ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ | ಸರ್ಕಾರಕ್ಕೆ ಮಾಹಿತಿ ಇಲ್ಲದ ಸುಂದರ ತಾಣ ದಿಬ್ಬದಬೆಟ್ಟ

ಚಾರಣಿಗರಿಗೆ ಮನೋಲ್ಲಾಸದ ಪ್ರದೇಶ * ಸಾಹಿತ್ಯಾಸ್ತಕರಿಗೂ ಸ್ಫೂರ್ತಿ * ಎಚ್ಚೆತ್ತುಕೊಳ್ಳಲಿದೆಯೇ ಪ್ರವಾಸೋದ್ಯಮ ಇಲಾಖೆ
Last Updated 6 ಜನವರಿ 2020, 4:21 IST
ಅಕ್ಷರ ಗಾತ್ರ

ದೇವನಹಳ್ಳಿ: ಕುರುಚಲ ಕಾಡಿನ ದಿಬ್ಬದಬೆಟ್ಟ ದಿವ್ಯ ಔಷಧಿಗಳ ರಮಣೀಯ ತಾಣ. ಪ್ರಕೃತಿ ಪ್ರಿಯರಿಗೆ, ಚಾರಣಿಗರಿಗೆ ಮನೋಲ್ಲಾಸದ ಜತೆಗೆ ಧಾರ್ಮಿಕ ಭಾವನೆ ಮೂಡಿಸುವ ಶ್ರದ್ಧಾಭಕ್ತಿ ಕೇಂದ್ರ.

ದೇವನಹಳ್ಳಿ ತಾಲ್ಲೂಕಿನ ಕಾರಹಳ್ಳಿ ಗ್ರಾಮದ ಗಡಿಭದ್ರತಾ ಪಡೆ ತರಬೇತಿ ಕೇಂದ್ರದಿಂದ ಹಾದುಹೋದರೆ ಪಂಚಗಿರಿ ಸಾಲುಗಳಲ್ಲಿ ಒಂದಾಗಿರುವ ದಿಬ್ಬಗಿರಿ ಬೆಟ್ಟದ ನಯನ ಮನೋಹರ ದೃಶ್ಯ ಕಣ್ಮನ ಸೆಳೆಯುತ್ತದೆ. ಪ್ರಕೃತಿಯ ಶೃಂಗಾರ ಎಂಬಂತಿರುವ ನಂದಿಗಿರಿ, ಸ್ಕಂದಗಿರಿ, ಬ್ರಹ್ಮಗಿರಿ, ಚನ್ನಗಿರಿ ಬೆಟ್ಟಗಳ ಸಾಲಿನಲ್ಲಿ ಬರುವ ದಿವ್ಯಗಿರಿ (ದಿಬ್ಬಗಿರಿ) ದೇವನಹಳ್ಳಿ ಅರಣ್ಯ ವಲಯ ವ್ಯಾಪ್ತಿಯಲ್ಲಿ ಶೇ75ರಷ್ಟು ಭಾಗ ಹೊಂದಿದೆ.

ದೊಡ್ಡಬಳ್ಳಾಪುರ ಅರಣ್ಯ ವಲಯ ವ್ಯಾಪ್ತಿಯಲ್ಲಿ ಶೇ 25ರಷ್ಟು ಭಾಗ ಇದೆ. 560ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದ ಅರಣ್ಯ ವ್ಯಾಪ್ತಿ ಹೊಂದಿದೆ. ಈ ಬೆಟ್ಟ ನೆಲಮಟ್ಟದಿಂದ 1755ರಿಂದ 1780ಅಡಿ ಎತ್ತರದಲ್ಲಿದೆ. ವಿವಿಧ ಜಾತಿಯ ಔಷಧ ಗಿಡ –ಮರ, ಸಸ್ಯಗಳು ಇವೆ.

ಕಾಡುಬಿಕ್ಕೆ, ದೇವದಾರು, ತರೇದ, ರಕ್ತಭೂತಾಳಿ, ಬಿಳಿ ಮತ್ತು ಕೆಂಪು ಗುಲಗಂಜಿ ಬಳ್ಳಿ, ಪಾಪಸುಕಳ್ಳಿ, ಕಾರೆಗಿಡ, ಬಿಳಿಎಕ್ಕ, ಕಮರ, ಸುಬಾಬುಲ್, ತಂಗಟಿ, ಕೆಂಪುಉತ್ತರಾಣಿ, ಗಜ್ಜಗದಗಿಡ, ಅಮೃತಬಳ್ಳಿ, ವಿಷಮಧಾರಿಬಳ್ಳಿ, ಮುಂಗರುಬಳ್ಳಿ, ತುಗ್ಗಲಿ, ಸೀತಾಫಲ,ರಾಮಪತ್ರೆ ನೂರಾರು ಜಾತಿಯ ಔಷಧ ಗಿಡ, ಮರ, ಬಳ್ಳಿಗಳು ಯಥೇಚ್ಚವಾಗಿ ಬೆಳೆದಿವೆ. ಇನ್ನು ನೂರಾರು ಜಾತಿ ಔಷಧಿಯುಕ್ತ ಗಡ್ಡೆ, ಮರಗಳ ತೊಗಟೆ ಮತ್ತು ಬೇರುಗಳು ಇಲ್ಲಿವೆ.

ಕೊರಟಗೆರೆ ಸಿದ್ದರಬೆಟ್ಟ, ಚಿಕ್ಕಮಗಳೂರಿನ ಬಾಬಾಬುಡನ್‌ಗಿರಿ ಮತ್ತು ಕಲ್ಲತ್ತಗಿರಿಯಲ್ಲಿ ಸಿಗುವಂತೆ ಇಲ್ಲಿಯೂ ವೈವಿಧ್ಯಮಯ ಔಷಧ ಬಳ್ಳಿಗಳು ಸಿಗುತ್ತವೆ. ದಿವ್ಯೌಷಧಿಗಿರಿ ಎಂದು ಕರೆಯಲಾಗುತ್ತಿತ್ತು ಈಗ ದಿವ್ಯಗಿರಿ ಎಂದು ಕರೆಯಲಾಗುತ್ತಿದೆ ಎನ್ನುತ್ತಾರೆ ಸ್ಥಳೀಯ ಗ್ರಾಮಸ್ಥರು. ಬಾದೇಹುಲ್ಲು ( ಲಾವಂಚಸಸ್ಯ) ಶತಮಾನಗಳ ಹಿಂದೆಯೇ ಮನೆಗಳ ಹೊದಿಕೆಗೆ ಬಳಸಲಾಗುತ್ತಿತ್ತು. ಈಗ ಅಲ್ಲಲ್ಲಿ ಡಾಬಾಗಳ ವಿನ್ಯಾಸಕ್ಕೆ ಬಳಸಲಾಗುತ್ತಿದೆ.

ಮುಂಜಾನೆ ಮತ್ತು ಸಂಜೆ ಬೆಟ್ಟ ಏರುವ ಸಾಹಸ ನಿಜಕ್ಕೂ ರೋಮಾಂಚನ. ಸೂರ್ಯಕಿರಣ ಸ್ಪರ್ಶ ಮೈಮನಗಳಲ್ಲಿ ಪುಳಕ ಮೂಡಿಸುತ್ತದೆ. ಸಾಹಿತ್ಯಾಸ್ತಕರ ಸೃಜನಶೀಲತೆಗೆ ಸ್ಫೂರ್ತಿ ತುಂಬುತ್ತದೆ. ಪ್ರಕೃತಿ ಪ್ರಿಯರನ್ನು ಈ ಬೆಟ್ಟ ಕೈಬೀಸಿ ಕರೆಯುತ್ತದೆ. ಬೆಟ್ಟದ ತಳಮಟ್ಟದ ಆರಂಭದಿಂದ 500ಮೀವರೆಗೆ ಉತ್ತಮವಾದ ಮೆಟ್ಟಿಲುಗಳು ಇವೆ. ಮಧ್ಯದಲ್ಲಿ 150ಮೀ ಬೆಟ್ಟ ನೇರ ಮತ್ತು ಕಡಿದಾಗಿದೆ. ಸಾಹಸದಿಂದ ಬೆಟ್ಟ ಹತ್ತಿದರೆ ದಿವ್ಯಗಿರಿಶ್ವರ ದೇಗುಲದ ದರ್ಶನ ಭಾಗ್ಯ ಸಿಗಲಿದೆ. ದೇವಾಲಯದ ಪಕ್ಕದಲ್ಲಿ ಸಿಹಿನೀರಿನ ದೊಣೆ ಇದೆ. ಸ್ಥಳೀಯ ಪ್ರಾಣಿ ಪಕ್ಷಿಗಳಿಗೆ ದಾಹ ತೀರಿಸುವ ಏಕೈಕ ದೊಣೆ ಇದಾಗಿದೆ. ಶಿವನ ಸುಂದರ ಲಿಂಗ ಮತ್ತು ಪಾರ್ವತಿದೇವಿ, ಗಣೇಶನಮೂರ್ತಿ ಗಮನ ಸೆಳೆಯುತ್ತದೆ. ದೇವಾಲಯದಿಂದ ಮುಂದುವರಿದು 300ಮೀ ಬೆಟ್ಟ ಏರಿದರೆ ಸುತ್ತಮುತ್ತಲಿನ ಪ್ರಶಾಂತ ವಾತಾವರಣ ಮನಸ್ಸಿಗೆ ಮುದ ನೀಡುತ್ತದೆ.

ಪುರಾತನ ಐತಿಹಾಸಿಕ ಬೆಟ್ಟವಾಗಿದ್ದರೂ ಪ್ರಾಚ್ಯವಸ್ತು ಸಂರಕ್ಷಣೆ ಮತ್ತು ಪುರಾತತ್ವ ಇಲಾಖೆಗೆ ಒಳಪಟ್ಟಿಲ್ಲ. ಸ್ಥಳೀಯ ಪಾರಂಪರಿಕ ಭಕ್ತರು ದೇವಾಲಯ ದುರಸ್ತಿಗೊಳಿಸಿದ್ದಾರೆ. ಸ್ಥಳೀಯ ತರಬೇತಿ ಕೇಂದ್ರದ ಗಡಿಭದ್ರತಾಪಡೆಗೆ ಆಯ್ಕೆಯಾಗಿರುವ ಯೋಧರು ದೈಹಿಕ ಕಸರತ್ತು ಮಾಡುವ ಸಂದರ್ಭದಲ್ಲಿ ಮರಳಿನ ಸಿಮೆಂಟ್ ಚೀಲ ಮತ್ತು ಇಟ್ಟಿಗೆಗಳನ್ನು ಹೊತ್ತು ಬೆಟ್ಟದ ಮೇಲೆ ತಂದ ಪರಿಣಾಮ ದೇವಾಲಯ ದುರಸ್ತಿಗೊಳ್ಳಲು ಸಹಾಯಕವಾಗಿದೆ. ಈ ಬಗ್ಗೆ ಸರ್ಕಾರಕ್ಕೂ ಮಾಹಿತಿ ಇಲ್ಲ ಎನ್ನುತ್ತಾರೆ ತಾಲ್ಲೂಕು ಪಂಚಾಯಿತಿ ಸದಸ್ಯ ಕಾರಹಳ್ಳಿ ಶ್ರೀನಿವಾಸ್.

ಅಪಾರ ಪ್ರಮಾಣದ ಸಸ್ಯ, ಪ್ರಾಣಿ, ಪಕ್ಷಿ, ಸಂಕುಲ ಒಳಗೊಂಡಿರುವ ಗಿರಿಧಾಮಕ್ಕೆ 53ವರ್ಷಗಳ ಹಿಂದೆ ವಿದ್ಯುತ್ ಸಂಪರ್ಕ ಕಲ್ಪಿಸಿರುವುದು ಹೊರತುಪಡಿಸಿದರೆ ಬೇರೆ ಯಾವುದೇ ರೀತಿ ಮೂಲಸೌಲಭ್ಯಗಳಿಲ್ಲ.ಬೇಟೆಗಾರರ ಸದ್ದು ಅಡಗಿಸಲು ಗಸ್ತು ವ್ಯವಸ್ಥೆ ಮಾಡಬೇಕು. ಅರಣ್ಯದ ಆಯಾ ಕಟ್ಟಿನಲ್ಲಿ ಚಕ್ ಡ್ಯಾಂ ಮತ್ತು ಸಿಮೆಂಟ್ ತೊಟ್ಟಿ ನಿರ್ಮಾಣ ಮಾಡಿ ಕಾಡುಮೃಗ ಮತ್ತು ಪಕ್ಷಿಸಂಕುಲಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಕಾರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ದೇವರಾಜ್ ಅವರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT