ಭಾನುವಾರ, ಆಗಸ್ಟ್ 1, 2021
20 °C
ದೊಡ್ಡಬಳ್ಳಾಪುರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸ್ಮಾರ್ಟ್‌ ತರಗತಿಗೆ ಚಾಲನೆ

ಆನ್‌ಲೈನ್‌ ತಂತ್ರಜ್ಞಾನದ ಸದ್ಬಳಕೆಗೆ ಸಲಹೆ: ಕೆ. ಶ್ರೀನಿವಾಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ‘ಉನ್ನತ ಶಿಕ್ಷಣ ಪಡೆಯಲು ಹಿಂದೆಂದಿಗಿಂತಲೂ ಹೆಚ್ಚಿನ ಅನುಕೂಲಗಳಿದ್ದು, ಡಿಜಿಟಲ್ ತಂತ್ರಜ್ಞಾನ, ಅಂತರ್ಜಾಲದ ಮೂಲಕ ಹೆಚ್ಚಿನ ವಿಷಯಗಳನ್ನು ಅರಿಯಬಹುದಾಗಿದೆ. ಕೋವಿಡ್ ಸಂದರ್ಭದಲ್ಲಿ ಆನ್‌ಲೈನ್‌ ತಂತ್ರಜ್ಞಾನವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಉತ್ತಮ ಶಿಕ್ಷಣ ಪಡೆಯಬೇಕಿದೆ’ ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಹೇಳಿದರು.

ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸ್ಮಾರ್ಟ್ ಕರ್ನಾಟಕ ಯೋಜನೆಯಡಿ ಪ್ರಥಮ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಟ್ಯಾಬ್‍ ವಿತರಣೆ ಹಾಗೂ ಕಾಲೇಜಿನಲ್ಲಿ ಸ್ಮಾರ್ಟ್‌ ತರಗತಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾವು ವ್ಯಾಸಂಗ ಮಾಡುತ್ತಿದ್ದಾಗ ಐಎಎಸ್, ಕೆಎಎಸ್ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯ ಮಾಹಿತಿ ಹಾಗೂ ಪುಸ್ತಕಗಳ ಕೊರತೆ ಹೆಚ್ಚಾಗಿತ್ತು. ಆದರೆ, ಈಗ ಬೆರಳತುದಿಯಲ್ಲಿ ಎಲ್ಲಾ ಲಭ್ಯವಿದ್ದು, ಕಲಿಕೆ ಸುಲಭವಾಗುತ್ತಿದೆ ಎಂದರು.

ಕೋವಿಡ್‍ನ ಕಾರಣದಿಂದ ಆನ್‌ಲೈನ್‌ ಶಿಕ್ಷಣ ಅನಿವಾರ್ಯವಾಗಿದ್ದು, ಸರ್ಕಾರ ನೀಡಿರುವ ಟ್ಯಾಬ್‍ಗಳಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಆದರೆ, ಹೆಚ್ಚಿನ ಮೊಬೈಲ್ ಅಥವಾ ಟ್ಯಾಬ್ ಬಳಕೆ ಕಣ್ಣಿನ ದೋಷಗಳಿಗೆ ಕಾರಣವಾಗಿದ್ದು, ವಿದ್ಯಾರ್ಥಿಗಳು ಅವಶ್ಯವಿದ್ದಷ್ಟು ಬಳಸಬೇಕಿದೆ ಎಂದು ಹೇಳಿದರು.

ಶಾಸಕ ಟಿ. ವೆಂಕಟರಮಣಯ್ಯ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳಾಗಿವೆ. ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಮೂಲಸೌಕರ್ಯ ಹೆಚ್ಚಾಗಿದೆ. ಕಾಲೇಜಿನ ನೀರಿನ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

ಸರ್ಕಾರ ನೀಡಿರುವ ಟ್ಯಾಬ್‍ಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು. ಈ ಯೋಜನೆಯಿಂದ ಹಲವಾರು ವಿದ್ಯಾರ್ಥಿಗಳಿಗೆ ಉಪಯೋಗವಾಗಲಿದೆ. ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿಗೆ ತೋಟಗಾರಿಕೆ ಇಲಾಖೆ ಆವರಣದಲ್ಲಿ ಸ್ಥಳ ಮಂಜೂರು ಮಾಡಲು ಜಿಲ್ಲಾಧಿಕಾರಿ ಅವರು ಕ್ರಮವಹಿಸಬೇಕು ಎಂದು ಮನವಿ ಮಾಡಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಎನ್. ಶ್ರೀನಿವಾಸಯ್ಯ ಮಾತನಾಡಿ, ದ್ವಿತೀಯ ಪಿಯುಸಿ ಫಲಿತಾಂಶ ಹೆಚ್ಚಾಗಿರುವುದರಿಂದ ಕಾಲೇಜಿಗೆ ದಾಖಲಾತಿಗಳು ಹೆಚ್ಚಾಗಲಿವೆ. ಕಾಲೇಜಿಗೆ ಡೆಸ್ಕ್, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು ಎಂದರು.

ಕಾಲೇಜಿನ ವಿದ್ಯಾರ್ಥಿಗಳಾದ ಅನನ್ಯ, ತರುಣ್ ಮಾತನಾಡಿ, ಟ್ಯಾಬ್ ವಿತರಣೆಯಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಿದ್ದು, ಶಿಕ್ಷಣಕ್ಕೆ ನೆರವಾಗುವ ಈ ಯೋಜನೆ ನೀಡಿದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಉಪ ವಿಭಾಗಾಧಿಕಾರಿ ಅರುಳ್‌ಕುಮಾರ್, ತಹಶೀಲ್ದಾರ್ ಟಿ.ಎಸ್. ಶಿವರಾಜ್, ನಗರಸಭೆ ಪೌರಾಯುಕ್ತ ರಮೇಶ್ ಎಸ್. ಸುಣಗಾರ್, ಸರ್ಕಾರಿ ಪದವಿ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಭಾರತಿ ಶ್ಯಾಮರಾಜ್, ಪ್ರಾಧ್ಯಾಪಕರಾದ ಸದಾಶಿವ ರಾಮಚಂದ್ರಗೌಡ, ನರಸಿಂಹಮೂರ್ತಿ, ವಿ.ಆರ್. ಮಹೇಶ್, ಕೆಂಪರಾಜು, ಮನ್ಸೂರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು