ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ಗಳಿಗೆ ನಮ್ಮ ಹಣ ಬೇಕು, ಕನ್ನಡ ಬೇಡ: ವಾಟಾಳ್ ನಾಗರಾಜ್

ಸ್ಥಳೀಯರಿಗೆ ಉದ್ಯೋಗಕ್ಕೆ ಆಗ್ರಹಿಸಿ ದೊಡ್ಡಬಳ್ಳಾಪುರದಿಂದ ಹೋರಾಟಕ್ಕೆ ಶೀಘ್ರ ಚಾಲನೆ
Last Updated 5 ಮೇ 2019, 13:31 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ:ಬೆಂಗಳೂರಿನಲ್ಲಿ ದಿನೇ ದಿನೇ ವಲಸಿಗರ ಪ್ರಮಾಣ ಹೆಚ್ಚಾಗಿ ಕನ್ನಡ ಭಾಷೆ ಕಣ್ಮರೆಯಾಗುತ್ತಿದೆ. ಕನ್ನಡ ಭಾಷೆ ಉಳಿವಿಗಾಗಿ ಹಾಗೂ ಸ್ಥಳೀಯರಿಗೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ತೀವ್ರ ಹೋರಾಟ ಅನಿವಾರ್ಯ. ದೊಡ್ಡಬಳ್ಳಾಪುರದಿಂದಲೇ ಈ ಹೋರಾಟಕ್ಕೆ ಚಾಲನೆ ನೀಡಲಾಗುವುದು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದರು.

ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡುವ ಸಲುವಾಗಿ ಆಗಮಿಸಿದ್ದ ಅವರು, ನಗರದಲ್ಲಿ ಸ್ಥಳೀಯ ಕನ್ನಡಪರ ಸಂಘಟನೆಗಳ ಮುಖಂಡರೊಂದಿಗೆ ಮಾತನಾಡಿ, 15 ವರ್ಷಗಳಲ್ಲಿ ಬೆಂಗಳೂರಿಗೆ ಸುಮಾರು 50 ಲಕ್ಷಕ್ಕೂ ಹೆಚ್ಚು ಜನ ವಲಸಿಗರು ಬಂದಿದ್ದಾರೆ. ಇದರಿಂದ ಕನ್ನಡಿಗರಿಗೆ ಸಿಗಬೇಕಾದ ಉದ್ಯೋಗ ಅನ್ಯರ ಪಾಲಾಗುತ್ತಿದೆ. ಬ್ಯಾಂಕ್‍ಗಳಲ್ಲಿ, ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಪರಭಾಷಿಕರೆ ತುಂಬಿದ್ದಾರೆ. ಅನ್ಯಭಾಷಿಕರು ಕನ್ನಡ ಭಾಷೆಯನ್ನು ಕಲಿಯಲು ಆಸಕ್ತಿ ತೋರುತ್ತಿಲ್ಲ. ಇತ್ತೀಚೆಗಷ್ಟೇ ಬ್ಯಾಂಕ್‍ಗಳಲ್ಲಿ ಕನ್ನಡ ಬಳಕೆ ಮಾಡದಿರುವ ಬಗ್ಗೆ ಚೆಕ್ ಪುಸ್ತಕಗಳನ್ನು ಸುಟ್ಟು ಪ್ರತಿಭಟನೆ ನಡೆಸಲಾಗಿತ್ತು. ಕನ್ನಡಿಗರ ಬ್ಯಾಂಕ್‍ಗಳಾದ ಮೈಸೂರು ಬ್ಯಾಂಕ್, ವಿಜಯಾ ಬ್ಯಾಂಕ್‍ಗಳನ್ನು ವಿಲೀನಗೊಳಿಸಲಾಗಿದೆ. ಆದರೆ ಇಲ್ಲಿ ಕನ್ನಡಿಗರನ್ನು ಕಡೆಗಣಿಸಲಾಗುತ್ತಿದೆ. ಬ್ಯಾಂಕ್‍ನವರಿಗೆ ನಮ್ಮ ಹಣ ಮಾತ್ರ ಬೇಕು. ಆದರೆ ಕನ್ನಡ ಭಾಷೆ ಬೇಡ ಎಂದು ಆಕ್ರೋಷ ವ್ಯಕ್ತಪಡಿಸಿದರು.

ಜನಪ್ರತಿನಿಗಳಿಗೆ ಬೇಕಿಲ್ಲ: ಕನ್ನಡ ಭಾಷೆಯ ನಿರ್ಲಕ್ಷ್ಯದ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು ಇವರಾರಿಗೂ ಕನ್ನಡದ ಬಗ್ಗೆ ಕಾಳಜಿ ಇಲ್ಲ. ಶಾಸಕರು, ಸಂಸದರು ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಕನ್ನಡ ಭಾಷೆಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಕನ್ನಡ ಪರ ಸಂಘಟನೆಗಳು ಮಾತ್ರ ಧ್ವನಿ ಎತ್ತುತ್ತಿವೆ ಎಂದರು.

ಕನ್ನಡ ಸಂಘಟನೆಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ: ರಾಜ್ಯದಲ್ಲಿ ದಿನೇ ದಿನೇ ಕನ್ನಡಪರ ಸಂಘಟನೆಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ಸಹ ಕನ್ನಡಪರ ಹೋರಾಟಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣದಿರುವುದು ಬೇಸರದ ಸಂಗತಿ. ಎಲ್ಲರಿಗೂ ಸ್ಥಾನಮಾನಗಳು ಬೇಕು ಎಂದು ಕನ್ನಡಪರ ಸಂಘಟನೆಗಳು ಒಡೆಯುತ್ತಿರುವುದು ಸರಿಯಲ್ಲ. ಈ ನಿಟ್ಟಿನಲ್ಲಿ ಕನ್ನಡ ಸಂಘಟನೆಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಿದ್ದು, ಕನ್ನಡ ಭಾಷೆಗೆ ಹೋರಾಟ ನಡೆಸಬೇಕಿದೆ ಎಂದರು.

ಈ ಸಂದರ್ಭದಲ್ಲಿ ಹಿರಿಯ ಕನ್ನಡಪರ ಹೋರಾಟಗಾರ ಟಿ.ಎನ್.ಪ್ರಭುದೇವ್, ಕನ್ನಡ ಪಕ್ಷದ ತಾಲ್ಲೂಕು ಅಧ್ಯಕ್ಷ ಸಂಜೀವ್ ನಾಯಕ್, ವೆಂಕಟೇಶ್‌, ಕರವೇ (ಪ್ರವಿಣ್‌ ಶೆಟ್ಟಿ ಬಣ) ರಾಜ್ಯ ಕಾರ್ಯದರ್ಶಿ ರಾಜಘಟ್ಟರವಿ, ನಗರ ಅಧ್ಯಕ್ಷ ಪು.ಮಹೇಶ್‌, ಉಪಾಧ್ಗಕ್ಷ ಮಲ್ಲಾತಹಳ್ಳಿ ಆನಂದ್,ಜಯ ಕರ್ನಾಟಕ ತಾಲ್ಲೂಕು ಅಧ್ಯಕ್ಷ ಮುನೇಗೌಡ, ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ನವೀನ್‌ಪ್ರಭು, ಕನ್ನಡಪರ ಹೋರಾಟಗಾರ ಡಿ.ಸಿ.ಚೌಡರಾಜ್‌, ತಳವಾರ ನಾಗರಾಜ್ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT