ಶನಿವಾರ, ಅಕ್ಟೋಬರ್ 24, 2020
28 °C

ಮತ್ತೊಮ್ಮೆ ಬ್ರಾಹ್ಮಣ ಸಮುದಾಯದ ಸಮೀಕ್ಷೆ ನಡೆಸಬೇಕು: ಎಚ್.ಎಸ್.ಸಚ್ಚಿದಾನಂದಮೂರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ‘ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಬ್ರಾಹ್ಮಣ ಸಮುದಾಯದ ಸಮೀಕ್ಷೆಯನ್ನು ಮತ್ತೊಮ್ಮೆ ನಡೆಸಬೇಕಾದ ಅಗತ್ಯವಿದೆ’ ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ದಿ ಮಂಡಳಿ ಅಧ್ಯಕ್ಷ ಎಚ್.ಎಸ್.ಸಚ್ಚಿದಾನಂದಮೂರ್ತಿ ಹೇಳಿದರು.

ತಾಲ್ಲೂಕಿನ ಘಾಟಿ ಕ್ಷೇತ್ರದ ಬ್ರಾಹ್ಮಣರ ಧರ್ಮಶಾಲಾದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್‍ನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕ ಉದ್ಘಾಟಿಸಿ ಮಾತನಾಡಿದರು.

‘ರಾಜ್ಯದಲ್ಲಿ 42 ಲಕ್ಷ ಬ್ರಾಹ್ಮಣರಿದ್ದಾರೆ. ಸುಮಾರು 1.35 ಲಕ್ಷ ದೇವಾಲಯಗಳಿಂದ 3.5 ಲಕ್ಷ ಅರ್ಚಕ ವೃತ್ತಿಯಲ್ಲಿ ತೊಡಗಿದ್ದಾರೆ. ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ಸಂಕಷ್ಟದಲ್ಲಿರುವ ಬ್ರಾಹ್ಮಣರಿಗೆ ₹5 ಕೋಟಿ ಸಹಾಯಧನ ವಿತರಿಸಲು ಸೂಚನೆ ಬಂದಾಗ ಯಾರಿಗೆ ನೀಡಬೇಕೆಂಬ ಗೊಂದಲ ಉಂಟಾಯಿತು. ಈ ದಿಸೆಯಲ್ಲಿ ಅರ್ಚಕರನ್ನು ಅಸಂಘಟಿತ ಕಾರ್ಮಿಕರಂತೆ ಪರಿಗಣಿಸಬೇಕಿದ್ದು, ಸೌಲಭ್ಯಗಳನ್ನು ಪಡೆಯಲು ತಮ್ಮ ಅಸ್ತಿತ್ವವನ್ನು ಪ್ರತಿಪಾದಿಸುವ ಅಗತ್ಯವಿದೆ. ಸಂಘಟನೆಗಳು ಇದಕ್ಕೆ ಇಂಬು ನೀಡುತ್ತವೆ. ಸಂಘಟಿತವಾಗಿ ಸಮುದಾಯ ಒಗ್ಗೂಡಿ ಸರ್ಕಾರದ ಸೌಲಭ್ಯ ಪಡೆಯಬೇಕಿದೆ’ ಎಂದರು.

ಬ್ರಾಹ್ಮಣ ಸಮಾಜದಲ್ಲಿ ಸುಮಾರು 24 ಉಪ ಜಾತಿಗಳಿದ್ದು, ಎಲ್ಲರನ್ನೂ ಒಗ್ಗೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ. ಬ್ರಾಹ್ಮಣ ಸಮುದಾಯಕ್ಕೆ ಕಂದಾಯ ಇಲಾಖೆ ವತಿಯಿಂದ ಜಾತಿ ಪ್ರಮಾಣ ಪತ್ರ ನೀಡಲಾಗುತ್ತಿದೆ. ಐಎಎಸ್, ಐಪಿಎಸ್‌ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳಿಗೆ ಸಹಾಯ ಮಾಡಲಾಗುತ್ತಿದೆ. ಮಂಡಳಿ ವತಿಯಿಂದ ನೂತನ ಸಂಘಕ್ಕೆ ಅಗತ್ಯ ಸಹಕಾರ ನೀಡಲಾಗುವುದು’ ಎಂದರು.

ಪ್ರಾಸ್ತಾವಿಕ ಮಾತನಾಡಿದ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್‍ನ ಉಪಾಧ್ಯಕ್ಷ ರಾಘವೇಂದ್ರ ಭಟ್, ಲಾಕ್‌ಡೌನ್‌ ಸಂದರ್ಭದಲ್ಲಿ ಮುಜರಾಯಿ ಅರ್ಚಕರಿಗೆ ಹೊರತುಪಡಿಸಿ ಇತರ ದೇವಾಲಯಗಳ ಅರ್ಚಕರಿಗೆ ಸೌಲಭ್ಯಗಳು ದೊರೆಯಲಿಲ್ಲ. ಈ ದಿಸೆಯಲ್ಲಿ ಅರ್ಚಕರ ಕ್ಷೇಮಾಭಿವೃದ್ಧಿಗಾಗಿ ಸಂಘ ಸ್ಥಾಪಿಸಲಾಗಿದೆ. ಈಗಾಗಲೇ ರಾಜ್ಯದಲ್ಲಿ 10 ಸಾವಿರ ಸದಸ್ಯರು ನೋಂದಣಿಯಾಗಿದ್ದಾರೆ’ ಎಂದರು.

ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್‍ ಪ್ರಧಾನ ಕಾರ್ಯದರ್ಶಿ ಡಿ.ಎಸ್.ಸುಧೀಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಎಸ್.ಎಸ್.ಘಾಟಿ ಬ್ರಾಹ್ಮಣರ ಸಂಘದ ಅಧ್ಯಕ್ಷ ರಾಮನಾಥಶರ್ಮ, ಮುಖಂಡರಾದ ನಾಗರಾಜಶರ್ಮ, ಪ್ರಧಾನ ಸಂಚಾಲಕ ವಿ.ಅಚ್ಯುತಮೂರ್ತಿ, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ದಿ ಮಂಡಲಿ ನಿರ್ದೇಶಕ ಪವನ್‌ಕುಮಾರ್,ಅರ್ಚಕ ಶ್ರೀನಿವಾಸರಾಘವನ್ ಇದ್ದರು.

ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳಿಗೆ ಆಯ್ಕೆ ಪತ್ರವನ್ನು ವಿತರಿಸಲಾಯಿತು.

ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್‍ ಜಿಲ್ಲಾ ಘಟಕ: ವಿ.ಅಶ್ವತ್ಥನಾರಾಯಣ(ಅಧ್ಯಕ್ಷ),ಡಿ.ಕೆ.ನರಸಿಂಹಮೂರ್ತಿ(ಉಪಾಧ್ಯಕ್ಷ),ಎಚ್.ಎಚ್.ನರಸಿಂಹಮೂರ್ತಿ(ಪ್ರಧಾನ ಕಾರ್ಯದರ್ಶಿ), ವಿಶ್ವನಾಥ್(ಜಂಟಿ ಕಾರ್ಯದರ್ಶಿ) ಜಿ.ಎಸ್.ಅಶ್ವತ್ಥಪ್ರಸಾದ್ ದೀಕ್ಷಿತ್ (ಖಜಾಂಚಿ), ಎ.ಸಿ.ಶ್ರೀನಾಥ್(ಸಂಘಟನಾ ಕಾರ್ಯದರ್ಶಿ), ಎಚ್.ವಿ.ರಾಜೇಶ್(ನಿರ್ದೇಶಕರು)

ತಾಲ್ಲೂಕು ಅಧ್ಯಕ್ಷರು: ಎಸ್.ನವೀನ್(ದೊಡ್ಡಬಳ್ಳಾಪುರ),ಜಿ.ಎನ್.ಮಂಜುನಾಥಭಟ್( ನೆಲಮಂಗಲ), ಎ.ಎನ್.ಕೇಶವಮೂರ್ತಿ (ಹೊಸಕೋಟೆ), ಜೆ.ಕೆ.ಮಂಜುನಾಥಶರ್ಮ (ದೇವನಹಳ್ಳಿ).

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು