ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಪಿತೂರಿಯಿಂದ ಪಕ್ಷಕ್ಕೆ ಮಸಿ

ಸರ್ಕಾರದ ಸಕ್ಕರೆ ಪ್ರಕರಣ: ಚಿತ್ರದುರ್ಗ ಸಂಸದ ನಾರಾಯಣಸ್ವಾಮಿ ಟೀಕೆ
Last Updated 4 ಮೇ 2020, 10:44 IST
ಅಕ್ಷರ ಗಾತ್ರ

ಆನೇಕಲ್ : ಬಿಜೆಪಿ ಕಾರ್ಯಕರ್ತರು ತಾಲ್ಲೂಕಿನಲ್ಲಿ ಲಾಕ್‌ಡೌನ್‌ ಸಂದರ್ಭದಲ್ಲಿ 70ಕೇಂದ್ರಗಳಲ್ಲಿ ದಾಸೋಹ ನಡೆಸಿ ಸಾವಿರಾರು ಮಂದಿಗೆ ಆಹಾರದ ಕಿಟ್‌ಗಳನ್ನು ವಿತರಿಸಿ ಸೇವಾ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ.

ಇದನ್ನು ಸಹಿಸದ ಕಾಂಗ್ರೆಸ್‌ ಮುಖಂಡರು ಇಲ್ಲ–ಸಲ್ಲದ ಆರೋಪ ಮಾಡಿ ಬಿಜೆಪಿ ಸಂಘಟನೆಗೆ ಮಸಿ ಬಳಿಯಲು ಯತ್ನಿಸಿದ್ದಾರೆ. ಆರೋಪಗಳು ಸತ್ಯಕ್ಕೆ ದೂರ ಎಂದು ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ತಿಳಿಸಿದರು.

ಅವರು ತಾಲ್ಲೂಕಿನ ಸರ್ಜಾಪುರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸರ್ಜಾಪುರ ಮಹಿಳಾ ಪೂರಕ ಪೌಷ್ಟಿಕ ಆಹಾರ ತಯಾರಿಕಾ ಘಟಕವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಂಗನವಾಡಿ ಕೇಂದ್ರಗಳಿಗೆ ಆಹಾರ ಸರಬರಾಜು ಮಾಡಲು ಗುತ್ತಿಗೆ ಪಡೆದಿದೆ. ಆದರೆ, ಸರ್ಕಾರದಿಂದ ಈ ಕೇಂದ್ರಕ್ಕೆ ಸಕ್ಕರೆ, ಬೇಳೆ, ಬೆಲ್ಲ ಮತ್ತಿತರ ಧಾನ್ಯಗಳು ಪೂರೈಕೆಯಾಗುವುದಿಲ್ಲ. ಲಾಕ್‌ಡೌನ್‌ ಸಂದರ್ಭದಲ್ಲಿ ಹೊರವರ್ತುಲ ರಸ್ತೆ ಪ್ರಾಧಿಕಾರದ ಅಧ್ಯಕ್ಷ ಸಿ.ಮುನಿರಾಜು ಸ್ವಂತ ಹಣದಲ್ಲಿ ಸಕ್ಕರೆ ಖರೀದಿ ಮಾಡಿ ಪ್ಯಾಕಿಂಗ್‌ ಮಾಡಲು ಘಟಕಕ್ಕೆ ನೀಡಿದ್ದಾರೆ. ಕಾಂಗ್ರೆಸ್‌ ಮುಖಂಡರು ಪರಿಸ್ಥಿತಿಯ ಸಮರ್ಪಕ ಮಾಹಿತಿ ಪಡೆಯದೆ ಅಧಿಕಾರಿಗಳ ಮೇಲೆ ದಬ್ಬಾಳಿಕೆ ನಡೆಸಿ ದೂರು ಕೊಡುವಂತೆ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷರು ಸೇರಿದಂತೆ ಮುಖಂಡರು ಸೂಕ್ಷ್ಮತೆ ಇಲ್ಲದೆ ಆರೋಪ ಮಾಡುತ್ತಿದ್ದಾರೆ. ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಈ ಬಗ್ಗೆ ಯಾವುದೇ ತನಿಖೆಗೂ ಸಿದ್ಧ. ಬಿಜೆಪಿ ಪಕ್ಷದ ಮುಖಂಡರು ಅಂಗನವಾಡಿಗಳಿಗೆ ಪೂರೈಕೆ ಮಾಡಿದ ಸಕ್ಕರೆ ಕದ್ದು ಹಂಚುವ ದುಸ್ಥಿತಿಗೆ ಬಂದಿಲ್ಲ ಎಂದರು.

ವಿಧಾನ ಪರಿಷತ್‌ ಸದಸ್ಯ ಅಶ್ವಥ್‌ನಾರಾಯಣ ಮಾತನಾಡಿ ಪ್ರಧಾನಮಂತ್ರಿ, ಮುಖ್ಯಮಂತ್ರಿ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಡಿ.ಕೆ.ಶಿವಕುಮಾರ್‌ ಅವರಿಗಿಲ್ಲ. ಡಿ.ಕೆ ಸಹೋದರರ ಬಗ್ಗೆ ಐಟಿ, ಇಡಿ ದಾಳಿ, ಮೈಸೂರು ಮಿನರಲರ್ಸ್‌ ಸಂಬಂಧದ ಪ್ರಕರಣ ಹೈಕೋರ್ಟ್‌ ಮುಂದಿದೆ. ಅಕ್ರಮ, ದೌರ್ಜನ್ಯ ಇವರ ಪ್ರವೃತ್ತಿಯೇ ವಿನಃ ಬಿಜೆಪಿ ಕಾರ್ಯಕರ್ತರದಲ್ಲ ಎಂದು ಆರೋಪಿಸಿದರು.

ವಿ.ಎಸ್‌.ಉಗ್ರಪ್ಪ ಟಿಎ, ಡಿಎಗಾಗಿ ಓಡಾಡುವ ಗಿರಾಕಿ. ಅವರ ಮಾತುಗಳಿಗೆ ಮಹತ್ವ ನೀಡಬೇಕಾದ ಅಗತ್ಯವಿಲ್ಲ. ಬಿಜೆಪಿ ಸಾಮಾಜಿಕ ಚಟುವಟಿಕೆಗಳ ಬಗ್ಗೆ ಜನರನ್ನು ತಪ್ಪುದಾರಿಗೆ ಎಳೆಯುವ ನಿಟ್ಟಿನಲ್ಲಿ ಕಾಂಗ್ರೆಸ್‌ ಮುಖಂಡರು ಆರೋಪ ಮಾಡುತ್ತಿರುವುದು ಖಂಡನೀಯ. ಇವರು ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದರು.

ಹೊರವರ್ತುಲ ರಸ್ತೆ ಪ್ರಾಧಿಕಾರದ ಅಧ್ಯಕ್ಷ ಸಿ.ಮುನಿರಾಜು, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮರಿಸ್ವಾಮಿ, ಉಪಾಧ್ಯಕ್ಷೆ ಪಾರ್ವತಮ್ಮ ಚಂದ್ರಪ್ಪ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನರಸಿಂಹಮೂರ್ತಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ನಾಗೇಶ್‌ರೆಡ್ಡಿ, ಹುಲ್ಲಹಳ್ಳಿ ಶ್ರೀನಿವಾಸ್‌, ಮಂಡಲ ಅಧ್ಯಕ್ಷರಾದ ಜಯಪ್ರಕಾಶ್‌, ಎಸ್‌.ಆರ್‌.ಟಿ.ಅಶೋಕ್‌, ಆನೇಕಲ್‌ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಜಯಣ್ಣ, ಬಮೂಲ್ ನಿರ್ದೇಶಕ ಬಿ.ಜಿ.ಆಂಜಿನಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT