ಆನೇಕಲ್:ಗಡಿ ಭಾಗದಲ್ಲಿ ಕನ್ನಡ ಭಾಷೆಯನ್ನು ಜತನದಿಂದ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಈ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಕನ್ನಡ ಕಾರ್ಯಕ್ರಮಗಳ ಮೂಲಕ ಕನ್ನಡದ ಕಂಪನ್ನು ಪಸರಿಸಬೇಕು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ತಿಳಿಸಿದರು.
ತಾಲ್ಲೂಕಿನ ಮರಸೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಿರ್ಮಿಸಿರುವ ಕನ್ನಡ ಭವನ ಉದ್ಘಾಟಿಸಿ ಅವರು ಮಾತನಾಡಿದರು.
ಆನೇಕಲ್ ತಾಲ್ಲೂಕು ಗಡಿ ಭಾಗವಾಗಿದೆ. ಆದರೆ ವಿಭಿನ್ನ ಸಂಸ್ಕೃತಿ, ಸಾಹಿತ್ಯ, ಪರಂಪರೆ ಈ ಭಾಗದಲ್ಲಿದೆ. ಕನ್ನಡ, ತೆಲುಗು, ತಮಿಳು ಭಾಷೆಗಳ ಸಾಮರಸ್ಯವಿದೆ. ಬನ್ನೇರುಘಟ್ಟ ಅರಣ್ಯ ಪ್ರದೇಶ, ಮುತ್ಯಾಲಮಡುವು ಪ್ರವಾಸಿಧಾಮವಿದೆ. ಜನಪದ ಕಲೆಗಳು ಸಮೃದ್ಧವಾಗಿವೆ. ಕನ್ನಡ ಭವನದ ಮೂಲಕ ಕವಿಗೋಷ್ಠಿ, ವಿಚಾರ ಸಂಕಿರಣ ಸೇರಿದಂತೆ ಕನ್ನಡ ಪರ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಬೇಕು ಎಂದರು.
ಶಾಸಕ ಬಿ. ಶಿವಣ್ಣ ಮಾತನಾಡಿ, ತಾಲ್ಲೂಕಿನಲ್ಲಿ ಮೊದಲ ಕನ್ನಡ ಭವನ ಇದಾಗಿದೆ. 2017ರಲ್ಲಿ ಭೂಮಿಪೂಜೆ ನೆರವೇರಿಸಲಾಗಿತ್ತು. ಸುಸಜ್ಜಿತವಾದ ಕನ್ನಡ ಭವನವು ದಾನಿಗಳ ಸಹಕಾರದಿಂದ ನಿರ್ಮಾಣವಾಗಿದೆ. ಕನ್ನಡ ಭವನದಲ್ಲಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಭವನ ನಿರ್ಮಾಣಕ್ಕೆ ಸಾರ್ಥಕತೆ ನೀಡಬೇಕು ಎಂದು ಸಲಹೆ ನೀಡಿದರು.
ಆಡಳಿತದ ಎಲ್ಲಾ ಹಂತಗಳಲ್ಲೂ ಕನ್ನಡ ಭಾಷೆ ಬಳಕೆಯಾಗಬೇಕು. ಸಾಹಿತ್ಯ ಚಟುವಟಿಕೆಗಳು ಹೆಚ್ಚು ಹೆಚ್ಚು ಮಾಡುವ ಮೂಲಕ ನಾಡು, ನುಡಿಯ ಬೆಳವಣಿಗೆಗೆ ಕೊಡುಗೆ ನೀಡಬೇಕು ಎಂದರು.
ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ. ಸೋಮಶೇಖರ್, ಸಾಹಿತಿ ಬೈರಮಂಗಲ ರಾಮೇಗೌಡ, ತಹಶೀಲ್ದಾರ್ ಪಿ. ದಿನೇಶ್, ಮರಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಿತಾ, ಉಪಾಧ್ಯಕ್ಷ ವೆಂಕಟಸ್ವಾಮಿ ರೆಡ್ಡಿ, ಮುಖಂಡರಾದ ಪುರುಷೋತ್ತಮ ರೆಡ್ಡಿ, ಪ್ರಭಾಕರರೆಡ್ಡಿ, ಬಂಡಾಪುರ ರಾಮಚಂದ್ರ, ಚಿನ್ನಪ್ಪ ವೈ. ಚಿಕ್ಕಹಾಗಡೆ, ರಾಮಕೃಷ್ಣಾರೆಡ್ಡಿ, ಕೆ.ಎಸ್. ನಟರಾಜ್, ನಾಗವೇಣಿ, ಕನ್ನಡತಿ ಭಾಗೀರಥಿ, ಮಾಯಸಂದ್ರ ನಾಗರಾಜು ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.