ಮಂಗಳವಾರ, ಮಾರ್ಚ್ 28, 2023
31 °C

ದೇವನಹಳ್ಳಿ: ರೈತರ ಮನವೊಲಿಕೆಗೆ ಸರ್ಕಸ್‌: ವಿಜಯಾ ಈ. ರವಿಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನರಾಯಪಟ್ಟಣ (ದೇವನಹಳ್ಳಿ): ದೇವನಹಳ್ಳಿಯ ಜೂನಿಯರ್ ಕಾಲೇಜು ಮೈದಾನದಲ್ಲಿ ಗಣರಾಜ್ಯೋತ್ಸವ ಸಂಭ್ರಮಾಚರಣೆ ನಂತರ ಇಲ್ಲಿನ ನಾಡ ಕಚೇರಿ ಆವರಣದಲ್ಲಿ ಚನ್ನರಾಯಪಟ್ಟಣ ಭಾಗದ 13 ಹಳ್ಳಿಗಳ ರೈತರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಾ ಈ. ರವಿಕುಮಾರ್‌ ನೇತೃತ್ವದಡಿ ಪೊಲೀಸ್‌ ಅಧಿಕಾರಿಗಳು ರೈತರೊಂದಿಗೆ ಮನವರಿಕೆ ಸಭೆ ನಡೆಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಾ ಈ. ರವಿಕುಮಾರ್‌, ‘ಕಳೆದ 298 ದಿನಗಳಿಂದ ಈ ಭಾಗದ ರೈತರು ಭೂ ಸ್ವಾಧೀನ ವಿರೋಧಿಸಿ ಹೋರಾಟ ಮಾಡುತ್ತಿರುವುದು ಜಿಲ್ಲಾಡಳಿತದ ಗಮನದಲ್ಲಿದೆ. ಜಿಲ್ಲಾಧಿಕಾರಿಯ ನಿರ್ದೇಶನದಂತೆ ರೈತರೊಂದಿಗೆ ಮಾತನಾಡಲು ಬಂದಿದ್ದೇನೆ. ಮುಂದಿನ 4-5 ದಿನಗಳಲ್ಲಿ ಸಚಿವರ ಸಮ್ಮುಖದಲ್ಲಿ ರೈತರ ಸಭೆ ನಡೆಸಲಾಗುವುದು’ ಎಂದು ಭರವಸೆ ನೀಡಿದರು.

‘ರೈತರು ಪ್ರಾಮಾಣಿಕವಾಗಿ ಹೋರಾಟ ಮಾಡುತ್ತಿರುವುದು ಪೊಲೀಸ್‌ ಇಲಾಖೆಯ ಗಮನದಲ್ಲಿದೆ. ಪ್ರತಿನಿತ್ಯ ರಾಜ್ಯ ಗುಪ್ತಚರ ದಳದಿಂದ ಹೋರಾಟದ ಮಾಹಿತಿಯನ್ನು ಸರ್ಕಾರಕ್ಕೆ ತಿಳಿಸಲಾಗುತ್ತಿದೆ. ಪ್ರತಿಭಟನೆ ಮಾಡಲು ಕೋಳಿ, ಕುರಿ ಸಮೇತ ರೈತರು ಹೊರಟಾಗ ಪೊಲೀಸರೊಂದಿಗೆ ಘರ್ಷಣೆಯಾಗುತ್ತದೆ. ಅಂತಹ ಸನ್ನಿವೇಶವನ್ನು ತಪ್ಪಿಸಬೇಕಿದೆ’ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪುರುಷೋತ್ತಮ್ ಮನವಿ ಮಾಡಿದರು.

ಡಿವೈಎಸ್‌ಪಿ ನಾಗರಾಜ್‌ ಮಾತನಾಡಿ, ‘ರೈತರ ನೋವು ಸರ್ಕಾರಕ್ಕೆ ಅರ್ಥವಾಗಿದೆ. ಗಣರಾಜ್ಯೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ಈಗಾಗಲೇ ಎಸ್‌.ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಒಂದು ಗಂಟೆ ಕಾಲ ರೈತರ ಸಮಸ್ಯೆ ಕುರಿತು ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರೊಂದಿಗೆ ಮಾತನಾಡಿದ್ದಾರೆ. ಎಲ್ಲದ್ದಕ್ಕೂ ಸರ್ಕಾರದ ಹಂತದಲ್ಲಿ ನಿರ್ಧಾರವಾಗಬೇಕಿದೆ’ ಎಂದು ತಿಳಿಸಿದರು.

ರೈತರು ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು. ಪೊಲೀಸ್ ಇನ್‌ಸ್ಪೆಕ್ಟರ್‌ ವೀರೇಂದ್ರ ಪ್ರಸಾದ್‌, ಸಬ್‌ ಇನ್‌ಸ್ಪೆಕ್ಟರ್‌ ಶರಣಪ್ಪ ಉಪಸ್ಥಿತರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು