ಭಾನುವಾರ, ಸೆಪ್ಟೆಂಬರ್ 26, 2021
27 °C

ಆಶಾ ಕಾರ್ಯ ಕರ್ತೆಯರ ವಶ, ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಬುಧವಾರ ನಡೆಯುವ ಪ್ರತಿಭಟನಾ ರ‍್ಯಾಲಿಗೆ ತೆರಳುತ್ತಿದ್ದ ತಾಲ್ಲೂಕಿನ ಆಶಾ ಕಾರ್ಯಕರ್ತೆಯರನ್ನು ನಗರದ ಬಸ್ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದು ಮಧ್ಯಾಹ್ನದ ನಂತರ ಬಿಡುಗಡೆ ಮಾಡಿದರು.

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯ (ಎಐಯುಟಿಯುಸಿ) ತಾಲ್ಲೂಕು ಘಟಕದ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ನಡೆಯುವ ಪ್ರತಿಭಟನೆಗೆ ಬೆಳಿಗ್ಗೆ 8 ಗಂಟೆಯಿಂದಲೇ ಆಶಾ ಕಾರ್ಯಕರ್ತೆಯರು ತೆರಳಲು ಬಸ್ ನಿಲ್ದಾಣಕ್ಕೆ ಆಗಮಿಸುತ್ತಿದ್ದರು. ಬೆಂಗಳೂರಿನ ಪ್ರತಿಭಟನಾ ಸ್ಥಳಕ್ಕೆ ತೆರಳದಂತೆ ತಡೆ ಹಿಡಿಯಬೇಕೆಂಬ ಪೊಲೀಸ್ ಇಲಾಖೆಯ ಸೂಚನೆಯಂತೆ ಸ್ಥಳೀಯ ಪೊಲೀಸರು ಆಶಾ ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಆಶಾ ಕಾರ್ಯಕರ್ತೆಯರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪೊಲೀಸ್‌ ಠಾಣೆಯಲ್ಲೇ ತಹಶೀಲ್ದಾರ್ ಟಿ.ಎಸ್.ಶಿವರಾಜ್ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಐಯುಟಿಯುಸಿ ತಾಲ್ಲೂಕು ಕಾರ್ಯದರ್ಶಿ ಬಿ.ಮಂಜುಳಾ, ಉಪಾಧ್ಯಕ್ಷೆ ಜಿ.ಎನ್.ಭವ್ಯ, ‘ಆಶಾ ಕಾರ್ಯಕರ್ತೆಯರಿಗೆ ಮಾಸಿಕ ₹12 ಸಾವಿರ ವೇತನ ನೀಡುವಂತೆ ಈ ಹಿಂದೆ ಹಲವಾರು ಬಾರಿ ಮನವಿ ಮಾಡಿದ್ದರೂ ಸರ್ಕಾರ ಗಮನ ಹರಿಸಿಲ್ಲ. ಇಂದು ಬೆಂಗಳೂರಿಗೆ ತೆರಳುತ್ತಿದ್ದ ಕಾರ್ಯಕರ್ತರನ್ನು ಸಹ ತಡೆ ಹಿಡಿದಿದ್ದಾರೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ₹9 ಸಾವಿರ ನೀಡುವಂತೆ ಬಜೆಟ್‍ನಲ್ಲಿ ನಿಗದಿ ಮಾಡಲಾಗಿದೆ. ಕಾರ್ಯಕರ್ತೆಯರ ಚಟುವಟಿಕೆಗಳನ್ನು ಆನ್‍ಲೈನ್ ಪೋರ್ಟಲ್‍ನಲ್ಲಿ ದಾಖಲಿಸಲು ಇರುವ ಅಸಂಖ್ಯಾತ ಲೋಪದೋಷಗಳನ್ನು ಸರಿಪಡಿಸುವ ಹೆಸರಿನಲ್ಲಿ ಕಾಲ ವಿಳಂಬವಾಗಿ 2018 ಮತ್ತು 2019 ರ ನಡುವೆ 15 ತಿಂಗಳಲ್ಲಿ ಕಾರ್ಯಕರ್ತೆಯರಿಗೆ ಬರಬೇಕಾಗಿದ್ದ ಬಾಕಿ ಹಾಗೆಯೇ ಉಳಿದಿದೆ. ಇನ್ನು ಕೋವಿಡ್-19 ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಮಹತ್ವದ್ದಾಗಿದ್ದರೂ ಅವರಿಗೆ ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್ ಸಕಾಲಕ್ಕೆ ನೀಡದೇ ಭದ್ರತೆ ಇಲ್ಲವಾಗಿದೆ ಎಂದರು.

ಎಐಯುಟಿಯುಸಿ ತಾಲ್ಲೂಕು ಅಧ್ಯಕ್ಷೆ ಲಕ್ಷ್ಮೀದೇವಿ, ಸದಸ್ಯರಾದ ಕೆ.ನಾಗರತ್ನಮ್ಮ, ಗೌರಮ್ಮ ಶಾಂತಮ್ಮ, ಆಶಾಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು