ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಮಕ್ಕಳು ಉನ್ನತ ಹುದ್ದೆಗೇರಬೇಕು

ಆನೇಕಲ್: 300 ವಿದ್ಯಾರ್ಥಿಗಳಿಗೆ ₹ 10 ಲಕ್ಷ ಪ್ರೋತ್ಸಾಹಧನ
Last Updated 7 ಜೂನ್ 2020, 15:19 IST
ಅಕ್ಷರ ಗಾತ್ರ

ಆನೇಕಲ್: ಗ್ರಾಮೀಣ ಭಾಗದ ರೈತರ ಮಕ್ಕಳು ಪ್ರತಿಭಾವಂತರಾಗಿದ್ದಾರೆ. ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಉನ್ನತ ಸಾಧನೆ ಮಾಡಬೇಕು ಎಂದು ಬಮುಲ್‌ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದರು.

ಪಟ್ಟಣದಲ್ಲಿ ಬಮುಲ್‌ ಕಲ್ಯಾಣ ಟ್ರಸ್ಟ್‌ ವತಿಯಿಂದ ಆಯೋಜಿಸಿದ್ದ 2019-20ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ಸರ್ಕಾರಿ ಕೆಲಸಗಳನ್ನುನಂಬಿಕೊಳ್ಳದೇ ವಿವಿಧ ಕ್ಷೇತ್ರಗಳಲ್ಲಿ ಕೌಶಲ ಬೆಳೆಸಿಕೊಂಡು ಪರ್ಯಾಯ ಉದ್ಯೋಗ ಪಡೆಯುವ ದಿಸೆಯಲ್ಲಿ ಮುನ್ನುಗ್ಗಬೇಕು. ವೈಜ್ಞಾನಿಕ ಕೃಷಿ ಮತ್ತು ಹೈನುಗಾರಿಕೆಯನ್ನು ಪ್ರವೃತ್ತಿಯಾಗಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗಲು ಬಹಳಷ್ಟು ಅವಕಾಶಗಳಿವೆ ಎಂದು ಹೇಳಿದರು.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನೀಡುವ ಪ್ರತಿಭಾ ಪುರಸ್ಕಾರ ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು. ರೈತರ ಮಕ್ಕಳು ಸಹ ಇಂಜಿನಿಯರಿಂಗ್, ಡಾಕ್ಟರ್‌ಗಳಾಗಲು ಅವಕಾಶಗಳಿವೆ. ಸಾಧನೆ ಸಾಧಕನ ಸ್ವತ್ತೇ ವಿನಃ ಸೋಮಾರಿಯ ಸ್ವತ್ತಲ್ಲ. ಹಾಗಾಗಿ ವಿದ್ಯಾರ್ಥಿಗಳು ಶ್ರಮ ವಹಿಸಿ ಉನ್ನತ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.

ಕೊರೊನಾ, ಲಾಕ್‌ಡೌನ್‌ನಿಂದಾಗಿ ಬಮೂಲ್‌ ಸಂಕಷ್ಟದಲ್ಲಿದ್ದರೂ ರೈತರ ಪರವಾಗಿ ನಿಲ್ಲುವ ರೈತರ ಒಕ್ಕೂಟವಾಗಿದೆ. ಬಮೂಲ್‌ ಸಂಸ್ಥೆ ವತಿಯಿಂದ ಚೀಸ್‌ ಮತ್ತು 90 ದಿನಗಳು ಬಳಕೆ ಮಾಡುವಂತಹ ತೃಪ್ತಿ ಹಾಲು ಸೇರಿದಂತೆ ವಿವಿಧ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಗಿರ್‌ ಸೇರಿದಂತೆ ವಿವಿಧ ತಳಿಗಳ ಹಸುಗಳನ್ನು ರಾಜ್ಯದ ರೈತರಿಗೆ ನೀಡಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬಮುಲ್‌ ನಿರ್ದೇಶಕ ಬಿ.ಜಿ.ಆಂಜಿನಪ್ಪ ಮಾತನಾಡಿ, ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಹಲವು ರೈತರಿಗೆ ಶಾಲಾ ಶುಲ್ಕ ಕಟ್ಟಲು ಸಮಸ್ಯೆಯಿದೆ. ಹೈನುಗಾರಿಕೆ ಮತ್ತು ಸಹಕಾರ ಸಂಘಗಳ ಬಟವಾಡೆಯನ್ನೇ ನಂಬಿರುವ ರೈತರಿಗೆ ಪ್ರತಿಭಾ ಪುರಸ್ಕಾರದ ಪ್ರೋತ್ಸಾಹ ಧನ ನೆರವಾಗಲಿದೆ ಎಂದರು.

ಐಎಎಸ್‌ ಮತ್ತು ಕೆಎಎಸ್‌ ತರಬೇತಿ ಪಡೆಯುವ ಹಾಲು ಉತ್ಪಾದಕ ಸಹಕಾರ ಸಂಘಗಳ ಸದಸ್ಯರ ಮಕ್ಕಳಿಗೆ ಬಮೂಲ್‌ ವತಿಯಿಂದ ₹ 50 ಸಾವಿರ, ಐಟಿಐ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ₹ 10 ಸಾವಿರ ನೆರವು ನೀಡಲಾಗುತ್ತಿದೆ. ಆದರೆ ಈ ವಿಭಾಗದಲ್ಲಿ ಅರ್ಜಿಗಳೇ ಸಲ್ಲಿಕೆಯಾಗುತ್ತಿಲ್ಲ. ಹಾಗಾಗಿ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಸೌಲಭ್ಯ ಬಳಸಿಕೊಳ್ಳಬೇಕು‌ಎಂದರು.

ಆನೇಕಲ್‌ ಶೀತಲ ಕೇಂದ್ರದ ಉಪ ವ್ಯವಸ್ಥಾಪಕ ಡಾ.ಮೋಹನ್‌ಕುಮಾರ್‌ ಮಾತನಾಡಿ, ತಾಲ್ಲೂಕಿನ 300 ಮಂದಿ ವಿದ್ಯಾರ್ಥಿಗಳಿಗೆ ಒಟ್ಟು ₹ 10 ಲಕ್ಷ ಪ್ರೋತ್ಸಾಹಧನ ಚೆಕ್‌ ವಿತರಿಸಲಾಗಿದೆ. ಹಾಲು ಕರೆಯುವ ಯಂತ್ರದ ಬೆಲೆ ₹ 46 ಸಾವಿರ ಆಗಿದ್ದು, ಸಬ್ಸಿಡಿ ದರ ₹ 23 ಸಾವಿರ ಆಗಿದೆ. ಮ್ಯಾಟ್‌, ಹುಲ್ಲು ಕತ್ತರಿಸುವ ಯಂತ್ರ ಸೇರಿದಂತೆ ಅಗತ್ಯ ಪರಿಕರಗಳನ್ನು ಸಬ್ಸಿಡಿ ದರದಲ್ಲಿ ನೀಡಲಾಗುತ್ತದೆ ಎಂದರು.

ಬಮೂಲ್‌ ವ್ಯವಸ್ಥಾಪಕ ಬಿ.ಕೆ.ಜಗದೀಶ್‌, ಬಮೂಲ್‌ ಟ್ರಸ್ಟ್‌ನ ಕಾರ್ಯದರ್ಶಿ ಪ್ರಸನ್ನಕುಮಾರ್‌, ಬಮೂಲ್ ನಿವೃತ್ತ ಪ್ರಧಾನ ವ್ಯವಸ್ಥಾಪಕ ಕೃಷ್ಣಾರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT