ವಿಜಯಪುರ(ದೇವನಹಳ್ಳಿ): ಗೊಡ್ಲುಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಮಂಗಳವಾರ ಎಂ.ಜಗದೀಶ್ ಅಧ್ಯಕ್ಷತೆಯಲ್ಲಿ 2024-25ನೇ ಸಾಲಿನ ಮೊದಲ ಹಂತದ ಗ್ರಾಮಸಭೆ ನಡೆಯಿತು. ಅಧಿಕಾರಿಗಳು ತಮ್ಮ ಇಲಾಖೆಗಳಿಂದ ಸಿಗುವ ಸೌಲಭ್ಯ ಕುರಿತು ಜನರಿಗೆ ಮನವರಿಕೆ ಮಾಡಿಕೊಟ್ಟರು.
ಸಭೆಗೆ ಒಬ್ಬ ತಾಲ್ಲೂಕು ಮಟ್ಟದ ಸರ್ಕಾರಿ ಯೋಜನೆಗಳ ಅನುಷ್ಟಾನಾಧಿಕಾರಿ ಬಂದಿಲ್ಲ. ಹಿಂದಿನ ಗ್ರಾಮಸಭೆಯಲ್ಲಿ ಕೈಗೊಂಡಿರುವ ತೀರ್ಮಾನ ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬಂದಿದೆ ಎಂಬುದನ್ನು ಹೇಳುವವರಿಲ್ಲ. ಸಾರ್ವಜನಿಕರು ಕೊಟ್ಟಿರುವ ಅರ್ಜಿಗಳ ಸ್ಥಿತಿಗತಿ ಏನಾಗಿದೆ ಎಂಬುದಕ್ಕೆ ದಾಖಲೆ ಇಲ್ಲಎಂದು ಜನರು ಪ್ರಶ್ನೆ ಮಾಡಿದರು.
ಜಲಜೀವನ್ ಮಿಷನ್ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ಎರಡು ವರ್ಷವಾದರೂ ಪೂರ್ಣಗೊಂಡಿಲ್ಲ. ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ. ಇದನ್ನು ಕೇಳುವುದಕ್ಕೆ ಪೊಲೀಸರೂ ಬಂದಿಲ್ಲ. ಅಬಕಾರಿ ಇಲಾಖೆಯವರೂ ಬಂದಿಲ್ಲ. ನಾವು ಯಾರನ್ನು ಕೇಳಬೇಕು? ಸರ್ಕಾರಿ ಭೂಮಿ ಗುರ್ತಿಸಿ, ವಸತಿ ಯೋಜನೆಗಾಗಿ ಮಂಜೂರು ಮಾಡಿಕೊಡಿ ಎಂದು ಹಲವು ಬಾರಿ ಅರ್ಜಿ ಕೊಟ್ಟರೂ ಏನೂ ಪ್ರಯೋಜನವಾಗಿಲ್ಲ. ತಾಲ್ಲೂಕು ಪಂಚಾಯಿತಿಯಿಂದ ಇ.ಒ ಆಗಲಿ, ಎ.ಡಿ.ಆಗಲಿ ಬಂದಿಲ್ಲ. ಕಂದಾಯ ಇಲಾಖೆ ಅಧಿಕಾರಿಗಳು ಯಾರೂ ಬಂದಿಲ್ಲ ಎಂದು ಜನರು ಪ್ರಶ್ನೆ ಮಾಡಿದರು.
ಹಳ್ಳಿಗಳಿಗೆ ಸಂಪರ್ಕ ರಸ್ತೆ ನಿರ್ಮಿಸಲು ₹3ಕೋಟಿ ವೆಚ್ಚದಲ್ಲಿ ಕ್ರಿಯಾಯೋಜನೆ ತಯಾರಿಸಲಾಗಿದೆ ಎಂದು ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಎಂಜಿನಿಯರ್ ಶಾಂಭವಿ ಹೇಳುತ್ತಿದ್ದಂತೆ ಕೆರಳಿದ ಮುಖಂಡರು, ಕ್ರಿಯಾಯೋಜನೆ ಅನುಮೋದನೆಯಾಗಿದ್ದರೆ ಸಾರ್ವಜನಿಕರಿಗೆ ಮಾಹಿತಿ ಕೊಡಿ. ಸುಳ್ಳು ಹೇಳಿ ದಿಕ್ಕುತಪ್ಪಿಸಬೇಡಿ. ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿರುವ ಸಾಕಷ್ಟು ಕಾಮಗಾರಿ ಅನುದಾನವಿಲ್ಲದೆ ಸ್ಥಗಿತಗೊಂಡಿದೆ ಎಂದರು. ಬಯಾಪದಿಂದ 5 ವರ್ಷಗಳಲ್ಲಿ ಒಂದು ರೂಪಾಯಿ ಹಣ ಬಿಡುಗಡೆಯಾಗಿಲ್ಲವೆಂದು ಎಂಜಿನಿಯರ್ ಹೇಳಿದರು.
ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಸರ್ಕಾರಿ ವೈದ್ಯರು ಮತ್ತು ಖಾಸಗಿ ಆಸ್ಪತ್ರೆ ನಡುವೆ ಒಳಒಪ್ಪಂದ ನಡೆಯುತ್ತಿದೆ. ಜನರಿಗೆ ಈ ಬಗ್ಗೆ ಅರಿವು ಮೂಡಿಸಿಲ್ಲ ಎಂದು ಮುಖಂಡ ಪುರ ಕೃಷ್ಣಪ್ಪ ಆಕ್ರೋಶ ವ್ಯಕ್ತಪಡಿಸಿದರು.
ನರೇಗಾ ಸದ್ಭಳಕೆ ಮಾಡಿಕೊಳ್ಳಲು ಕರೆ: ನರೇಗಾ ಯೋಜನೆಯಡಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಿಕೊಳ್ಳಬಹುದು. ಆದರೆ, ಜನರು ಆಸಕ್ತಿ ತೋರಿಸುತ್ತಿಲ್ಲ ಎಂದು ಪಿಡಿಒ ಮಂಜುನಾಥ್ ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಜಗದೀಶ್ ಮಾತನಾಡಿ, ಸಾರ್ವಜನಿಕರು ಗ್ರಾಮಸಭೆಯಲ್ಲಿ ನೀಡಿರುವ ಎಲ್ಲ ಅರ್ಜಿ ತ್ವರಿತವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಭಾಗ್ಯಲಕ್ಷ್ಮಿ,ಕಾರ್ಯದರ್ಶಿ ಶ್ರೀನಿವಾಸ್,ಸದಸ್ಯರಾದ ಆನಂದಮ್ಮ, ಮುರಳಿಮೋಹನ್,ಹರೀಶ,ರತ್ನಮ್ಮ,ಮುರಳೀಧರ, ಪದ್ಮಮ್ಮ, ಸಿ.ಕೋಮಲ, ಜಯಮ್ಮ,ಎನ್.ಕೃಷ್ಣಮೂರ್ತಿ, ಕೆ.ಲಾವಣ್ಯ, ಸುರೇಶ್.ಕೆ, ಮುನಿಲಕ್ಷ್ಮಮ್ಮ, ಮುನಿಯಪ್ಪ,ಎ.ರಂಜಿತ, ಮಹೇಂದ್ರಬಾಬು, ಎಂ.ಮಂಜುಳಮ್ಮ, ಕೆ.ಗೀತಾ, ಎನ್.ರಾಜಣ್ಣ ಮುಖಂಡರಾದ ನಾರಾಯಣಸ್ವಾಮಪ್ಪ, ಕಲ್ಯಾಣ್ ಕುಮಾರ್ ಬಾಬು ಇದ್ದರು.
ಮನೆ ಕಟ್ಟಿಕೊಳ್ಳಲು ಜಾಗ ಕೊಡಿ
ಹರಳೂರು ನಾಗೇನಹಳ್ಳಿ ಗ್ರಾಮದಲ್ಲಿ ಜಾಗ ಕೊಡಿ ಎಂದು ಹಲವು ಬಾರಿ ಮನವಿ ಮಾಡಿದರೂ ಪರಿಶಿಷ್ಟರು ಎನ್ನುವ ಕಾರಣಕ್ಕೆ ಒಂದು ಅಡಿ ಜಾಗ ಕೊಡಲಿಲ್ಲ. ಸದಸ್ಯರು ಸವರ್ಣೀಯರ ಅಣತಿಯಂತೆ ಕೆಲಸ ಮಾಡುತ್ತಿದ್ದಾರೆ. ಹಸು ಶೆಡ್ ನಿರ್ಮಾಣಕ್ಕೆ ಜಾಗ ಕೊಡ್ತಾರೆ. ನಮಗೇಕೆ ಕೊಡುವುದಿಲ್ಲ? ನಮಗೆ ಹಕ್ಕಿಲ್ಲವೇ? ಮೊದಲು ನಮಗೆ ಮನೆ ಕಟ್ಟಿಕೊಳ್ಳಲು ಜಾಗ ಮಂಜೂರು ಮಾಡಿಕೊಡಿ ಎಂದು ಗ್ರಾಮಸ್ಥರಾದ ಕೃಷ್ಣಪ್ಪ ಓಬಲೇಶ್ ಒತ್ತಾಯ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.