ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲಹಳ್ಳಿಗೆ ಮತ್ತೆ ಬಿಬಿಎಂಪಿ ಕಸ?

ಸ್ಥಳೀಯ ನಾಗರಿಕರಲ್ಲಿ ಮನೆ ಮಾಡಿದ ಆತಂಕ, ಹೋರಾಟಕ್ಕೆ ಚಿಂತನೆ
Last Updated 1 ಮಾರ್ಚ್ 2020, 14:14 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ:ದೊಡ್ಡಬೆಳವಂಗಲ ಹೋಬಳಿಯ ಗುಂಡ್ಲಹಳ್ಳಿ ಸಮೀಪದ ಟೆರ್ರಾ ಫಾರಂ ಬಿಬಿಎಂಪಿ ಕಸ ವಿಲೇವಾರಿ ಘಟಕವನ್ನು ಮಾ.9ರಿಂದ ಮತ್ತೆ ಆರಂಭಿಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ.ಈ ಕುರಿತಂತೆ ಬಿಬಿಎಂಪಿ ಘನತ್ಯಾಜ್ಯ ವಿಲೇವಾರಿ ಘಟಕದ ಹಿರಿಯ ಅಧಿಕಾರಿಗಳ ಸಭೆಯ ನಡಾವಳಿಯ ಅಧಿಕೃತ ಮಾಹಿತಿ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇದರಿಂದ ಎಚ್ಚೆತ್ತಿರುವ ಈ ಭಾಗದ ಮುಖಂಡರು ಮಾ.2 ರಂದು ಬೆಳಿಗ್ಗೆ 10 ಗಂಟೆಗೆ ದೊಡ್ಡಬೆಳವಂಗದಲ್ಲಿನ ಲಕ್ಷ್ಮೀವೆಂಕಟೇಶ್ವರ ಕಲ್ಯಾಣ ಮಂದಿರದಲ್ಲಿ ಪಕ್ಷಾತೀತವಾಗಿ ಹೋರಾಟ ರೂಪಿಸಲು ಸಭೆ ನಡೆಸುತ್ತಿದ್ದಾರೆ.

ಈ ಹಿಂದೆ ಟೆರ್ರಾ ಫಾರಂ ಕಸ ವಿಲೇವಾರಿ ಘಟಕಕ್ಕೆ ನಿತ್ಯ ನೂರಾರು ಲಾರಿಗಳು ಬೆಂಗಳೂರು ನಗರದ ಕಸ ಸುರಿಯುತ್ತಿದ್ದವು. ಸರಿಯಾದ ನಿರ್ವಹಣೆ ಇಲ್ಲದೆ ಬೇಸತ್ತ ಈ ಭಾಗದ ಜನರು ಸತತ ಹೋರಾಟ ನಡೆಸಿದ್ದರು. 2016ರ ಮಾರ್ಚ್‌ ಅಂತ್ಯಕ್ಕೆ ಗುಂಡ್ಲಹಳ್ಳಿಯಲ್ಲಿನ ಟೆರ್ರಾ ಫಾರಂ ಅನ್ನು ಸರ್ಕಾರ ಆದೇಶ ಹೊರಡಿಸಿ ಬಂದ್‌ ಮಾಡಿತ್ತು. ‌

ಸರ್ಕಾರದ ಆದೇಶದನ್ವಯ ಕಸ ಬರುವುದು ನಿಂತಿತಲ್ಲದೇ, ಈ ಘಟಕದಲ್ಲಿ ಅವೈಜ್ಞಾನಿಕವಾಗಿ ರಾಶಿ ಹಾಕಿರುವ ಕಸವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವಂತೆಯೂ ಬಿಬಿಎಂಪಿಗೆ ಸರ್ಕಾರ ಸೂಚಿಸಿತ್ತು. ಆದರೆ, ಕಸದ ರಾಶಿಗೆ ಬೆಂಕಿ ಹಚ್ಚಲಾಯಿತು. ಇದು ಆಕಸ್ಮಿಕ ಎಂಬಂತೆ ಸುದ್ದಿ ಹರಡಲಾಯಿತು. ಕಸದ ರಾಶಿಯನ್ನು ಮಣ್ಣಿನ ಹೊದಿಕೆಯಿಂದ ಮುಚ್ಚಲಾಗಿದೆ.

ಈಡೇರದ ಉದ್ದೇಶ:2007ರಲ್ಲಿ ಗುಂಡ್ಲಹಳ್ಳಿ ಸಮೀಪ ಸುಮಾರು 100 ಎಕರೆ ಪ್ರದೇಶದಲ್ಲಿ ಟೆರ್ರಾ ಫಾರಂ ಬಿಬಿಎಂಪಿ ಕಸ ವಿಲೇವಾರಿ ಘಟಕ ಜೈವಿಕ ಗೊಬ್ಬರ, ಎರೆಹುಳು ಗೊಬ್ಬರ ತಯಾರಿಕಾ ಉದ್ದೇಶದಿಂದ ಸ್ಥಾಪನೆಯಾಗಿತ್ತು. ಪ್ರತಿ ದಿನ 500 ಟಂನ್‌ ಸಾಮರ್ಥ್ಯದ ಹಸಿ ಕಸವನ್ನು ಬಿಬಿಎಂಪಿ ವ್ಯಾಪ್ತಿಯಿಂದ ತಂದು, ಗೊಬ್ಬರ ತಯಾರಿಸುವ ಗುರಿ ಹೊಂದಲಾಗಿತ್ತು. ಆದರೆ, ಕೆಲವೇ ತಿಂಗಳಲ್ಲಿ ಇಲ್ಲಿಗೆ ಬಿಬಿಎಂಪಿ ವ್ಯಾಪ್ತಿಯಿಂದ ಕಸ ತುಂಬಿಕೊಂಡು ಬರುವ ಲಾರಿಗಳ ಸಂಖ್ಯೆ ಹತ್ತಾರು ಸಂಖ್ಯೆಯಿಂದ ನೂರಾರು ಸಂಖ್ಯೆಗೆ ‌ಏರಿಕೆಯಾಯಿತು. ನಿರ್ವಹಣೆ ಸಾಧ್ಯವಾಗದೆ ಕಸದ ರಾಶಿ ಬೆಟ್ಟದಂತೆ ಬೆಳೆಯುತ್ತ ಹೋಯಿತು.

ಬೇಸತ್ತಿದ್ದ ನಾಗರಿಕರು:ಟೆರ್ರಾ ಫಾರಂ ಕಸ ವಿಲೇವಾರಿ ಘಟಕದ ಸುತ್ತಲಿನ ಗುಂಡ್ಲಹಳ್ಳಿ, ಅಪ್ಪೇಗೌಡನ,ಖಾಲಿಪಾಳ್ಯ, ಮಂಕಲಾಳ ಸೇರಿದಂತೆ 10ಕ್ಕೂ ಹೆಚ್ಚಿನ ಗ್ರಾಮಗಳ ಜನರು ಕಸದ ಹಾವಳಿಗೆ ಬೇಸತ್ತಿದ್ದರು. ಬೆಂಗಳೂರಿನಿಂದ ಕಸ ತುಂಬಿಕೊಂಡು ಬರುತ್ತಿದ್ದ ನೂರಾರು ಲಾರಿಗಳನ್ನು ದಾಬಸ್‌ಪೇಟೆ-ದೊಡ್ಡಬಳ್ಳಾಪುರದ ರಾಷ್ಟ್ರೀಯ ಹೆದ್ದಾರಿ 207ರಲ್ಲಿ ಅಡ್ಡಗಟ್ಟಿ ಗಾಜುಗಳನ್ನು ಹೊಡೆದುಹಾಕಿದ್ದರು. ಇದರಿಂದ ಭಯಗೊಂಡಿದ್ದ ಲಾರಿಗಳ ಚಾಲಕರು ರಸ್ತೆಗಳಲ್ಲೇ ಕಸ ತುಂಬಿದ್ದ ಲಾರಿಗಳನ್ನು ಬಿಟ್ಟು ದಿಕ್ಕಾಪಾಲಾಗಿ ಓಡಿ ಹೋಗಿದ್ದರು.

ಈ ಘಟನೆಯ ನಂತರ ಗುಂಡ್ಲಹಳ್ಳಿ ಸೇರಿದಂತೆ ಕಸ ವಿಲೇವಾರಿ ಘಟಕದ ಸುತ್ತಲಿನ ಗ್ರಾಮಗಳ ರೈತರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಪೊಲೀಸರ ಬಂಧನದ ಬೀತಿಯಿಂದ ಹಲವಾರು ಜನ ಗ್ರಾಮಗಳನ್ನೇ ತೊರೆದಿದ್ದರು. ಈ ಎಲ್ಲಾ ಘಟನೆಯ ನಂತರ ಪಕ್ಷಾತೀತವಾಗಿ ಹೋರಾಟ ರೂಪಿಸಿ 2013ರಲ್ಲಿ ನಡೆದ ಹೆದ್ದಾರಿ ತಡೆಯಲ್ಲಿ ಸಾವಿರಾರು ಜನ ಭಾಗವಹಿಸುವ ಮೂಲಕ ಐತಿಹಾಸಿಕ ಹೋರಾಟಕ್ಕೆ ನಾಂದಿ ಹಾಡಿದ್ದರು.

ಟೆರ್ರಾ ಫಾರಂನಲ್ಲಿ ಬಿಬಿಎಂಪಿ ಕಸ ತಂದು ಎರೆಹುಳು ಗೊಬ್ಬರ ತಯಾರು ಮಾಡುತ್ತಾರೆ ಎನ್ನುವಾಗ ನಮ್ಮ ಹೊಲಗಳಿಗು ಗೊಬ್ಬರ ದೊರೆಯುತ್ತದೆ ಎಂದು ರೈತರೆಲ್ಲ ಖುಷಿಪಟ್ಟಿದ್ದರು. ಆದರೆ ಈಗ ಇಲ್ಲಿ ಆಗಿರುವುದೇ ಬೇರೆ. ಇಡೀ ‌ಘಟಕದಲ್ಲಿ ಎಲ್ಲಿ ನೋಡಿದರೂ ಕಾಣಸಿಗುವುದು ಪ್ಲಾಸ್ಟಿಕ್‌ ಮಿಶ್ರಿತ ಕಸ. ಈ ಕಸದಿಂದಾಗಿ ಸ್ಥಳೀಯ ಜಲಮೂಲಗಳೂ ಕಲುಷಿತಗೊಳ್ಳುತ್ತಿವೆ. ಗ್ರಾಮಗಳ ಜನ–ಜಾನುವಾರಿಗೆ ಶುದ್ಧ ಕುಡಿಯುವ ನೀರು ದೊರೆಯದಾಗಿದೆ.

ಕಸಿದ ಬದುಕು:ಬಿಬಿಎಂಪಿ ಕಸ ಕೇವಲ ಪರಿಸರವನ್ನಷ್ಟೇ ಅಲ್ಲದೆ ಈ ಗ್ರಾಮಗ ಜನರ ಹಬ್ಬ, ಆಚರಣೆ, ಕೃಷಿ ಬದುಕನ್ನು ಕಸಿದುಕೊಂಡಿದೆ. ಸುತ್ತಮುತ್ತಲ ಗ್ರಾಮಗಳ ಯುವಕರಿಗೆ ಮದುವೆಗೂ ಸಂಚಕಾರವಾಗಿದೆ. ಊರಿಗೆ ಬಂದು ಹೋಗುವ ವಧುವಿನ ಕಡೆಯವರು ಊರಿನಲ್ಲಿನ ನೋಣ, ದುರ್ನಾತ, ಅನಾರೋಗ್ಯಕ್ಕೆ ಹೆದರುತ್ತಾರೆ.ಇದರಿಂದಾಗಿ ಈ ಗ್ರಾಮಗಳ ಬಹುತೇಕ ಯುವಕರು ನಗರಗಳಲ್ಲಿ ಯಾವುದೇ ಸಣ್ಣ ಉದ್ಯೋಗ ದೊರೆತರೂ ಸಾಕು ಗ್ರಾಮ ತೊರೆಯುತ್ತಾರೆ.

ಕಿಮ್ಮತ್ತು ಕಳೆದುಕೊಂಡ ಪ್ರತಿಭಟನೆಗಳು: ಈ ಹಿಂದೆ ಸ್ಥಳೀಯಶಾಸಕರೇ ಪ್ರತಿಭಟನೆ ನಡೆಸಿದರೂ ಬಿಬಿಎಂಪಿ ಹಾಗೂ ಕಸದ ಕಂಪನಿಗಳು ಕಿಮ್ಮತ್ತು ನೀಡಿಲ್ಲ. ಪ್ರತಿಭಟನೆಗಳು ನಡೆದಷ್ಟೂ ಕಸ ಬರುವುದು ಹೆಚ್ಚಾಗಿತ್ತು. ಇದಷ್ಟೇ ಅಲ್ಲದೆ ಮತ್ತೊಂದು ಹೊಸ ಕಸ ಸುರಿಯುವ ಘಟಕವನ್ನು ಟೆರ್ರಾ ಫಾರಂ ಸಮೀಪದ ಚಿಗರೇನಹಳ್ಳಿಗ್ರಾಮದಲ್ಲಿ ಎಂಎಸ್‌ಜಿಪಿ ಕಂಪನಿ ಸ್ಥಾಪಿಸಿತ್ತು. ಇಲ್ಲಿಗೂ ಬಿಬಿಎಂಪಿ ಕಸವನ್ನು ಸುರಿಯುತ್ತಿದೆ. ಬೆಟ್ಟದಷ್ಟು ಕಸವು ಇಲ್ಲಿದ್ದು, ವಿಲೇವಾರಿ ಮಾಡಲಾಗದೇ ಬೆಂಕಿ ಹಚ್ಚುವುದು ಸಾಮಾನ್ಯವಾಗಿದೆ. ಇಷ್ಟೆಲ್ಲಾ ಅವಾಂತರ ನಡೆಯುತ್ತಿದ್ದರೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕಂದಾಯ ಇಲಾಖೆ ಅಧಿಕಾರಿಗಳು ಕಂಡೂ ಕಾಣದಂತೆ ಸುಮ್ಮನಿದ್ದಾರೆ ಎಂಬುದು ಸ್ಥಳೀಯರ ಆರೋಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT