ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿಗೆ ಬಂದ ಬಿಜೆಪಿ ಬಣ ರಾಜಕಾರಣ     

Last Updated 16 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: 2018ರ ಚುನಾವಣೆಯಲ್ಲಿ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜೆ.ನರಸಿಂಹಸ್ವಾಮಿ ಅವರ ಸೋಲಿನ ನಂತರ ಆರಂಭವಾದ ಗುಂಪುಗಾರಿಕೆ, ಬಣ ರಾಜಕಾರಣ ಈಗ ಮನೆ ಒಂದು ನೂರು ಬಾಗಿಲು ಎನ್ನುವಲ್ಲಿಗೆ ಬಂದು ನಿಂತಿದೆ.

ಒಂದು ವಾರಗಳ ಹಿಂದೆಯಷ್ಟೇ ದೊಡ್ಡಬಳ್ಳಾಪುರ ಅಭಿವೃದ್ಧಿ ಯೋಜನಾಪ್ರಾಧಿಕಾರಕ್ಕೆ ಬೆಂಗಳೂರು ಉತ್ತರ ತಾಲ್ಲೂಕಿನ ಹೆಸರಘಟ್ಟ ಹೋಬಳಿಯ ದಿಬ್ಬೂರು ಜಯಣ್ಣ ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಗುಂಪುಗಳು ಬೀದಿಗೆ ಬಂದಿವೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಧಿಕಾರದ ಅಧ್ಯಕ್ಷರ ನೇಮಕಾತಿ ವಿರೋಧಿಸಿ ಹಾಗೂ ನೇಮಕಾತಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಯಲಹಂಕ ಕ್ಷೇತ್ರದ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅವರ ವಿರುದ್ಧ ಮತ್ತು ಪರವಾಗಿ ನಡೆದ ಚರ್ಚೆಗಳು ತಾರಕಕ್ಕೆ ಮುಟ್ಟಿದ್ದವು.

ಇಷ್ಟಕ್ಕೇ ನಿಲ್ಲಲಿಲ್ಲ. ಬಿಜೆಪಿ ನಗರ ಘಟಕದ ಅಧ್ಯಕ್ಷ ಎಚ್‌.ಎಸ್‌.ಶಿವಶಂಕರ್‌, ಮುದ್ದಪ್ಪ ಸೇರಿದಂತೆ ಹಲವಾರು ಜನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಬಳಿಗೂ ದೂರು ಕೊಂಡೊಯ್ದರು. ಆದರೆ ಮುಖ್ಯಮಂತ್ರಿ‘ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಅಶೋಕ್ ಅವರೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಿ’ ಎಂದು ಜಾರಿಕೊಂಡಿದ್ದಾರೆ.

ತಾಲೀಮು ಆರಂಭ: 2018ರ ವಿಧಾನಸಭಾ ಚುನಾವಣೆಯ ಹಿಂದಿನ ದಿನದ ರಾತ್ರಿ ನಡೆದ ದಿಢೀರ್ ರಾಜಕೀಯ ಬೆಳವಣಿಗೆಯಿಂದಾಗಿಯೇ ಬಿಜೆಪಿ ಅಭ್ಯರ್ಥಿ ಸೋಲು ಕಾಣಲು ಕಾರಣವಾಗಿದೆ. ಹೀಗಾಗಿ ಕ್ಷೇತ್ರದಲ್ಲಿ ಬಿಜೆಪಿ ಸಂಘಟಿಸಲು, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಆಯ್ಕೆಯಾಗುವಂತೆ ಮಾಡುವುದು ಹಾಗೂ 2024ರ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದಲೇ ಜಯಣ್ಣ ಅವರನ್ನು ದೊಡ್ಡಬಳ್ಳಾಪುರ ಅಭಿವೃದ್ಧಿ ಯೋಜನಾ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಶಾಸಕ ಎಸ್‌.ಆರ್‌.ವಿಶ್ವನಾಥ್‌ ನೇಮಕ ಮಾಡಿಸಿದ್ದಾರೆ ಎನ್ನುವ ಮಾತುಗಳನ್ನು ಕ್ಷೇತ್ರದಲ್ಲಿನ ಬಿಜೆಪಿ ಪ್ರಮುಖರಿಂದಲೇ ಕೇಳಿ ಬರುತ್ತಿವೆ. ಈ ಎಲ್ಲಾ ಬೆಳಣಿಗೆಯಿಂದಾಗಿ ಬಿಜೆಪಿಯಲ್ಲಿ ಒಳಗೇ ಇದ್ದ ಗುಂಪುಗಾರಿಕೆ ರಾಜಕಾರಣ ಸಾಮಾಜಿಕ ಜಾಲತಾಣಗಳ ಮೂಲಕ ಬೀದಿಗೆ ಬಂದಿವೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ನಂತರ ತಾಲ್ಲೂಕಿನ ಕಂದಾಯ, ಪೊಲೀಸ್‌ ಸೇರಿದಂತೆ ಹಲವಾರು ಇಲಾಖೆಗಳ ಅಧಿಕಾರಿಗಳ ವರ್ಗಾವಣೆಯಲ್ಲೂ ಸಹ ನಮ್ಮ ಮಾತು ನಡೆಯುತ್ತಿಲ್ಲ. ಎಲ್ಲವು ಸಹ ಒಂದೆರಡು ಗುಂಪಿನ ಕೆಲವೇ ಜನರ ಮಾತುಗಳಷ್ಟೇ ನಡೆಯುತ್ತಿದೆ. ತಾಲ್ಲೂಕಿನ ಮಟ್ಟಿಗೆ ಹೈಕಮಾಂಡ್‌ ಎನ್ನುವುದೇ ಇಲ್ಲದಾಗಿದೆ. ಎಲ್ಲದಕ್ಕೂ ಯಲಹಂಕ ಕ್ಷೇತ್ರದ ಶಾಸಕರ ಬಳಿಗೆ ಹೋಗುವಂತಾಗಿದೆ ಎಂದು ಬಿಜೆಪಿಯ ಕೆಲ ಮುಖಂಡರು ತಮ್ಮ ಅಸಹಾಯಕತೆ ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT