ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಮಾತನಾಡಿದ ಅಧಿಕಾರಿಗೆ ಬಾಲಿವುಡ್‌ ನಟ ಸಲ್ಮಾನ್‌ ಯೂಸೂಫ್‌ ಖಾನ್‌ ನಿಂದನೆ

‘ಅನಕ್ಷರಸ್ಥ ಪಶು’ ಎಂದು ಟೀಕಿಸಿದ ಬೆಂಗಳೂರು ಮೂಲದ ನಟ!
Last Updated 16 ಮಾರ್ಚ್ 2023, 4:37 IST
ಅಕ್ಷರ ಗಾತ್ರ

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ ಜಿಲ್ಲೆ): ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡದಲ್ಲಿ ಸಂಭಾಷಿಸಿದ ಅಧಿಕಾರಿಯೊಬ್ಬರನ್ನು ಬಾಲಿವುಡ್‌ ನಟ ಹಾಗೂ ನೃತ್ಯ ಸಂಯೋಜಕ ಸಲ್ಮಾನ್‌ ಯೂಸೂಫ್‌ ಖಾನ್‌ ನಿಂದಿಸಿದ್ದಾರೆ.

ದುಬೈಗೆ ತೆರಳಲು ಮಂಗಳವಾರ ತಡರಾತ್ರಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಸಲ್ಮಾನ್‌ ಭದ್ರತಾ ತಪಾಸಣೆ ಮಾಡಿಸುತ್ತಿದ್ದಾಗ ಅವರ ಪಾಸ್‌ಪೋರ್ಟ್ ನೋಡಿದ ಅಧಿಕಾರಿ ಬೆಂಗಳೂರಿನವರೇ ಆದ ಸಲ್ಮಾನ್ ಜೊತೆ ಕನ್ನಡದಲ್ಲಿ ಮಾತನಾಡಿದ್ದಾರೆ. ಆಗ ನಟ ‘ನನಗೆ ಕನ್ನಡ ಬರುವುದಿಲ್ಲ’ ಎಂದು ಹೇಳಿದ್ದಾರೆ.

‘ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಲ್ಲಿದ್ದ ಅಧಿಕಾರಿಯೊಬ್ಬರು ಕನ್ನಡದಲ್ಲಿ ಮಾತನಾಡುವಂತೆ ನನಗೆ ಒತ್ತಾಯಿಸಿದ್ದಾರೆ. ಈ ಅಧಿಕಾರಿ ಅನಕ್ಷರಸ್ಥ ಪಶು. ಇಂಥ ಅನಕ್ಷರಸ್ಥರಿಂದಲೇ ದೇಶ ಅಭಿವೃದ್ಧಿ ಆಗುತ್ತಿಲ್ಲ’ ಎಂದು ನಿಂದಿಸಿದ ವಿಡಿಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

‘ನೀವು ಹುಟ್ಟಿರುವುದು ಬೆಂಗಳೂರಿನಲ್ಲಿ. ನಿಮ್ಮ ತಂದೆ ಹುಟ್ಟಿರುವುದು ಬೆಂಗಳೂರಿನಲ್ಲಿ. ಆದರೂ, ನಿಮಗೆ ಕನ್ನಡ ಬರುವುದಿಲ್ಲ ಎಂದರೆ ಹೇಗೆ’ ಎಂದು ಅಧಿಕಾರಿ ಪ್ರಶ್ನಿಸಿದ್ದಾರೆ. ಇದಕ್ಕೆ ಸಲ್ಮಾನ್, ‘ನಾನು ಸೌದಿ ಹುಡುಗ. ನಾನು ಹುಟ್ಟಿದ್ದು ಬೆಂಗಳೂರಿನಲ್ಲಾದರೂ ಶಾಲೆ ಕಲಿತಿದ್ದು ಸೌದಿನಲ್ಲಿ. ಹಾಗಾಗಿ, ನಾನು ಕನ್ನಡ ಕಲಿತಿಲ್ಲ’ ಎಂದಿದ್ದಾರೆ.

ಆಗ ಆ ಅಧಿಕಾರಿಯು ‘ನಿಮಗೆ ಕನ್ನಡ ಬರುವುದಿಲ್ಲ ಎಂದರೆ ನನಗೆ ಅನುಮಾನ ಬರುತ್ತಿದೆ’ ಎಂದಿದ್ದಾರೆ. ಇದಕ್ಕೆ ಸಿಟ್ಟಾದ ಸಲ್ಮಾನ್, ‘ನನ್ನನ್ನು ಅನುಮಾನಿಸುತ್ತಿದ್ದೀರಾ. ಏಕೆ ಅನುಮಾನಿಸುತ್ತಿದ್ದೀರಿ’ ಎಂದು ಜೋರು ಧ್ವನಿಯಲ್ಲಿ ಮಾತನಾಡಿದ್ದಾರೆ. ಆಗ ಅಧಿಕಾರಿ ಸುಮ್ಮನಾದರಂತೆ. ಹೀಗೆಂದು ಸಲ್ಮಾನ್ ವಿಡಿಯೊದಲ್ಲಿ
ಹೇಳಿದ್ದಾರೆ.

‘ಬೆಂಗಳೂರಿನಲ್ಲಿ ಹುಟ್ಟಿದ ಮಾತ್ರಕ್ಕೆ ಕನ್ನಡ ಬರಲೇ ಬೇಕು ಎಂಬ ನಿಯಮ ಇದೆಯೇ. ನಾನು ಬೆಂಗಳೂರಿನವನೇ. ಆದರೆ, ವಿಶ್ವದ ನಾನಾ ಕಡೆ ಟ್ರಾವೆಲ್ ಮಾಡುವ ಹಕ್ಕು ನನಗಿದೆ. ಈ ರೀತಿಯ ಅನಕ್ಷರಸ್ಥ ಜನರು ಇರುವವವರೆಗೆ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ನನಗೆ ಬಹಳ ಸಿಟ್ಟು ಬಂತು. ನನ್ನದೇ ನಗರದಲ್ಲಿ ನನ್ನನ್ನು ನಾನು ಸಾಬೀತುಪಡಿಸಬೇಕಾಗಿ ಬಂದಿದೆ’ ಎಂದು ನಟ ವಿಡಿಯೊದಲ್ಲಿ
ಹೇಳಿದ್ದಾರೆ.

‘ಈ ನಗರದಲ್ಲಿ ಹುಟ್ಟಿದೆ. ಈ ನಗರಕ್ಕೆ ನನ್ನ ಯೋಗದಾನವೂ ಇದೆ. ನಗರಕ್ಕಾಗಿ ಹಲವು ವೇದಿಕೆಗಳಲ್ಲಿ ಪ್ರಶಸ್ತಿ ಗೆದ್ದಿದ್ದೇನೆ. ಆದರೆ, ಈಗ ನಾನು ಭಾರತೀಯ ಎಂಬುದನ್ನು ನಾನು ಸಾಬೀತುಪಡಿಸಬೇಕಾದ ಪರಿಸ್ಥಿತಿ ಬಂದಿದೆ. ನಾನು ಆ ವ್ಯಕ್ತಿಗೆ ಹೇಳಿದೆ. ನಮ್ಮ ಮಾತೃಭಾಷೆ ಹಿಂದಿ. ಆ ಭಾಷೆ ನನಗೆ ಬರುತ್ತದೆ. ಅದು ಸಾಕಲ್ಲವೆ ಎಂದು. ಪ್ರಧಾನಿ ನರೇಂದ್ರ ಮೋದಿಗೆ ಕನ್ನಡದಲ್ಲಿ ಮಾತನಾಡಲು ಬರುತ್ತದೆಯೇ. ಈ ಅನಕ್ಷರಸ್ಥ ಪಶುಗಳಿಗೆ ಏನು ಹೇಳುವುದು. ನಾನು ಆ ಅಧಿಕಾರಿ ವಿರುದ್ಧ ದೂರು ನೀಡಲು ಯತ್ನಿಸಿದೆ. ಆದರೆ, ಯಾರೂ ನನಗೆ ಸರಿಯಾದ ಮಾಹಿತಿ ನೀಡಲಿಲ್ಲ’ ಎಂದು ವಿಡಿಯೊದಲ್ಲಿ ನಟ ಸಲ್ಮಾನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT