ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರಮದ ಬದುಕು ಕಟ್ಟಿಕೊಳ್ಳಲು ವಿದ್ಯಾಸಂಪನ್ನರಾಗಿ: ಟಿ.ಎಂ.ಶ್ರೀನಿವಾಸ್

Last Updated 6 ಫೆಬ್ರುವರಿ 2020, 14:05 IST
ಅಕ್ಷರ ಗಾತ್ರ

ಮಾಗಡಿ: ವಿದ್ಯಾರ್ಥಿಗಳು ಜ್ಞಾನ ಹಸಿವು ತುಂಬಿಸಿಕೊಳ್ಳಲು ಅವಿರತ ಶ್ರಮಿಸಬೇಕು ಎಂದು ತಿರುಮಲೆ ಕನ್ನಡ ಕೂಟದ ಸಂಚಾಲಕ ಟಿ.ಎಂ.ಶ್ರೀನಿವಾಸ್ ತಿಳಿಸಿದರು.

ಹುಲಿಕಟ್ಟೆ ಎಚ್.ಜಿ.ಚನ್ನಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ನಡೆದ ಕಾಲೇಜು ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.

ಆದರ್ಶ ಪುರುಷರೆಲ್ಲರೂ ಬಡತನದಲ್ಲಿ ಜನಿಸಿ, ಕಷ್ಟಪಟ್ಟು ವಿದ್ಯಾಸಂಪನ್ನರಾಗಿ, ಸ್ವಾರ್ಥ ಮರೆತು ಸೇವೆಯಲ್ಲಿ ದೇವರನ್ನು ಕಂಡು ಕೊಂಡವರು. ಸಂವಿಧಾನವನ್ನು ಚೆನ್ನಾಗಿ ಓದಿಕೊಳ್ಳಬೇಕು. ಹುಸಿ ರಾಷ್ಟ್ರಭಕ್ತರಾಗ ಬಾರದು. ಉನ್ಮಾದದಿಂದ ದೂರವುಳಿದು ಶ್ರಮದ ದುಡಿಮೆಯ ಮೂಲಕ ತಾಯಿತಂದೆ, ಅಕ್ಷರ ಕಲಿಸಿದ ಗುರು ಮತ್ತು ದೇಶಕ್ಕೆ ಕೀರ್ತಿ ತರಬೇಕು ಎಂದು ತಿಳಿಸಿದರು.

ಯಶಸ್ಸು ಕನಸಿನ ಗಂಟಾಗಬಾರದು, ಸಾಧನೆಯ ಹಾದಿಯಲ್ಲಿ ಕಲ್ಲುಮುಳ್ಳು ಪಕ್ಕಕ್ಕೆ ಸರಿಸಿ ಮುನ್ನೆಡೆಯಲೇ ಬೇಕು. ಡಾ.ಬಿ.ಆರ್.ಅಂಬೇಡ್ಕರ್, ಸರ್ ಎಂ.ವಿಶ್ವೇಶ್ವರಯ್ಯ, ಡಾ.ಎ.ಪಿ.ಜ.ಎ ಅಬ್ದುಲ್ ಕಲಾಂ ಅವರೆಲ್ಲರೂ ಬಡತನದಲ್ಲಿ ಜನಿಸಿ ವಿದ್ಯೆಯೆಂಬ ಸಂಪತ್ತು ಗಳಿಸಿದ ಮಹಾನುಭಾವರು. ಡಿ.ವಿ.ಜಿ ಅವರ ಮಂಕುತಿಮ್ಮನ ಖಗ್ಗ, ಸರ್ವಜ್ಞನ ತ್ರಿಪದಿಗಳು, ದಾಸರಪದಗಳನ್ನು ಕಂಠಪಾಠ ಮಾಡಿಕೊಂಡು, ಧರ್ಮದ ಮಾರ್ಗದಲ್ಲಿ ಮುನ್ನೆಡೆಯಿರಿ ಎಂದರು.

ಹುಲಿಕಟ್ಟೆ ಗ್ರಾಮೀಣ ವಸತಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಕೆ.ವಿ.ವೆಂಕಟೇಶ್ ಮಾತನಾಡಿ, ಓದು ಎನ್ನುವುದು ಧ್ಯಾನವಾಗಬೇಕು. ಮೊಬೈಲ್, ಸಿನಿಮಾ, ಪ್ರೇಮಪ್ರೀತಿ ಎಂಬ ಹುಚ್ಚಾಟಗಳನ್ನು ಸದ್ಯಕ್ಕೆ ದೂರವುಳಿಸಿ, ಸದಾ ಪಠ್ಯದಲ್ಲಿನ ವಿಷಯಗಳ ಚಿಂತನ ಮಂಥನ ಮಾಡಬೇಕು ಎಂದು ತಿಳಿಸಿದರು.

ಕಲಾವಿಭಾಗ ತೆಗೆದುಕೊಂಡವರು ದಡ್ಡರು, ವಿಜ್ಞಾನ ಓದಿದವರು ಬುದ್ದಿವಂತರು ಎಂಬ ಭ್ರಮೆ ಬೇಡ. ಕನ್ನಡ ಮಾಧ್ಯಮದಲ್ಲಿ ಕಲ ವಿಷಯ ಅಧ್ಯಯನ ಮಾಡಿದವರು ಸಹ ಉನ್ನತ ಸ್ಥಾನಕ್ಕೆ ಹೋಗಬಹುದು ಎಂದರು.

ಪ್ರಾಂಶುಪಾಲ ಎಂ.ಸಿ.ಗೋವಿಂದರಾಜು ಮಾತನಾಡಿ, ವಿದ್ಯೆ ವಿನಯವನ್ನು ತಂದುಕೊಡುತ್ತದೆ. ಇಂದಿನ ವಿದ್ಯಾರ್ಥಿಗಳಲ್ಲಿ ತುಂಬ ಬುದ್ಧಿವಂತಿಕೆಯಿದೆ. ಸಮಯ ವ್ಯರ್ಥ ಮಾಡದೆ ಬುದ್ಧಿಯನ್ನು ಬಳಸಿಕೊಂಡು, ಬುದ್ಧಿವಂತರೊಂದಿಗೆ ಚರ್ಚಿಸಿ ವಿಷಯ ಸಂಗ್ರಹಿಸಿಕೊಳ್ಳಬೇಕು. ಪ್ರಶ್ನೆಗೆ ಸರಿಯಾದ ಉತ್ತರ ಬರೆಯಬೇಕು. ಶಿಸ್ತು ಜೀವನದ ಪಾಠವಾಗಬೇಕು ಎಂದರು.

ಉಪನ್ಯಾಸಕರಾದ ಸುರೇಶ್, ಮಹಂತೇಶ್, ಶುಭಾ, ಸಂತೋಷ್, ಶಿವಣ್ಣ, ರವಿಕುಮಾರ್, ಚಂದ್ರಿಕಾ, ಶಿಕ್ಷಕ ಗಂಗಮಾರಯ್ಯ, ಸ್ಟುಡಿಯೋ ಕುಮಾರ್ ಮಾತನಾಡಿದರು.

ವಿದ್ಯಾರ್ಥಿಗಳಾದ ಮನೋಜ್, ಕಿರಣ್, ಆಕಾಶ್, ವೆಂಕಟೇಶ್, ನಾಗೇಂದ್ರ, ಮಾನಸ, ನೇತ್ರ, ಪುಷ್ಪಾವತಿ, ವೀಣಾ, ಪುಷ್ಪ, ಮನುಕುಮಾರ, ರಾಜು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಅಧಿಕ ಅಂಕಗಳಿಸಿದ ಪುಷ್ಪ, ಮನುಕುಮಾರ, ರಾಜು ಅವರಿಗೆ ಬಹುಮಾನ ನೀಡಿ ಸನ್ಮಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT