ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ವಿಜೃಂಭಣೆಯ ಬ್ರಹ್ಮರಥೋತ್ಸವ

ಬಾಳೆಹಣ್ಣು ಎಸೆದು ಹರಕೆ ತೀರಿಸಿದ ಭಕ್ತರು
Last Updated 12 ಜುಲೈ 2019, 13:58 IST
ಅಕ್ಷರ ಗಾತ್ರ

ವಿಜಯಪುರ: ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ, ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಹೋಗುವುದರಿಂದ ಯುವಜನರನ್ನು ಧಾರ್ಮಿಕ ಕಾರ್ಯಗಳತ್ತ ಸೆಳೆಯಲು ಸಹಕಾರಿಯಾಗುತ್ತದೆ ಎಂದು ಸಂಸದ ಬಿ.ಎನ್.ಬಚ್ಚೇಗೌಡ ಹೇಳಿದರು.

ಇಲ್ಲಿ ಪ್ರಥಮ ಏಕಾದಶಿಯ ಅಂಗವಾಗಿ ನಗರದ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯದಲ್ಲಿ 59 ನೇ ವರ್ಷದ ಅಖಂಡ ಶ್ರೀರಾಮನಾಮ ಸಪ್ತಾಹ ಮಹೋತ್ಸವ ಹಾಗೂ ಶ್ರೀಮತ್ಕಲ್ಯಾಣ ಮಹೋತ್ಸವ, 14 ನೇ ವರ್ಷದ ಕಲ್ಲುಗಾಲಿ ಬ್ರಹ್ಮರಥೋತ್ಸವ, ಮತ್ತು 12 ನೇ ವರ್ಷದ ಸದ್ಗುರು ಯೋಗಿನಾರೇಯಣ ಯತೀಂದ್ರರ ಆರಾಧನಾ ಮಹೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬ್ರಹ್ಮರಥೋತ್ಸವದ ಅಂಗವಾಗಿ ನಗರದ ಬೀದಿಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಹಬ್ಬದ ಸಡಗರ ಸಂಭ್ರಮದ ನಡುವೆ ರಥವನ್ನು ಎಳೆಯಲು ಜನರು ಹಾತೊರೆಯುವುದು ಕಂಡುಬಂತು. ವಿವಿಧ ಬಗೆಯ ಹೂಗಳಿಂದ ಅಲಂಕೃತಗೊಂಡಿದ್ದ ರಥವನ್ನು ಎಳೆದು ಸಂಭ್ರಮಿಸಿದರು.

ಧ್ವಜಾರೋಹಣ, ಬೇರಿಪೂಜೆ, ಹನುಮಂತವಾಹನೋತ್ಸವ, ಸಿಂಹ ವಾಹನೋತ್ಸವ, ಶೇಷ ವಾಹನೋತ್ಸವ, ಗರುಡ ವಾಹನೋತ್ಸವ, ಗಜೇಂದ್ರ ಮೋಕ್ಷ ಉತ್ಸವ, ಅಖಂಡ ಶ್ರೀರಾಮನಾಮ, ಪೂಲಂಗಿಸೇವೆ, ಯಾತ್ರದಾನೋತ್ಸವ ಮತ್ತು ಪ್ರಸಾದಸೇವೆ, ಮೇನೆ ಉತ್ಸವ ಪೂಜೆ ನೆರವೇರಿಸಿದರು.

ತೇಗದ ಮರದಿಂದ ಮಾಡಿರುವ ಮೇನೆ ಉತ್ಸವವನ್ನು ಬಲಿಜ ಯುವಸಮೂಹದವರು ನಡೆಸಿಕೊಟ್ಟರು. ಲಕ್ಷ್ಮೀವೆಂಕಟೇಶ್ವರ ಗಾಣಿಗ ಸೇವಾ ಟ್ರಸ್ಟ್ ಮತ್ತು ವಿಜಯಪುರ ಟೌನ್ ಗಾಣಿಗರ ಸಂಘದ ವತಿಯಿಂದ ಭಾಗವತಸೇವೆ ನಡೆಸಿದರು.

ದೇವಾಲಯ ಸಮಿತಿಯ ಪದಾಧಿಕಾರಿಗಳು ಹಾಗೂ ಬಲಿಜ ಜನಾಂಗದ ಗಣ್ಯರು, ಮುಖಂಡರು ಪೂಜೆ ಸಲ್ಲಿಸಿದರು. ಬಳಿಕ ದೇವರನ್ನು ರಥದಲ್ಲಿ ಪ್ರತಿಷ್ಠಾಪನೆ ಮಾಡಿ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿದರು.

ಡೊಳ್ಳು ಕುಣಿತ, ವೀರಗಾಸೆ ಕುಣಿತ, ತಮಟೆ ವಾದನಗಳು, ನಾದಸ್ವರಗಳು ಪಂಡರಾಪುರ ಭಜನೆ ಸೇರಿದಂತೆ ವಿವಿಧ ಜನಪದ ಕಲಾತಂಡಗಳು ಬ್ರಹ್ಮರಥೋತ್ಸವಕ್ಕೆ ಮತ್ತಷ್ಟು ಮೆರುಗು ನೀಡಿದ್ದವು. ತೇರಿನ ಕಳಶಕ್ಕೆ ಹೂ, ದವನ, ಬಾಳೆ ಹಣ್ಣು ಅರ್ಪಿಸುವ ಮೂಲಕ ಭಕ್ತರು ಹರಕೆ ತೀರಿಸಿದರು. ಆಷಾಢ ಮಾಸದಲ್ಲೇ ಉತ್ಸವ ನಡೆಯುವುದರಿಂದ ನವವಿವಾಹಿತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉತ್ಸವ ವೀಕ್ಷಿಸಲು ಸುತ್ತಲಿನ ಗ್ರಾಮಗಳಿಂದ ಸಾವಿರಾರು ಜನರು ಬಂದಿದ್ದರು.

ಕರ್ನಾಟಕ ಪ್ರದೇಶ ಬಲಿಜ ಸಂಘದ ಅಧ್ಯಕ್ಷ ಪೆರಿಕಲ್ ಸುಂದರ್, ಕಾರ್ಯದರ್ಶಿ ಸಿ.ಕೆ.ಜಗದೀಶ್, ಆನೇಕಲ್ ತಿಮ್ಮಯ್ಯ ಚಾರಿಟೀಸ್ ಟ್ರಸ್ಟ್‌ನ ಅಧ್ಯಕ್ಷ ಕುಚ್ಚಣ್ಣ ಶ್ರೀನಿವಾಸ್, ಬಿ.ರಾಜಣ್ಣ, ಎನ್.ದಯಾಸಾಗರ್,ಸಂಘದ ದೇವಾಲಯ ಸಮಿತಿಯ ಉಪಾಧ್ಯಕ್ಷ ರಮೇಶ್, ಕಾರ್ಯದರ್ಶಿ ಶಿವಕುಮಾರ್, ಸಹಕಾರ್ಯದರ್ಶಿ ವಿ.ಶ್ರೀನಿವಾಸ್, ಖಜಾಂಚಿ ಸಿ.ವೆಂಕಟೇಶಪ್ಪ, ಗೌರವಾಧ್ಯಕ್ಷರಾದ ಎನ್.ಪಿ.ರಾಮಕೃಷ್ಣಪ್ಪ, ಪಿ.ನಾರಾಯಣಪ್ಪ, ಕೇಂದ್ರ ಬಲಿಜ ಸಂಘದ ಸದಸ್ಯರಾದ ಎಂ.ಮುನಿರಾಜು, ಆರ್.ಮುನಿರಾಜು, ವಿ.ಎನ್.ವೆಂಕಟೇಶ್, ಆರ್. ವೇಣುಗೋಪಾಲ್, ಬಲಮುರಿ ಶ್ರೀನಿವಾಸ್, ವಿ.ನಾಗಯ್ಯ, ಎಂ.ನಾಗರಾಜ್, ಎಂ.ವೆಂಕಟರಮಣಪ್ಪ, ಮುನಿಹನುಮಪ್ಪ, ರಾಜಣ್ಣ, ಆರ್.ಗೋವಿಂದಪ್ಪ, ಕೇಶವಮೂರ್ತಿ, ಎನ್. ವೆಂಕಟೇಶ್, ರವಿಕುಮಾರ್, ವಿ.ಪಿ.ಚಂದ್ರು, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT