ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಮಶಾನ ಅಭಿವೃದ್ಧಿಗೆ ಆಗ್ರಹ: ಆನೇಕಲ್‌ನಲ್ಲಿ ದಸಂಸ ಪ್ರತಿಭಟನೆ

Published 17 ಜನವರಿ 2024, 16:01 IST
Last Updated 17 ಜನವರಿ 2024, 16:01 IST
ಅಕ್ಷರ ಗಾತ್ರ

ಆನೇಕಲ್: ತಾಲ್ಲೂಕಿನಾದ್ಯಂತ ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ಮೀಸಲಾಗಿರುವ ಸ್ಮಶಾನ ಅಭಿವೃದ್ಧಿ ಪಡಿಸಬೇಕು. ಒತ್ತುವರಿ ಆಗಿರುವ ಸರ್ಕಾರಿ ಜಾಗಗಳನ್ನು ತೆರವುಗೊಳಿಸಿ, ಸ್ಮಶಾನಗಳಿಲ್ಲದ ಗ್ರಾಮಗಳಲ್ಲಿ ಸ್ಮಶಾನಗಳಿಗೆ ಮೀಸಲಿಡಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪರಿವರ್ತನಾ ವಾದ) ತಾಲ್ಲೂಕು ಸಮಿತಿ ವತಿಯಿಂದ ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಸಂಘಟನೆಯ ರಾಜ್ಯ ಸಂಚಾಲಕ ಗೋವಿಂದರಾಜು ಮಾತನಾಡಿ, ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಭಾರತ ಸಂವಿಧಾನದ ಘೋಷಣೆ ಜಾರಿಗೊಳಿಸುವ ನಿಟ್ಟಿನಲ್ಲಿ ಸರ್ಕಾರಗಳು ವಿಫಲವಾಗಿವೆ. ಎಲ್ಲರಿಗೂ ಸಮಾನ ಶಿಕ್ಷಣ, ಸಮಾನ ಸೌಲಭ್ಯ ಒದಗಿಸಲು ಸಾಧ್ಯವಾಗಲಿಲ್ಲ. ಸ್ಮಶಾನವಿಲ್ಲದ ಶವಸಂಸ್ಕಾರಕ್ಕಾಗಿ ಪರದಾಡುವ ಪರಿಸ್ಥಿತಿಯಿದೆ. ತಾಲ್ಲೂಕಿನಾದ್ಯಂತ ಹಲವು ಸರ್ಕಾರಿ ಜಾಗಗಳು ಒತ್ತುವರಿಯಾಗಿದೆ. ಇವುಗಳನ್ನು ತೆರವುಗೊಳಿಸಿ ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಡಬೇಕು ಎಂದು ಒತ್ತಾಯಿಸಿದರು.

ಸಬ್‌ಮಂಗಲ, ಕಲ್ಲುಬಾಳು, ಬನಹಳ್ಳಿ, ದೊಮ್ಮಸಂದ್ರ, ಮುತ್ತಗಟ್ಟಿ ಗ್ರಾಮಗಳಲ್ಲಿ ಸ್ಮಶಾನಕ್ಕೆ ರಸ್ತೆ ಮತ್ತು ಸೌಲಭ್ಯ ಕಲ್ಪಿಸುವುದು, 94ಸಿ ಅಡಿಯಲ್ಲಿ ಸಲ್ಲಿಸಿರುವ ಅರ್ಜಿಗಳಿಗೆ ಹಕ್ಕುಪತ್ರ ನೀಡಬೇಕು. ಗುಂಡು ತೋಪು, ನಂಬರ್ ಕಾಣದ ಖರಾಬು ಇನ್ನಿತರ ಸ್ಥಳಗಳಲ್ಲಿ ಮನೆ ಕಟ್ಟಿಕೊಂಡಿರುವವರಿಗೆ ಮನೆ ಕಟ್ಟಿಕೊಂಡಿರುವವರಿಗೆ ಹಕ್ಕುಪತ್ರಗಳನ್ನು ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಪಟ್ಟಣದ ವೆಂಕಟೇಶ್ವರ ಚಿತ್ರ ಮಂದಿರದಿಂದ ತಾಲ್ಲೂಕು ಕಚೇರಿಯವರೆಗೆ ಮೆರವಣಿಗೆ ನಡೆಸಿ ಮನವಿ ಪತ್ರ ಸಲ್ಲಿಸಿದರು.

ರಾಜ್ಯ ಸಂಘಟನಾ ಸಂಚಾಲಕರಾದ ಎಂ.ಆರ್.ವೆಂಕಟೇಶ್, ಬಿ.ಎಂ.ವೆಂಕಟೇಶ್‌, ಮುಖಂಡರಾದ ಮಾರುತಿ ನಾಯಕ, ಚಂದ್ರಪ್ಪ, ಗೋಪಸಂದ್ರ ವೆಂಕಟೇಶ್, ಸಿ.ಮುನಿರಾಜು, ಆನಂದ್‌, ರಾಮಸ್ವಾಮಿ, ವಿಜಯಪ್ರಕಾಶ್‌, ರಾಮಾಂಜಿನಪ್ಪ, ಬನಹಳ್ಳಿ ಮುನಿಯಲ್ಲಪ್ಪ, ಶ್ರೀನಿವಾಸ್‌ ಚಿಕ್ಕಹಾಗಡೆ, ಆನಂದ್‌ ಹುಳಿಮಾವು, ಮಹೇಂದ್ರ, ಮುರುಗೇಶ್‌, ಸಿಕಂದರ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT