ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಟಿ. ರವಿ ಹೇಳಿಕೆಗೆ ಕಾಂಗ್ರೆಸ್‌ ಟೀಕೆ

ಕೀಳುಮಟ್ಟದ ಆರೋಪ ಸರಿಯಲ್ಲ: ಕೈ ಪಾಳಯ ಆಕ್ಷೇಪ
Last Updated 19 ಆಗಸ್ಟ್ 2021, 3:42 IST
ಅಕ್ಷರ ಗಾತ್ರ

ಆನೇಕಲ್:ಭಾರತದ ಭವಿಷ್ಯ ರೂಪಿಸುವಲ್ಲಿ ಜವಹಾರ್‌ ಲಾಲ್‌ ನೆಹರೂ, ಇಂದಿರಾಗಾಂಧಿ, ರಾಜೀವ್‌ಗಾಂಧಿ ಅವರ ಕೊಡುಗೆ ಅಪಾರವಾದುದು. ಅವರ ಸಾಧನೆ ಮತ್ತು ಕಾರ್ಯದ ಬಗ್ಗೆ ಅರಿತು ಮಾತನಾಡಬೇಕು. ಬಿಜೆಪಿ ಮುಖಂಡರು ಮನಬಂದಂತೆ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಕಾಂಗ್ರೆಸ್‌ ವಕ್ತಾರ ಬನಹಳ್ಳಿ ರಾಮಚಂದ್ರರೆಡ್ಡಿ ತಿಳಿಸಿದರು.

ತಾಲ್ಲೂಕಿನ ಚಂದಾಪುರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ವಿಜ್ಞಾನ, ಕೃಷಿ, ತಂತ್ರಜ್ಞಾನ, ಶಿಕ್ಷಣ ಮತ್ತು ಜನರ ಜೀವನಮಟ್ಟ ಹೆಚ್ಚಿಸುವಲ್ಲಿ ನೆಹರೂ, ಇಂದಿರಾಗಾಂಧಿ ಮತ್ತು ರಾಜೀವ್‌ಗಾಂಧಿ, ಮನಮೋಹನ ಸಿಂಗ್‌ ಅವರ ಆಡಳಿತಾವಧಿಯಲ್ಲಿ ಕೈಗೊಂಡ ಯೋಜನೆಗಳು ಭಾರತವನ್ನು ಇಂದು ವಿಶ್ವ ಮಟ್ಟದಲ್ಲಿ ಗುರುತಿಸುವಂತಾಗಿದೆ ಎಂದರು.

ಆದರೆ, ಅವರ ಅವಧಿಯಲ್ಲಿ ಕೈಗೊಂಡ ಯಾವುದೇ ಪ್ರಗತಿಪರ ಕಾರ್ಯಕ್ರಮಗಳ ಬಗ್ಗೆ ಮಾತನಾಡದೆ ಮುಖಂಡರ ಬಗ್ಗೆ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ .ರವಿ ಕೀಳಾಗಿ ಮಾತನಾಡಿದ್ದಾರೆ. ರಾಷ್ಟ್ರೀಯ ಪಕ್ಷವೊಂದರ ಪ್ರಧಾನ ಕಾರ್ಯದರ್ಶಿಗೆ ಇದು ತಕ್ಕದಾದ ನಡವಳಿಕೆಯಲ್ಲ. ಸಂಸ್ಕೃತಿ ಬಗ್ಗೆ ಮಾತನಾಡುವ ಅವರ ಮಾತುಗಳು ಅತ್ಯಂತ ಕೆಳಮಟ್ಟದ್ದಾಗಿದೆ. ಕಾಂಗ್ರೆಸ್‌ ಪಕ್ಷ ಅವರ ವರ್ತನೆಯನ್ನು ಖಂಡಿಸುತ್ತದೆ. ಅವರು ಮಾತುಗಳನ್ನು ಸರಿಪಡಿಸಿಕೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಹೇಳಿದರು.

ಬ್ರಿಟಿಷರ ಆಡಳಿತದಿಂದ ಬಿಡುಗಡೆಯಾಗಿ ಭಾರತ ಸ್ವಾತಂತ್ರ್ಯ ಪಡೆದಾಗ ಭಾರತದಲ್ಲಿ ಯಾವುದೇ ಸೌಲಭ್ಯಗಳಿರಲಿಲ್ಲ. ಬ್ರಿಟಿಷರು ದೇಶವನ್ನು ಕೊಳ್ಳೆ ಹೊಡೆದಿದ್ದರು. ದೇಶದ 54 ಗ್ರಾಮಗಳಲ್ಲಿ ಮಾತ್ರ ವಿದ್ಯುತ್‌ ಇತ್ತು. ನಾಲ್ಕು ಅಣೆಕಟ್ಟುಗಳಿದ್ದವು. ಸ್ವಾತಂತ್ರ್ಯ ನಂತರ ಬೃಹತ್‌ ನೀರಾವರಿ ಯೋಜನೆಗಳು, ಬಹುತೇಕ ಎಲ್ಲಾ ಗ್ರಾಮಗಳ ವಿದ್ಯುದ್ದೀಕರಣ, ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ, ಕೈಗಾರಿಕಾ ಕ್ರಾಂತಿಗಳಿಂದಾಗಿ ದೇಶದ ಜನರ ಬದುಕು ಬದಲಾವಣೆಯಾಯಿತು. ಆಹಾರ ಆಮದು ಮಾಡಿಕೊಳ್ಳುವ ಪರಿಸ್ಥಿತಿ ಬದಲಾಗಿ ಆಹಾರ ಕ್ಷೇತ್ರದಲ್ಲಿ ಸ್ವಾವಲಂಭನೆ ಸಾಧಿಸಲಾಯಿತು. ಆದರೆ, ಬಿಜೆಪಿಯವರು ಯಾವುದೇ ಕೆಲಸ ಮಾಡಿಲ್ಲ ಎಂಬಂತೆ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ಸಿಲಿಂಡರ್, ಅಗತ್ಯ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ. ಜನರ ಬದುಕು ತೀವ್ರ ಸಂಕಷ್ಟದಲ್ಲಿವೆ. ನಿರುದ್ಯೋಗ ಹೆಚ್ಚಾಗಿದೆ. ಸಾರ್ವಜನಿಕ ಉದ್ಯಮಗಳು ಖಾಸಗೀಕರಣವಾಗಿ ಉದ್ಯೋಗ ಕಡಿತವಾಗುತ್ತಿವೆ. ಇದೇ ಬಿಜೆಪಿಯ ಸಾಧನೆಗೆ ಎಂದರು.

ಬಡವರ, ಕಾರ್ಮಿಕರ ಆಶಾ ಕಿರಣವಾಗಿರುವ ಇಂದಿರಾ ಕ್ಯಾಂಟೀನ್‌ ಹೆಸರು ಬದಲಾಯಿಸಲು ಬಿಜೆಪಿ ಪ್ರಯತ್ನ ನಡೆಸುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.

ಜಿಲ್ಲಾ ಕಾಂಗ್ರೆಸ್ ವಕ್ತಾರ ನಾಗರಾಜು ಮಾತನಾಡಿ, ಬಿಜೆಪಿಯವರಿಗೆ ಕಾಂಗ್ರೆಸ್‌ ಮುಖಂಡರ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ. ಬ್ಯಾಂಕ್‌ಗಳ ರಾಷ್ಟ್ರೀಕರಣ, ಗರೀಬಿ ಹಠಾವೋ, 20 ಅಂಶಗಳ ಕಾರ್ಯಕ್ರಮ, ಐಟಿ ಬಿಟಿ ಸೇರಿದಂತೆ ದೇಶದ ಭವಿಷ್ಯವನ್ನು ರೂಪಿಸುವ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡ ಹೆಮ್ಮೆ ಕಾಂಗ್ರೆಸ್‌ ಪಕ್ಷದ್ದಾಗಿದೆ ಎಂದು ಹೇಳಿದರು.

ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಆರ್‌.ಕೆ. ರಮೇಶ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೃಷ್ಣಪ್ಪ, ವಕ್ತಾರ ಇರ್ಷಾದ್ ಅಹಮದ್‌ ಶೇಖ್‌, ಮುಖಂಡರಾದ ಗೋಪಾಲರೆಡ್ಡಿ, ಮುನಿರೆಡ್ಡಿ, ಮಂಜುಳಾ, ಕಲಾವತಿ, ಶಿವರಾಮರೆಡ್ಡಿ, ಪ್ರವೀಣ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT