ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರಿನ ಅತ್ತಿಬೆಲೆ |ಪಟಾಕಿ ದುರಂತ: 13 ಸಾವು

ಬೆಂಗಳೂರಿನ ಅತ್ತಿಬೆಲೆಯಲ್ಲಿ ಸತತ ಐದು ತಾಸು ಹೊತ್ತಿ ಉರಿದ ದಾಸ್ತಾನು ಮಳಿಗೆ, ವಾಹನಗಳು
Published 7 ಅಕ್ಟೋಬರ್ 2023, 19:51 IST
Last Updated 7 ಅಕ್ಟೋಬರ್ 2023, 19:51 IST
ಅಕ್ಷರ ಗಾತ್ರ

ಆನೇಕಲ್‌ (ಬೆಂಗಳೂರು): ರಾಜಧಾನಿ ಬೆಂಗಳೂರಿನ ಹೊರವಲಯದ ಅತ್ತಿಬೆಲೆಯಲ್ಲಿ ಪಟಾಕಿ ಗೋದಾಮು ಒಂದರಲ್ಲಿ ಶನಿವಾರ ಸಂಭವಿಸಿದ ಬೆಂಕಿ ದುರಂತದಲ್ಲಿ 13 ಕೆಲಸಗಾರರು ಸುಟ್ಟು ಕರಕಲಾಗಿದ್ದಾರೆ. ಗೋದಾಮಿನ ಅವಶೇಷಗಳ ಅಡಿ ಇನ್ನೂ ಹಲವು ಕೆಲಸಗಾರರು ಸಿಲುಕಿರುವ ಶಂಕೆ ಇದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಬಹುದು ಎನ್ನಲಾಗಿದೆ. 

ಗೋದಾಮಿನ ಮಾಲೀಕ ಸೇರಿದಂತೆ ಗಾಯಗೊಂಡಿರುವ ಐವರನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಗಿದೆ. ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತಮಿಳುನಾಡಿನ ಶಿವಕಾಶಿಯಿಂದ ಬಂದ ಲಾರಿಯಿಂದ ಮಧ್ಯಾಹ್ನ 3.30ರ ವೇಳೆಗೆ ಪಟಾಕಿಗಳನ್ನು ಗೋದಾಮಿನಲ್ಲಿ ದಾಸ್ತಾನು ಮಾಡುತ್ತಿದ್ದಾಗ ಏಕಾಏಕಿ ಬೆಂಕಿ ಹೊತ್ತಿಕೊಂಡಿತು. ತಕ್ಷಣ ಎಲ್ಲ ದಿಕ್ಕುಗಳಲ್ಲೂ ಪಟಾಕಿಗಳು ಸಿಡಿಯಲು ಆರಂಭಿಸಿದ ಕಾರಣ ಬೆಂಕಿ ನಂದಿಸಲು ಸಾಧ್ಯವಾಗಲಿಲ್ಲ.

ಸತತ ಐದಾರು ತಾಸು ಗೋದಾಮು ಮತ್ತು ವಾಹನಗಳು ಹೊತ್ತಿ ಉರಿದವು.  ಬೆಂಕಿಯ ಕೆನ್ನಾಲಿಗೆ ಮತ್ತು ದಟ್ಟವಾದ ಹೊಗೆ ಎಲ್ಲೆಡೆ ಆವರಿಸಿತು. 

ಬೆಂಕಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ₹4 ಕೋಟಿಯಿಂದ ₹5 ಕೋಟಿ ರೂಪಾಯಿ ಮೌಲ್ಯದ ಪಟಾಕಿ ಭಸ್ಮವಾಗಿವೆ. ಲಾರಿ, ಸರಕು ಸಾಗಣೆ ವಾಹನ, ನಾಲ್ಕು ದ್ವಿಚಕ್ರ ವಾಹನಗಳು ಸುಟ್ಟು ಕರಕಲಾಗಿವೆ.  

ಅತ್ತಿಬೆಲೆಯ ರಾಷ್ಟ್ರೀಯ ಹೆದ್ದಾರಿ ಸಮೀಪದ ನವೀನ್‌ ಎಂಬವರಿಗೆ ಸೇರಿದ ಗೋದಾಮಿನಲ್ಲಿ ಪಟಾಕಿ ದಾಸ್ತಾನು ಮಾಡಲಾಗುತ್ತಿತ್ತು. ಘಟನೆ ನಡೆದಾಗ ಗೋದಾಮಿನಲ್ಲಿ 20 ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಕೆಲವರು ಹಿಂಬಾಗಿಲಿನಿಂದ ಹೊರಗೆ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ.

ರಾತ್ರಿ 8 ಗಂಟೆವರೆಗೂ ಅಗ್ನಿಶಾಮಕ ದಳದ ಐದಾರು ವಾಹನ ಮತ್ತು ಹಲವು ಸಿಬ್ಬಂದಿ ಬೆಂಕಿ‌ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ರಾತ್ರಿ 8.30ರ ಹೊತ್ತಿಗೆ ಬೆಂಕಿ ನಿಯಂತ್ರಣಕ್ಕೆ ಬಂದಿದೆ. 

ಬೆಂಕಿ ನಂದಿಸಿದ ಬಳಿಕ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ 12 ಶವಗಳನ್ನು ಹೊರ ತೆಗೆದಿದ್ದಾರೆ. ದೇಹಗಳು ಗುರುತಿಸಲಾಗದಷ್ಟು ಸುಟ್ಟು ಕರಕಲಾಗಿವೆ. ಮೃತರಲ್ಲಿ ತಮಿಳುನಾಡು ಮತ್ತು ಕರ್ನಾಟಕದ ಕಾರ್ಮಿಕರು ಸೇರಿದ್ದಾರೆ. ಯಾರ ಗುರುತು ಪತ್ತೆ ಮಾಡಲೂ ಸಾಧ್ಯವಾಗಿಲ್ಲ. ವಿಧಿ ವಿಜ್ಞಾನ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಅಪಾಯ ಇದೆ ಎಂದು ಪೊಲೀಸರು ಹೇಳಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್‌.ಪಿ. ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್‌ಪಿ ಮೋಹನ್‌ ಕುಮಾರ್, ಐದಕ್ಕೂ ಹೆಚ್ಚು ಸರ್ಕಲ್‌ ಇನ್‌ಸ್ಪೆಕ್ಟರ್‌ಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.  

ವಾಹನ ದಟ್ಟಣೆ: ಸತತವಾಗಿ ಪಟಾಕಿ ಮೊರೆತದ ಶಬ್ದ ಮತ್ತು ದಟ್ಟವಾದ ಬೆಂಕಿಯ ಜ್ವಾಲೆ, ಹೊಗೆ ಆವರಿಸಿದ್ದನ್ನು ನೋಡಿದ ಸಾವಿರಾರು ಜನರು ನಾನಾ ಕಡೆಯಿಂದ ದೌಡಾಯಿಸಿದರು. ಸ್ಥಳದಲ್ಲಿ ಜಮಾಯಿಸಿದ್ದ ಜನರನ್ನು ನಿಭಾಯಿಸುವುದೇ ಪೊಲೀಸರಿಗೆ ದೊಡ್ಡ ಸವಾಲಾಯಿತು. 

ಘಟನೆಯಿಂದ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ವಾಹನ ಸಂಚಾರ ನಾಲ್ಕೈದು ಗಂಟೆ ಅಸ್ತವ್ಯಸ್ತವಾಯಿತು. ಬೆಂಗಳೂರಿನಿಂದ ತಮಿಳುನಾಡಿನ ಹೊಸೂರಿನತ್ತ ತೆರಳುತ್ತಿದ್ದ ವಾಹನಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಗಂಟೆಗಟ್ಟಲೇ ಕಾದು ನಿಲ್ಲಬೇಕಾಯಿತು. ಅತ್ತಿಬೆಲೆಯಿಂದ ಎರಡು ಕಿ.ಮೀ.ಗೂ ಹೆಚ್ಚು ದೂರ ವಾಹನಗಳ ಸಾಲು ಕಂಡು ಬಂತು.   

ಆನೇಕಲ್ ತಾಲ್ಲೂಕಿನ ಗಡಿಭಾಗದ ಅತ್ತಿಬೆಲೆಯ ಪಟಾಕಿ ಗೋದಾಮಿಗೆ ಬಿದ್ದ ಬೆಂಕಿಯನ್ನು ನೋಡಲು ಸೇರಿರುವ ಜನಸಂದಣಿ
ಆನೇಕಲ್ ತಾಲ್ಲೂಕಿನ ಗಡಿಭಾಗದ ಅತ್ತಿಬೆಲೆಯ ಪಟಾಕಿ ಗೋದಾಮಿಗೆ ಬಿದ್ದ ಬೆಂಕಿಯನ್ನು ನೋಡಲು ಸೇರಿರುವ ಜನಸಂದಣಿ
ಆನೇಕಲ್ ತಾಲ್ಲೂಕಿನ ಗಡಿಭಾಗದ ಅತ್ತಿಬೆಲೆಯ ಪಟಾಕಿ ಗೋದಾಮಿಗೆ ಬಿದ್ದ ಬೆಂಕಿಯನ್ನು ನೋಡಲು ಸೇರಿರುವ ಜನಸಂದಣಿ
ಆನೇಕಲ್ ತಾಲ್ಲೂಕಿನ ಗಡಿಭಾಗದ ಅತ್ತಿಬೆಲೆಯ ಪಟಾಕಿ ಗೋದಾಮಿಗೆ ಬಿದ್ದ ಬೆಂಕಿಯನ್ನು ನೋಡಲು ಸೇರಿರುವ ಜನಸಂದಣಿ
ಆನೇಕಲ್ ತಾಲ್ಲೂಕಿನ ಗಡಿಭಾಗದ ಅತ್ತಿಬೆಲೆಯ ಪಟಾಕಿ ಗೋದಾಮು ಮತ್ತು ವಾಹನ ಹೊತ್ತಿ ಉರಿದವು
ಆನೇಕಲ್ ತಾಲ್ಲೂಕಿನ ಗಡಿಭಾಗದ ಅತ್ತಿಬೆಲೆಯ ಪಟಾಕಿ ಗೋದಾಮು ಮತ್ತು ವಾಹನ ಹೊತ್ತಿ ಉರಿದವು
ದುರಂತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ವಿಧಿ ವಿಜ್ಞಾನ ತಂಡದವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ವರದಿಯ ನಂತರ ಖಚಿತ ಮಾಹಿತಿ ತಿಳಿಯಲಿದೆ. ಗೋದಾಮಿನ ಪರವಾನಗಿ ಮತ್ತು ನಿಬಂಧನೆಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ
ಮಲ್ಲಿಕಾರ್ಜುನ ಬಾಲದಂಡಿ ಎಸ್‌.ಪಿ. ಬೆಂಗಳೂರು ಗ್ರಾಮಾಂತರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT