ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಹೆಸರಿನಲ್ಲಿ ಕೋಟಿಗಟ್ಟಲೆ ಹಣ ಖರ್ಚು

ಬ್ಲಾಕ್‌ ಕಾಂಗ್ರೆಸ್‌ ಸಮಿತಿ ವತಿಯಿಂದ ಆರೋಗ್ಯ ಹಸ್ತ
Last Updated 11 ಸೆಪ್ಟೆಂಬರ್ 2020, 16:07 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ:‘ಕೋವಿಡ್‌ ಹೆಸರಿನಲ್ಲಿ ರಾಜ್ಯ ಸರ್ಕಾರ ಕೋಟಿಗಟ್ಟಲೆ ಹಣ ವ್ಯರ್ಥವಾಗಿ ಖರ್ಚು ಮಾಡುತ್ತಿದೆ. ಜನರ ಆರೋಗ್ಯ ಮಾತ್ರ ಸುಧಾರಣೆಯಾಗುತ್ತಿಲ್ಲ’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್‌ ಆರೋಪಿಸಿದರು.

ಅವರು ತಾಲ್ಲೂಕಿನ ಘಾಟಿ ಕ್ಷೇತ್ರದಲ್ಲಿ ಶುಕ್ರವಾರ ತೂಬಗೆರೆ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ವತಿಯಿಂದ ನಡೆದ ಆರೋಗ್ಯ ಹಸ್ತ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸದಾ ಜನರಪವಾಗಿ ಕೆಲಸ ಮಾಡುವ ಕಾಂಗ್ರೆಸ್‌ ವಿರೋಧ ಪಕ್ಷವಾಗಿ ಆಡಳಿತ ಪಕ್ಷದ ಕಾರ್ಯವೈಖರಿಯನ್ನು ಟೀಕಿಸುವುದಷ್ಟಕ್ಕೆ ಸಿಮಿತವಾಗದೆ ಕೊರೊನಾ ಸೋಂಕಿತರ ಚಿಕಿತ್ಸೆಗೆ ಹಾಗೂ ಸೋಂಕಿತರಿಗೆ ಮಾರ್ಗದರ್ಶನ, ತಿಳಿವಳಿಕೆ ನೀಡುವ ಕೆಲಸವನ್ನು ಮಾಡುತ್ತಿದೆ. ಇದಕ್ಕಾಗಿಯೇ ಗ್ರಾಮ ಪಂಚಾಯಿತಿಗೆ ಇಬ್ಬರು ಅಗತ್ಯ ತರಬೇತಿ ಹಾಗೂ ಸಲಕರಣೆಗಳ ಕಿಟ್‌ ನೀಡಲಾಗಿದೆ’ ಎಂದರು.

‘ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಕಾಂಕ್ಷಿಯಾಗಿ ಈಗಿನಿಂದಲೇ ಬೂತ್‌ಮಟ್ಟದಿಂದ ಪಕ್ಷ ಸಂಘಟನೆ ಮಾಡಲಾಗುತ್ತಿದೆ. ಆದರೆ ಹೈಕಮಾಂಡ್‌ ಯಾರಿಗೆ ಟಿಕೆಟ್‌ ನೀಡಿದರೂ ಸಹ ಕೆಲಸ ಮಾಡಲಾಗುವುದು. ಕಾರ್ಯಕರ್ತರೂ ಸಹ ತಮ್ಮಲ್ಲಿನ ಸಣ್ಣ ಪುಟ್ಟ ಬಿನ್ನಾಭಿಪ್ರಾಯ ಮರೆತು ಪಕ್ಷ ಸಂಘಟನೆಗಾಗಿ ಶ್ರಮಿಸಬೇಕು’ ಎಂದರು.

ಕೆಪಿಸಿಸಿ ಸದಸ್ಯ ಎಸ್‌.ಆರ್‌.ಮುನಿರಾಜು ಮಾತನಾಡಿ, ‘ತೂಬಗೆರೆ ಹೋಬಳಿ ಸದಾ ಕಾಂಗ್ರೆಸ್‌ ಪಕ್ಷದ ಭದ್ರಕೋಟೆಯಾಗಿತ್ತು. ಆದರೆ ಹೈಕಮಾಂಡ್‌ ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಕನಿಷ್ಠ ಆರು ತಿಂಗಳು ಮುಂಚಿತವಾಗಿಯೇ ಘೋಷಣೆ ಮಾಡಿದರೆ ಸಂಘಟನೆಗೆ ಸಹಕಾರಿಯಾಗಲಿದೆ. ಚುನಾವಣೆಯ ಸಂದರ್ಭದ ಕೊನೆ ಕ್ಷಣದಲ್ಲಿ ಅಭ್ಯರ್ಥಿ ಘೋಷಣೆಯು ಸಹ ನಮ್ಮ ಸೋಲಿಗೆ ಕಾರಣವಾಗಿದೆ. ಮುಂದಿನ ಯಾವುದೇ ಚುನಾವಣೆಯಲ್ಲೂ ಜೆಡಿಎಸ್‌ ಸೇರಿದಂತೆ ಯಾವುದೇ ಪಕ್ಷದೊಂದಿಗೂ ಹೊಂದಾಣಿಕೆ ಮಾಡಿಕೊಳ್ಳದೆ ಏಕಾಂಗಿಯಾಗಿ ಚುನಾವಣೆಗಳನ್ನು ಎದುರಿಸಬೇಕು’ ಎಂದರು.

ದೇವನಹಳ್ಳಿಯ ಕೆಪಿಸಿಸಿ ಸದಸ್ಯ ಚೇತನ್‌ಗೌಡ ಮಾತನಾಡಿ, ‘ಕೊರೊನಾ ಸಂಕಷ್ಟವನ್ನು ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ವೈದ್ಯರಿಗೆ ಸಂಬಳ ನೀಡಲು ಸಹ ಹಣ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ’ ಎಂದು ದೂರಿದರು.

‘ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಒಡೆದ ಮನೆಯಾಗಿದೆ. ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಜೆಡಿಎಸ್‌ ಶಾಸಕರು ಸೇರಿದಂತೆ ಬಹುತೇಕ ಮುಖಂಡರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ’ ಎಂದರು.

ತೂಬಗೆರೆ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಜಿ.ಎನ್‌.ರಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ತೂಬಗೆರೆ ಹೋಬಳಿ ಅಧ್ಯಕ್ಷ ಶ್ರೀಧರ್‌, ದೇವನಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪ್ರಸನ್ನ, ತಾಲ್ಲೂಕು ಪಂಚಾಯಿತಿ ಸದಸ್ಯ ಮೋಹನ್‌ಕುಮಾರ್‌, ವಕೀಲ ಬೀಡಿಕೆರೆ ಮುನಿರಾಜು, ಮುಖಂಡರಾದ ಜಿ.ಎಂ.ಚನ್ನಪ್ಪ, ಜಗನ್ನಾಥಚಾರ್‌, ಆಂಜಿನಪ್ಪ, ಮುನೇಗೌಡ, ರವಿಸಿದ್ದಪ್ಪ, ಕಾಂತಮ್ಮ, ಶ್ರೀನಿವಾಸ್‌, ಗೋವಿಂದಪ್ಪ, ಹನುಮಂತರಾಯಪ್ಪ, ನಾಗರಾಜು, ರಾಮಚಂದ್ರ ನಾಯ್ಕ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT