ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇಜೋವಧೆ ಸಹಿಸಲಾರೆ

‘ತುಘಲಕ್’ ಟೀಕೆಗೆ ಚಿ.ಮಾ ಸುಧಾಕರ್ ಪ್ರತಿಕ್ರಿಯೆ
Last Updated 15 ಜನವರಿ 2021, 1:39 IST
ಅಕ್ಷರ ಗಾತ್ರ

ವಿಜಯಪುರ: ಕನ್ನಡ ಸಾಹಿತ್ಯ ಪರಿಷತ್‌ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಅನುದಾನ ದುರುಪಯೋಗ ಕುರಿತು ಸುಳ್ಳು ಆರೋಪ ಮಾಡುವ ಮೂಲಕ ವೈಯಕ್ತಿಕವಾಗಿ ತೇಜೋವಧೆ ಮಾಡುವ ಹುನ್ನಾರ ನಡೆದಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಚಿ.ಮಾ.ಸುಧಾಕರ್ ಆರೋ‍ಪಿಸಿದರು.

ಪಟ್ಟಣದ ಗಾಂಧಿಚೌಕದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಈಚೆಗೆ ಪರಿಷತ್‌ ಕುರಿತು ಅನೇಕ ಅಪಪ್ರಚಾರ ಮಾಡಲಾಗುತ್ತಿದೆ. ‘ನನ್ನನ್ನು ಹೊರತುಪಡಿಸಿ ನನಗೆ ಕುಟುಂಬವಿಲ್ಲ. ನನ್ನ ಹೆಸರಿನಲ್ಲಿ ಆಸ್ತಿ, ಅಂತಸ್ತುಗಳಿಲ್ಲ’ ಕನ್ನಡಕ್ಕಾಗಿ ದುಡಿಯುತ್ತಿದ್ದೇನೆಯೇ ಹೊರತು ನನ್ನ ಬೆಳವಣಿಗೆಗಾಗಿ ಅಲ್ಲ. ಪರಿಷತ್ತಿನ ಕಾರ್ಯಕ್ರಮ ಮಾಡಲು ಪರಿಷತ್ತಿನಿಂದ ಬಿಡುಗಡೆಯಾಗುವ ಅನುದಾನ ಹೊರತುಪಡಿಸಿ ಸ್ನೇಹಿತರಿಂದಲೂ ಹಣ ಪಡೆದು ಕಾರ್ಯಕ್ರಮ ರೂಪಿಸಿದ್ದೇನೆ. ₹36ಲಕ್ಷ ಹೆಚ್ಚುವರಿಯಾಗಿ ಖರ್ಚು ಮಾಡಿರುವುದಾಗಿ ತಿಳಿಸಿದರು.

ಚುನಾವಣೆಗಾಗಿ ಈ ಸುಳ್ಳು ಆರೋಪ ಮಾಡುತ್ತಿದ್ದಾರೆಯೇ ಹೊರತು. ಬೇರೆ ಕಾರಣವಿಲ್ಲ. ಪರಿಷತ್‌ ಸದಸ್ಯರಿಗೆ ನನ್ನ ಮೇಲೆ ವಿಶ್ವಾಸವಿದೆ. ಅದನ್ನು ಬಿಟ್ಟು ಪರಿಷತ್ತಿನ ವೃಥಾ ಆರೋಪ ಮಾಡುವುದು ಸರಿಯಲ್ಲ ಎಂದರು.

ದೊಡ್ಡಬಳ್ಳಾಪುರದಲ್ಲಿ ನಡೆಯಬೇಕಾಗಿದ್ದ 22ನೇ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ₹2ಲಕ್ಷ ಹಣ ತಾಲ್ಲೂಕು ಅಧ್ಯಕ್ಷರಿಗೆ ಮೊದಲೇ ನೀಡಲಾಗಿತ್ತು. ಕೋವಿಡ್ ಸಂಕಷ್ಟದ ಕಾರಣದಿಂದ ಸಮ್ಮೇಳನ ಮುಂದೂಡಲಾಯಿತು. ಹಣವನ್ನು ಅವರೇ ಖರ್ಚು ಮಾಡಿಕೊಂಡಿದ್ದಾರೆ. ಜ.28.29ಕ್ಕೆ ನಿಗದಿಪಡಿಸಿದ್ದು, ಜನವರಿ 13ರಂದು ₹2ಲಕ್ಷ ಖಾತೆಗೆ ಕಳುಹಿಸಲಾಗಿದೆ. 25ರಂದು ಉಳಿದ ₹1 ಲಕ್ಷ ಕಳುಹಿಸಲಿದ್ದೇವೆ. ದುರುಪಯೋಗ ಮಾಡಿಲ್ಲ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಚಂದ್ರಶೇಖರ ಹಡಪದ್ ಮಾತನಾಡಿ, ಕಸಾಪ ಪದಾಧಿಕಾರಿಗಳಾದವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವಂತಿಲ್ಲ. ಆದರೆ, ಹುಲಿಕಲ್ ನಟರಾಜ್ ಅವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇದು ಶಿಷ್ಟಾಚಾರದ ಉಲ್ಲಂಘನೆಯಲ್ಲವೇ ಎಂದು ಪ್ರಶ್ನಿಸಿದರು.

ಕಸಾಪ ಹೊಸಕೋಟೆ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಡಿ.ಎನ್. ಮೂರ್ತಿ ಮಾತನಾಡಿ, ಜಿಲ್ಲಾ ಘಟಕದ ಅಧ್ಯಕ್ಷರನ್ನು ತುಘಲಕ್, ಹಿಟ್ಲರ್ ಎಂದು ಜರಿದಿರುವವರು ಬಹಿರಂಗ ಕ್ಷಮಾಪಣೆ ಕೇಳಬೇಕು ಎಂದು ಆಗ್ರಹಿಸಿದರು.

ಕಸಾಪ ಪದಾಧಿಕಾರಿಗಳಾದ ಪರಮೇಶ್, ಶಿವಕುಮಾರ್, ವಿ.ಎನ್.ರಮೇಶ್, ಬೆಟ್ಟೇನಹಳ್ಳಿ ಗೋಪಿನಾಥ್, ಜೆ.ಆರ್.ಮುನಿವೀರಣ್ಣ, ಚೌಡೇಗೌಡ, ಮುನಿನಾರಾಯಣಸ್ವಾಮಿ, ಎಂ.ವಿ.ನಾಯ್ಡು, ಮುರಳಿ, ವಿಶ್ವನಾಥ್, ಸೂರ್ಯಪ್ರಕಾಶ್, ನಾರಾಯಣಸ್ವಾಮಿ, ಕೆ.ಎಚ್.ಚಂದ್ರಶೇಖರ್, ಉಮೇಶ್, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT