಗ್ರಾಹಕರು ತಾವು ಪಡೆದ ಸಾಲವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಅಗ್ರಣಿ ಬ್ಯಾಂಕ್ ವ್ಯವಸ್ಥಾಪಕ ಎಂ.ಸಿ. ಮಧುಸೂಧನ್, ವಿವಿಧ ಬ್ಯಾಂಕ್‌ ಶಾಖೆಗಳ ಮುಖ್ಯಸ್ಥರಾದ ಶ್ರೀಧರ್ ಪ್ರಭು, ಮಮತ ಜೋಷಿ, ನರೇಂದ್ರ, ಜಿ.ಕೆ.ಅಗರ್‌ವಾಲ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.