ಮಂಗಳವಾರ, ಮಾರ್ಚ್ 21, 2023
24 °C
ರೈತ ಸಂಘದ ನೇತೃತ್ವದಡಿ ಪ್ರತಿಭಟನೆ

ರೈತರ ಭೂಮಿ ಅತಿಕ್ರಮಣ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನರಾಯಪಟ್ಟಣ (ದೇವನಹಳ್ಳಿ): ತಾಲ್ಲೂಕಿನ ಭಟ್ರಮಾರೇನಹಳ್ಳಿಯಲ್ಲಿ ಕೈಗಾರಿಕೆ ಉದ್ದೇಶಕ್ಕೆ ಅಧಿಸೂಚನೆಗೆ ಒಳಪಡದೆ ಇದ್ದ ಭೂಮಿಯನ್ನು ಕಾನೂನುಬಾಹಿರವಾಗಿ ಕೆಐಎಡಿಬಿ ಅಧಿಕಾರಿಗಳು ಅಕ್ರಮವಾಗಿ ವಶಪಡಿಸಿಕೊಂಡು ಕರ್ನಾಟಕ ವಿದ್ಯುಚ್ಚಕ್ತಿ ಮಂಡಳಿ (ಕೆಇಬಿ)ಗೆ ನೀಡಿದ್ದಾರೆ ಎಂದು ಆರೋಪಿಸಿ ರೈತ ಸಂಘ ಮತ್ತು ಹಸಿರು ಸೇನೆ ಪದಾಧಿಕಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.

ಸಂತ್ರಸ್ತ ರೈತ ಸಿ. ನಾರಾಯಣಸ್ವಾಮಿ ಮಾತನಾಡಿ, ಕೃಷಿಯಿಂದ ಬಂದ ಆದಾಯದಲ್ಲಿ ಭಟ್ರಮಾರೇನಹಳ್ಳಿ ಸರ್ವೆ ನಂ. 7/1ರಲ್ಲಿ 1.28 ಎಕರೆ ಭೂಮಿ ಖರೀದಿ ಮಾಡಿದ್ದೆ. ಸ್ವಾಧೀನದಲ್ಲಿನ ಭೂಮಿಯಲ್ಲಿ ಕೃಷಿ ಚಟುವಟಿಕೆ ಮಾಡಿಕೊಂಡು 8 ಜನರ ಕುಟುಂಬ ಜೀವನ ನಿರ್ವಹಣೆ ಮಾಡಿಕೊಂಡು ಬಂದಿದ್ದೇವೆ. ಕೈಗಾರಿಕಾ ಉದ್ದೇಶಕ್ಕೆ ಸರ್ಕಾರದಿಂದ ಹೊರಡಿಸಲಾಗಿದ್ದ ಅಧಿಸೂಚನೆಯಲ್ಲಿ ನಮ್ಮ ಭೂಮಿ ಇಲ್ಲ. ಆದರೆ, ಅನಧಿಕೃತವಾಗಿ ವಶಪಡಿಸಿಕೊಂಡಿದ್ದಾರೆ ಎಂದು
ಆರೋಪಿಸಿದರು.

ಕೃಷಿ ಭೂಮಿಯಲ್ಲಿ ಮನೆ ನಿರ್ಮಾಣ ಮಾಡುವ ಉದ್ದೇಶದಿಂದ ಸ್ಥಳೀಯ ಗಂಗವಾರ ಚೌಡಪ್ಪನಹಳ್ಳಿ ಗ್ರಾ.ಪಂ.ನಿಂದ ಅನುಮತಿ ಪಡೆದು ಚಪ್ಪಡಿ ಕಲ್ಲು, ಕೃಷಿ ಸಲಕರಣೆಗಳನ್ನು ಜಮೀನಿನಲ್ಲಿ ಸಂಗ್ರಹಿಸಿದ್ದೆವು. ಆದರೆ, ಹೊಲದ ಕೆಲಸ ಮುಗಿಸಿ ಮನೆಗೆ ತೆರಳಿದ ನಂತರ ಕೆಐಎಡಿಬಿ ಅಧಿಕಾರಿಗಳು ಬಂದು ಅಲ್ಲಿದ್ದ ₹ 5 ಲಕ್ಷಕ್ಕೂ ಅಧಿಕ ಬೆಲೆ ಬಾಳುವ ವಸ್ತುಗಳನ್ನು ಮತ್ತೊಂದೆಡೆ ಸಾಗಿಸಿದ್ದಾರೆ. ಇದು ಸರ್ಕಾರವೇ ಮಾಡಿರುವ ಕಳ್ಳತನ ಎಂದು ದೂರಿದರು.

ಅಧಿಸೂಚನೆಯಾಗದ ಜಾಗವನ್ನು ಅನಧಿಕೃತವಾಗಿ ವಶಕ್ಕೆ ಪಡೆಯುತ್ತಿದ್ದಾರೆ ಎಂದು ಚನ್ನರಾಯಪಟ್ಟಣ ಹಾಗೂ ವಿಜಯಪುರ ಠಾಣೆಯಲ್ಲಿ ದೂರು ನೀಡಲು ಪ್ರಯತ್ನಿಸಲಾಯಿತು. ಆದರೆ, ಪೊಲೀಸರು ಮನಗೆ ರಕ್ಷಣೆ ನೀಡುವ ಬದಲು ಅಧಿಕಾರಿಗಳಿಗೆ ಭದ್ರತಾ ಗೋಡೆಗಳಾಗಿ ನಿಂತಿದ್ದಾರೆ. ಪ್ರಕರಣವನ್ನು ಎನ್‌ಸಿಆರ್‌ ಮಾಡಿ ಠಾಣೆಯಿಂದ ಹೊರಹಾಕಿದ್ದಾರೆ ಎಂದು ಅಳಲು ತೋಡಿಕೊಂಡರು. 

ವಿದ್ಯುತ್‌ ಪರಿಕರಗಳನ್ನು ಹಾಕಿರುವ ಇಲಾಖೆ ವಿರುದ್ಧ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಲಯ ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚಿಸಿದೆ. ನ್ಯಾಯಾಲಯದ ಆದೇಶಕ್ಕೂ ಕಿಮ್ಮತ್ತು ನೀಡದೇ ಪುನಃ ಜಮೀನಿನಲ್ಲಿ ಕಾಮಗಾರಿ ಮಾಡಲಾಗುತ್ತಿದೆ ಎಂದು ಹೋರಾಟಗಾರರು ದೂರಿದರು.

280 ದಿನಗಳಿಂದ ಚನ್ನರಾಯಪಟ್ಟಣ ಹೋಬಳಿಯ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯಿಂದ ಹೋರಾಟ ನಡೆಸಲಾಗುತ್ತಿದೆ. ಭೂಮಿ ಉಳಿವಿಗೆ ಕಂದಾಯ ಇಲಾಖೆಯೊಂದಿಗೆ ನಿರಂತರ ಪತ್ರ ವ್ಯವಹಾರ ಮಾಡಲಾಗುತ್ತಿದೆ. ಅಧಿಕಾರಿಗಳಿಗೆ ರೈತರ ಹಿತ ಕಾಪಾಡುವ ಇಚ್ಛಾಶಕ್ತಿ ಇಲ್ಲ ಎಂದು ಟೀಕಿಸಿದರು.

ವಕೀಲ ಸಿದ್ಧಾರ್ಥ್‌, ಮುಖಂಡರಾದ ರಾಯಸಂದ್ರದ ಸೋಮಶೇಖರ್, ಚನ್ನಹಳ್ಳಿ ನಾರಾಯಣಸ್ವಾಮಿ, ಬಿದಲೂರು ರಮೇಶ್‌, ಐಬಸಾಪುರ ರಾಮಾಂಜಿನಪ್ಪ, ಮೂಡಿಗಾನಹಳ್ಳಿ ಹನುಮಂತರಾಯಪ್ಪ, ಕಾರಹಳ್ಳಿ ರಾಜಣ್ಣ, ಕುಂದಾಣ ವೆಂಕಟೇಶ್‌, ವಿಜಯಪುರ ಅಶ್ವತ್ಥ್‌, ಮಂಜುನಾಥ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡಿ
ದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಲು ಕೆಇಬಿ ಅಧಿಕಾರಿಗಳು ನಿರಾಕರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು