ಬುಧವಾರ, ಜನವರಿ 29, 2020
27 °C
ಕ್ರಿ.ಶ 800ರಲ್ಲಿ ಚೋಳರಿಂದ ಮೊದಲ ಬಾರಿಗೆ ಜೀರ್ಣೋದ್ಧಾರ * ಶಾಸನವೊಂದರಲ್ಲಿ ಉಲ್ಲೇಖ

ಭಕ್ತರ ಅರಾಧ್ಯ ದೈವ ದೇಶನಾರಾಯಣಸ್ವಾಮಿ

ವಡ್ಡನಹಳ್ಳಿ ಭೋಜ್ಯಾನಾಯ್ಕ್‌ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ಊರಿಗೊಂದು ಕೆರೆ, ಗೋಮಾಳ, ದೇವಾಲಯವನ್ನು ಹಿರಿಯರು ನಿರ್ಮಾಣ ಮಾಡುತ್ತಿದ್ದರು. ಹಾಗೆ ನಿರ್ಮಾಣಗೊಂಡ ದೇವಾಲಯಗಳಲ್ಲಿ ಬೂದಿಗೆರೆ ದೇಶನಾರಾಯಣಸ್ವಾಮಿ ದೇವಾಲಯವೂ ಒಂದು. ಇದನ್ನು ಪಾಂಡವರು ನಿರ್ಮಾಣ ಮಾಡಿದರು ಎಂಬ ಪ್ರತೀತಿ ಇದೆ.

ಪುರಾಣದ ಪ್ರಕಾರ; ಗೌತಮ ಮಹರ್ಷಿ ಪತ್ನಿ ಅಹಲ್ಯೆಯನ್ನು ಕಾಣಲು ಮಾರುವೇಶದಲ್ಲಿ ಆಶ್ರಮಕ್ಕೆ ಬರುವ ಇಂದ್ರದೇವ ಗೌತಮ ಋಷಿ ಪ್ರಾತಃಕಾಲದಲ್ಲಿ ನದಿಗೆ ಸ್ನಾನಕ್ಕೆಂದು ತೆರಳಿದಾಗ ಅಹಲ್ಯೆಯನ್ನು ಮೋಹಿಸುತ್ತಾನೆ. ಅಷ್ಟರಲ್ಲಿ ಆಶ್ರಮಕ್ಕೆ ಬರುವ ಗೌತಮ ಇಬ್ಬರನ್ನು ನೋಡಿ ’ಅಹಲ್ಯೆ ನೀನು ಕಲ್ಲಾಗು, ಇಂದ್ರ ನಿನಗೆ ಸಹಸ್ರಾರು ಯೋನಿ ರೂಪಧರಿಸು‘ಎಂದು ಶಪಿಸುತ್ತಾನೆ. ಶಾಪಗ್ರಸ್ತನಾದ ಇಂದ್ರ ಶ್ರೀಮನ್ನಾರಾಯಣನ ಬಳಿ ಬಂದು ಶಾಪ ವಿಮೋಚನೆಗಾಗಿ ಪ್ರಾರ್ಥಿಸಿದಾಗ ಐದು ಧಾರ್ಮಿಕ ಕೇಂದ್ರಗಳನ್ನು ಸ್ಥಾಪಿಸಿ ಐದು ಕೇಂದ್ರದಲ್ಲಿ ಏಕಕಾಲದಲ್ಲಿ ನಾರಾಯಣನ ಪ್ರತಿಮೆ ಪ್ರತಿಷ್ಠಾಪಿಸಿ ಋಷಿಮುನಿಗಳಿಗೆ ಅನ್ನದಾಸೋಹ ಮತ್ತು ಭಕ್ತಿ ಸಮರ್ಪಿಸಿದರೆ ಶಾಪವಿಮೋಚನೆಯಾಗುತ್ತದೆ ಎಂದು ವರ ನೀಡುತ್ತಾನೆ. ಈ ಧಾರ್ಮಿಕ ನಂಬಿಕೆ ಈಗಲೂ ಉಳಿದುಕೊಂಡು ಬಂದಿದೆ ಎನ್ನುತ್ತಾರೆ ದೇವಾಲಯದ ಭಕ್ತ ಮಂಡಳಿ ಪ್ರಧಾನ ಕಾರ್ಯದರ್ಶಿ ಎನ್.ವಿ.ಗಿರೀಶ್.

ದೇಶನಾರಾಯಣ, ಕೈವಾರದ ಅಮರನಾರಾಯಣ, ಬೆಂಗಳೂರಿನಲ್ಲಿರುವ ಏಳುಕೋಟೆ ನಾರಾಯಣ, ಎಲ್ಲೋಡ ಲಕ್ಷ್ಮೀನಾರಾಯಣ ಮತ್ತು ಸತ್ಯಪುರ ವೀರನಾರಾಯಣ ದೇವಾಲಯಗಳನ್ನು ಇಂದ್ರ ಪ್ರತಿಷ್ಠಾಪಿಸಿದ್ದರಿಂದ ಈ ದೇಗುಲಗಳಿಗೆ ದ್ವಾರಪಾಲಕರು ಇಲ್ಲ. ಈ ದೇಗುಲ ಕ್ರಿ.ಶ 800ರಲ್ಲಿ ಚೋಳರಿಂದ ಮೊದಲ ಬಾರಿಗೆ ಜೀರ್ಣೋದ್ಧಾರಗೊಂಡಿರುವ ಬಗ್ಗೆ ಇಲ್ಲಿನ ಶಾಸನವೊಂದರಲ್ಲಿ ಉಲ್ಲೇಖವಿದೆ.

ದೇಶನಾರಾಯಣಸ್ವಾಮಿ ವಾರ್ಷಿಕ ಬ್ರಹ್ಮರಥೋತ್ಸವ ಹೋಳಿಹುಣ್ಣಿಮೆ ದಿನ ನಡೆಯುವುದು ವಿಶೇಷ. ಶ್ರೀರಾಮನವಮಿ, ಶಿವರಾತ್ರಿ, ಹನುಮ ಜಯಂತಿ, ಆಯುಧಪೂಜೆ, ನವರಾತ್ರಿ, ಮಕರ ಸಂಕ್ರಾಂತಿಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಸಾವಿರಾರು ಭಕ್ತರು ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ಈ ದೇವಾಲಯಕ್ಕೆ ಭಕ್ತರಿಂದಲೇ ಅಭಿವೃದ್ಧಿ ಹೊರತು; ಇಲಾಖೆಯಿಂದ ಬಿಡಿಗಾಸು ಇಲ್ಲ ಎನ್ನುತ್ತಾರೆ ಭಕ್ತಸೇವಾ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ಗೌಡ.

ಪ್ರಧಾನ ಅರ್ಚಕ ಎನ್‌.ಸುನಿಲ್‌ ಕುಮಾರ್‌ ಮಾತನಾಡಿ, ಭೂನೀಳಾ ಸಮೇತ ದೇಶನಾರಾಯಣಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿಗಾಗಿ ಬರುವ ಭಕ್ತರಿಗೆ ಅವಲಕ್ಕಿಯಲ್ಲಿ ತಯಾರಿಸಿದ ವಿವಿಧ ರೀತಿಯ ಪ್ರಸಾದ ನೀಡಲಾಗುತ್ತವುದು. ಬೆಳಿಗ್ಗೆ 3.30ಕ್ಕೆ ಮೂಲದೇವರಿಗೆ ಫಲಪಂಚಾಮೃತ ಅಭಿಷೇಕ ಹಾಗೂ ವಿಶೇಷ ಹೂವಿನ ಅಲಂಕಾರ ಮಾಡಲಾಗುವುದು. ನಂತರ 4.30ಕ್ಕೆ ವೈಕುಂಠ ದ್ವಾರಪೂಜೆ ಹಾಗೂ ಪ್ರವೇಶದೊಂದಿಗೆ ಉತ್ಸವ ನಡೆಯಲಿದೆ. ಸಂಜೆ 6ಕ್ಕೆ ಮಹಾಮಂಗಳಾರತಿ ನಂತರ ಸಾಮೂಹಿಕ ದರ್ಶನಕ್ಕೆ ಅವಕಾಶ ಇರಲಿದೆ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು