ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಘಟಿತರಾಗಿ ಸಂಸ್ಕೃತಿ ಉಳಿಸಲು ಸಲಹೆ

Last Updated 1 ಅಕ್ಟೋಬರ್ 2019, 13:03 IST
ಅಕ್ಷರ ಗಾತ್ರ

ವಿಜಯಪುರ: ‘ರಂಗಕಲೆ ಉಳಿಸಿ, ಬೆಳೆಸುವ ತುರ್ತು ಇದೆ. ಅದಕ್ಕಾಗಿ ತಾಲ್ಲೂಕು ಮಟ್ಟದಲ್ಲಿ ಕಲಾವಿದರ ಸಮ್ಮೇಳನ ನಡೆಸುವ ಮೂಲಕ ಎಲ್ಲೆಡೆ ಕನ್ನಡದ ಕಂಪು ಹರಡಿಸಬೇಕು’ ಎಂದು ಬೂದಿಗೆರೆ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಶ್ರೀನಿವಾಸಗೌಡ ಹೇಳಿದರು.

ಇಲ್ಲಿನ ಸಂತೆ ಮೈದಾನದಲ್ಲಿರುವ ಕನ್ನಡ ಕಲಾವಿದರ ಸಂಘದ ಆವರಣದಲ್ಲಿ ಆಯೋಜಿಸಿದ್ದ 59ನೇ ಮಾಸದ ಕನ್ನಡದೀಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತ ಜನಜಾಗೃತಿ ಸೇನೆ ರಾಜ್ಯ ಘಟಕದ ಅಧ್ಯಕ್ಷ ಸಿ.ಮುನಿಯಪ್ಪ ಮಾತನಾಡಿ, ‘ಯುವಜನರಲ್ಲಿ ರಂಗಭೂಮಿ ಮೇಲಿನ ಆಸಕ್ತಿ ಕಡಿಮೆಯಾಗುತ್ತಿದೆ. ಇದಕ್ಕೆ ಮೊಬೈಲ್, ವಾಟ್ಸ್‌ ಆ್ಯಪ್, ಸಾಮಾಜಿಕ ಜಾಲತಾಣ ಅತಿಬಳಕೆ ಕಾರಣ. ಇದರಿಂದಾಗಿ ಯುವಜನರು ಹಾದಿತಪ್ಪುತ್ತಿದ್ದಾರೆ. ಅಶ್ಲೀಲ ಮಾಹಿತಿಗಳಿಂದ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತಿದೆ. ಪರಿಣಾಮ ಪೌರಾಣಿಕ ನಾಟಕ, ಹರಿಕಥೆ, ಜನಪದ ಸಾಹಿತ್ಯದ ಕಡೆಗೆ ಒಲವು ಕಡಿಮೆಯಾಗುತ್ತಿದ್ದು, ಕನ್ನಡಪರ ಸಂಘಟನೆಗಳು ಎಚ್ಚರವಾಗಬೇಕು’ ಎಂದು ಹೇಳಿದರು.

ಭಾರತೀಯ ಮಾನವ ಹಕ್ಕುಗಳ ಹಿತರಕ್ಷಣಾ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಹೊಸಕೋಟೆ ಶ್ರೀನಿವಾಸ್ ಮಾತನಾಡಿ, ‘ಕನ್ನಡ ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳೆಸಬೇಕಾದರೆ ಕನ್ನಡಪರ ಸಂಘಟನೆಗಳು ಸದೃಢವಾಗಬೇಕು. ಇಂದು ಸಂಘಟನೆಗಳು ಸಾಗುತ್ತಿರುವ ಹಾದಿ ಗಮನಿಸಿದರೆ ಭಾಷೆ, ಮತ್ತು ಸಾಹಿತ್ಯದ ಉಳಿವು ಬೆಳವಣಿಗೆಗಾಗಿ ದಶಕಗಳ ಕಾಲ ಹೋರಾಟದ ಹಾದಿಯಲ್ಲೇ ಸಾಗಬೇಕಿರುವ ಪರಿಸ್ಥಿತಿ ನಿರ್ಮಾಣವಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಅಖಿಲ ಕರ್ನಾಟಕ ಕನ್ನಡಾಂಬಿಕೆ ಹಿತರಕ್ಷಣಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಅಂಕತಟ್ಟಿ ಎಂ. ರಾಜೇಂದ್ರಗೌಡ ಮಾತನಾಡಿ, ‘ಕಲೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಅದನ್ನು ಗುರುತಿಸುವ ವೇದಿಕೆ ಕಲ್ಪಿಸುವ ಕೆಲಸ ಮಾಡಬೇಕು. ಇಂತಹ ಸಂಘಟನೆಗಳನ್ನು ಬೆಂಬಲಿಸುವಂತಹ ಕಾರ್ಯ ಮಾಡಬೇಕು’ ಎಂದರು.

ಚಲನಚಿತ್ರ ನಿರ್ಮಾಪಕ ಮಂಡಿಬೆಲೆ ಮುನೇಗೌಡ ಮಾತನಾಡಿ, ‘ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಮೂಲ ಸಂಸ್ಕೃತಿಗೆ ಧಕ್ಕೆಯಾಗುತ್ತಿದೆ. ನಾಡಿನ ಜನಪದ, ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಗ್ರಾಮಾಂತರ ಪ್ರದೇಶಗಳಿಗೆ ಕೊಂಡೊಯ್ಯುವ ಕಾರ್ಯ ಎಲ್ಲರೂ ಮಾಡಬೇಕು. ಹಳ್ಳಿಗಳಲ್ಲಿ ಎಲೆಮರೆ ಕಾಯಿಯಂತಿರುವ ಯುವ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಬೇಕು’ ಎಂದರು.

ಕಲಾವಿದ ಕಂಟನಕುಂಟೆ ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಸಂಗೀತ ಶಿಕ್ಷಕ ಎಂ.ವಿ.ನಾಯ್ಡು, ಗಾಯಕರಾದ ಮಹಾತ್ಮಾಂಜನೇಯ, ನರಸಿಂಹಪ್ಪ ಅವರಿಂದ ಗೀತಗಾಯನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕನ್ನಡ ಕಲಾವಿದರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಾಜಗೋಪಾಲ್, ಡಾ.ವಿ.ಎನ್.ರಮೇಶ್, ಜೆ.ಆರ್.ಮುನಿ ವೀರಣ್ಣ, ಬಿ.ಕೆ.ಶಿವಪ್ಪ, ರಬ್ಬನಹಳ್ಳಿ ಕೆಂಪಣ್ಣ, ಗೋವಿಂದರಾಜು, ಸುಬ್ರಮಣಿ, ಮಹೇಶ್, ವೆಂಕಟರಮಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT