ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೇವನಹಳ್ಳಿ | ಮಳೆ ಕೊರತೆ, ಮೇವಿನ ಬೆಲೆ ಏರಿಕೆ

ದಾಸ್ತಾನಿಗೆ ಮುಂದಾದ ರೈತರು
Published : 10 ಜನವರಿ 2024, 5:49 IST
Last Updated : 10 ಜನವರಿ 2024, 5:49 IST
ಫಾಲೋ ಮಾಡಿ
Comments

ವಿಜಯಪುರ (ದೇವನಹಳ್ಳಿ): ಮುಂಗಾರು ಮತ್ತು ಹಿಂಗಾರಿನ ಅವಧಿಯಲ್ಲಿ ತೀವ್ರ ಮಳೆ ಕೊರತೆಯಿಂದಾಗಿ ಬರದ ಪರಿಸ್ಥಿತಿ ಎದುರಾಗಿದ್ದು, ಹೈನುಗಾರಿಕೆ ಉದ್ಯಮದಲ್ಲಿ ತೊಡಗಿಸಿಕೊಂಡಿರುವವರು ರಾಸುಗಳಿಗೆ ಹಸಿರು ಮೇವು ಒದಗಿಸುವುದು ಕಷ್ಟವಾಗಿದೆ. ಮೇವಿನ ಕೊರತೆ ತೀವ್ರವಾಗಿ ಕಂಡು ಬರುತ್ತಿದ್ದು, ಈಗಿನಿಂದಲೇ ಮೇವು ದಾಸ್ತಾನು ಮಾಡುವ ಕಡೆಗೆ ರೈತರು ಗಮನಹರಿಸಿದ್ದಾರೆ.

ಮುಂಬರುವ ಬೇಸಿಗೆಯಲ್ಲಿ ಮೇವಿನ ಅಭಾವ ಎದುರಾಗುವ ಸಾಧ್ಯತೆಗಳಿದ್ದು ರೈತರು, ತೋಟಗಳಲ್ಲಿ ಬೆಳೆದಿರುವ ಮೇವಿನ ಜೋಳ, ಹಸಿಹುಲ್ಲು, ಖರೀದಿ ಮಾಡಲು ಮುಂದಾಗಿರುವ ಕಾರಣ, ಹಸಿರು ಮೇವಿನ ಬೆಲೆ ಏರಿಕೆಯಾಗುತ್ತಿದೆ. ಈ ಹಿಂದೆ 1 ಕಟ್ಟು ಒಣ ಮೇವಿನ ದರ ₹ 150 ರಿಂದ ₹ 200 ಇತ್ತು. ಈಗ ₹ 350 ರಿಂದ ₹ 400ಕ್ಕೆ ಮಾರಾಟ ಮಾಡುತ್ತಿದ್ದಾರೆ. ಒಂದು ಟ್ರ್ಯಾಕ್ಟರ್ ಲೋಡು ಒಣಹುಲ್ಲು ₹ 8 ಸಾವಿರ ಇದ್ದದ್ದು ಈಗ ₹ 12 ಸಾವಿರಕ್ಕೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ₹ 15 ಸಾವಿರದವರೆಗೂ ಏರಿಕೆಯಾಗುವ ಸಾಧ್ಯತೆಗಳಿವೆ. ಹಸಿರು ಮೇವು ಪ್ರಸ್ತುತ ಒಂದು ಟ್ರ್ಯಾಕ್ಟರ್ ಲೋಡು ₹ 16 ಸಾವಿರ ಇದೆ.

ಮಳೆಯಾಶ್ರಿತ ಕೃಷಿ ಚಟುವಟಿಕೆಯ ಜೊತೆಗೆ ಹೈನುಗಾರಿಕೆಯಿಂದ ಜೀವನ ನಿರ್ವಹಣೆ ಮಾಡುತ್ತಿರುವ ರೈತರು, ಸಮೀಪದಲ್ಲಿನ ನೆರೆಹೊರೆಯ ರೈತರ ತೋಟಗಳಲ್ಲಿ ಬೆಳೆದಿರುವ ಮೇವು ಖರೀದಿ ಮಾಡಿಕೊಂಡು ದಾಸ್ತಾನು ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರ ಬರಗಾಲದ ಹಿನ್ನೆಲೆಯಲ್ಲಿ ಇಷ್ಟೊತ್ತಿಗಾಗಲೇ ಮೇವು ಸಂಗ್ರಹಣೆಗೆ ಹೆಚ್ಚು ಆದ್ಯತೆ ನೀಡಬೇಕಾಗಿತ್ತಾದರೂ ಇದುವರೆಗೂ ಮೇವು ದಾಸ್ತಾನು ಮಾಡಲು ಮುಂದಾಗಿಲ್ಲ.

ಭೂಮಿ ಎರವಲು ಪಡೆದಿರುವ ರೈತರು: ನೀರಾವರಿಯನ್ನು ಹೊಂದಿರುವ ರೈತರಿಗೆ ಒಂದು ಬೆಳೆಗೆ ₹ 5ರಿಂದ ₹ 6 ಸಾವಿರ ಬಾಡಿಗೆ (10 ಗುಂಟೆಗೆ) ನೀಡುವ ಮೂಲಕ ಭೂಮಿಯನ್ನು ಎರವಲು ಪಡೆದುಕೊಂಡು, ಮೇವಿನ ಬೀಜಗಳನ್ನು ಬಿತ್ತನೆ ಮಾಡಿ, ಹಸಿರು ಮೇವು ಬೆಳೆದುಕೊಳ್ಳುತ್ತಿದ್ದಾರೆ. ಇದರಿಂದ ದುಬಾರಿ ಹಣ ಖರ್ಚು ಮಾಡಿ, ಹಸಿರು ಮೇವು ಖರೀದಿಸುವ ಅನಿವಾರ್ಯತೆಯನ್ನು ತಪ್ಪಿಸಿಕೊಳ್ಳುವಂತಾಗಿದೆ. ಇನ್ನು ಕೆಲವರು ಬೆಳೆ ನಾಟಿ ಮಾಡಲು ಒಂದಷ್ಟು ಬಂಡವಾಳ ಹೂಡಿಕೆ ಮಾಡಿ, ಬೆಳೆ ಬಂದ ನಂತರ ಮೇವು ಕಟಾವು ಮಾಡಿಕೊಂಡು ಬರುತ್ತಿದ್ದಾರೆ.

ಸಂಬಂಧಿಕರ ತೋಟಗಳಲ್ಲಿ ಬೆಳೆದಿರುವ ಬೆಳೆಗಳಿಗೂ ಡಿಮ್ಯಾಂಡ್: ತಮ್ಮ ಸಂಬಂಧಿಕರು, ಸ್ನೇಹಿತರ ತೋಟಗಳಲ್ಲಿ ಬೆಳೆದಿರುವ ಸ್ವೀಟ್ ಕಾರ್ನ್ ಜೋಳವನ್ನು ಕಟಾವು ಮಾಡುತ್ತಿದ್ದಂತೆ ದೂರದ ಸಂಬಂಧಿಕರು ಬಂದು ತೋಟಗಳಲ್ಲೆ ಮೇವು ಕಟಾವು ಮಾಡಿಕೊಂಡು ಹೋಗುತ್ತಿದ್ದಾರೆ. ಹೊರಗಡೆ ಖರೀದಿಸಬೇಕಾದರೆ, ಒಂದು ಜೋಳದ ಕಡ್ಡಿ ₹ 1.50 ಕೊಡಬೇಕು ಎಂದು ರೈತರು ತಿಳಿಸಿದರು.

ಪಶುಪಾಲನಾ ಇಲಾಖೆಯಿಂದ ಮೇವಿನ ಕಿಟ್ ಗಳನ್ನು ವಿತರಣೆ ಮಾಡಿದರೂ ನೀರಾವರಿ ಇರುವ ರೈತರಿಗೆ ಮಾತ್ರ ಉಪಯೋಗವಾಗುತ್ತಿವೆ. ನೀರಾವರಿ ಸೌಲಭ್ಯವಿಲ್ಲದ ರೈತರು, ಮೇವಿನ ಕಿಟ್‌ಗಳನ್ನು ತೆಗೆದುಕೊಂಡಿಲ್ಲ. ಸರ್ಕಾರ, ಮೇವಿನ ಬ್ಯಾಂಕುಗಳನ್ನು ತೆರೆಯಬೇಕು. ಸ್ಥಳೀಯ ರೈತರ ಬೇಡಿಕೆಗೆ ಅನುಗುಣವಾಗಿ ಮೇವು ಪೂರೈಕೆ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

‘ಫೆಬ್ರುವರಿ ಮೊದಲ ವಾರದಿಂದ ನೀರಿಗೂ ಹಾಹಾಕಾರ ಶುರುವಾಗಲಿದ್ದು, ಮೇವಿನ ಸಮಸ್ಯೆಯೂ ಹೆಚ್ಚಾಗಲಿದೆ. ಬೇಸಿಗೆ ಕಳೆಯುವವರೆಗೂ ಈ ಸಮಸ್ಯೆಯನ್ನು ಅನಿವಾರ್ಯವಾಗಿ ಎದುರಿಸಬೇಕಾಗುತ್ತದೆ. ಮಾರ್ಚ್-ಏಪ್ರಿಲ್‌ ತಿಂಗಳು ಆರಂಭವಾಗುತ್ತಿದ್ದಂತೆ ಲೋಕಸಭಾ ಚುನಾವಣೆಯ ಆರಂಭವಾಗುವುದರಿಂದ ಅಧಿಕಾರಿಗಳು ರೈತರ ಸಮಸ್ಯೆಗಳನ್ನು ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ಅಧಿಕಾರಿ ವರ್ಗದವರು ಈಗಲೇ ಎಚ್ಚೆತ್ತುಕೊಂಡರೆ ಉತ್ತಮ’ ಎಂದು ರೈತ ದೇವರಾಜಪ್ಪ ಒತ್ತಾಯಿಸಿದರು.

ಮೇವಿನ ಕೊರತೆಯಿಂದಾಗಿ ಹೊಲಗಳಲ್ಲಿ ಮೇಯುತ್ತಿರುವ ರಾಸುಗಳು.
ಮೇವಿನ ಕೊರತೆಯಿಂದಾಗಿ ಹೊಲಗಳಲ್ಲಿ ಮೇಯುತ್ತಿರುವ ರಾಸುಗಳು.

ಹಸಿರು ಮೇವಿಗೆ ತೀವ್ರ ಅಭಾವ ಶುರುವಾಗಿದೆ. ಈ ಬಾರಿ ರಾಸುಗಳನ್ನು ಹೇಗೆ ಸುಧಾರಿಸಬೇಕೋ ಅರ್ಥವಾಗುತ್ತಿಲ್ಲ. ನಾವು ಬೆಳೆದಿರುವ ಸ್ವೀಟ್ ಕಾರ್ನ್ ಜೋಳವನ್ನು ಮಾರಾಟ ಮಾಡದೇ ನಮ್ಮ ಸಂಬಂಧಿಕರಿಗೆ ಕೊಟ್ಟಿದ್ದೇವೆ.- ರಾಮಸ್ವಾಮಿ ರೈತ ವೆಂಕಟಗಿರಿಕೋಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT