ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಮುಳುಗುತ್ತಿರುವ ಹಡಗು: ಲೇವಡಿ

ಕಾಂಗ್ರೆಸ್ ತೊರೆದು ಬಿಜೆಪಿಗೆ ಮುಖಂಡರ ಸೇರ್ಪಡೆ
Last Updated 25 ಜೂನ್ 2021, 2:07 IST
ಅಕ್ಷರ ಗಾತ್ರ

ವಿಜಯಪುರ: ಕಾಂಗ್ರೆಸ್ ಮುಳುಗುತ್ತಿರುವ ಹಡುಗು. ಅದರಿಂದ ಪಾರಾಗಲು ಪ್ರಯತ್ನ ಮಾಡಿದರೆ ಉತ್ತಮ. ಇಲ್ಲವಾದರೆ ಪಕ್ಷದೊಂದಿಗೆ ಅದರಲ್ಲಿರುವವರು ಮುಳುಗಿ ಹೋಗುತ್ತಾರೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ವಿ. ನಾರಾಯಣಸ್ವಾಮಿ ಹೇಳಿದರು.

ಪಟ್ಟಣದ ವಿಜಯಾ ಕಾಲೇಜಿನಲ್ಲಿ ಮಾಜಿ ಪುರಸಭೆ ಸದಸ್ಯ ಆರ್.ಸಿ. ಮಂಜುನಾಥ್ ಹಾಗೂ ಉದ್ಯಮಿ ಸುರೇಶ್ ಬಾಬು, ಚಿಕ್ಕರುದ್ರಪ್ಪ ಅವರನ್ನು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡು ಮಾತನಾಡಿದರು.

ದೇಶಕ್ಕೆ ಬೇಕಾಗಿರುವ ಸಮರ್ಥವಾದ ನಾಯಕತ್ವ ಸಿಕ್ಕಿದೆ. ಆದ್ದರಿಂದ ನಾವೆಲ್ಲರೂ ಬದಲಾವಣೆಯತ್ತ ಸಾಗಬೇಕು. ಬಿಜೆಪಿಯಲ್ಲಿ ಹಳಬರು, ಹೊಸಬರು ಎನ್ನುವ ತಾರತಮ್ಯವಿಲ್ಲ. ದೇಶ ಹಾಳು ಮಾಡುವುದರಲ್ಲಿ ಕಾಂಗ್ರೆಸ್ ಮೊದಲನೇ ಸ್ಥಾನದಲ್ಲಿದೆ. ಈಗ ಎಡಪಕ್ಷಗಳು ಕಾಂಗ್ರೆಸ್ ಅನ್ನು ದೂರವಿಟ್ಟು ಒಂದಾಗಿದ್ದಾರೆ. ಭವಿಷ್ಯದಲ್ಲಿ ಕಾಂಗ್ರೆಸ್‌ಗೆ ಉಳಿಗಾಲವಿಲ್ಲ. ಪಕ್ಷದಲ್ಲಿ ಉಸಿರುಗಟ್ಟಿದ ವಾತಾವರಣವಿದೆ. ಬಿಜೆಪಿಯಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ. ಆದ್ದರಿಂದ ಪ್ರತಿಯೊಬ್ಬ ಕಾರ್ಯಕರ್ತರೂ ಸಂಘಟನೆಗಾಗಿ ಶ್ರಮಿಸಬೇಕು
ಎಂದರು.

ಎಸ್.ಸಿ. ಮೋರ್ಚಾ ರಾಜ್ಯ ಘಟಕದ ಖಜಾಂಚಿ ಕೆ. ನಾಗೇಶ್ ಮಾತನಾಡಿ, ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಸಮರ್ಥವಾಗಿ ಅಧಿಕಾರ ನಡೆಸುತ್ತಿರುವುದರಿಂದ ಬಿಜೆಪಿ ಸೇರ್ಪಡೆಗೊಳ್ಳುವ ಮುಖಂಡರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಪಕ್ಷದ ತತ್ವ, ಸಿದ್ಧಾಂತದ ಮೇಲೆ ವಿಶ್ವಾಸವಿಟ್ಟು ಸೇರ್ಪಡೆಯಾಗುವ ಪ್ರತಿಯೊಬ್ಬರನ್ನು ಬರಮಾಡಿಕೊಂಡು ಸಂಘಟನೆಗಾಗಿ ಅವರನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಪರಸ್ಪರ ಸಂಘಟಿತರಾಗಿ ಪಕ್ಷ ಸಂಘಟನೆಗಾಗಿ ಕೆಲಸ ಮಾಡಬೇಕು ಎಂದರು.

ಮುಖಂಡ ಬೂದಿಗೆರೆ ನಾರಾಯಣಸ್ವಾಮಿ ಮಾತನಾಡಿ, ಇತರ ಪಕ್ಷಗಳಂತೆ ಬೆಳವಣಿಗೆಗಾಗಿ ಹುಟ್ಟಿಕೊಂಡ ಪಕ್ಷ ಬಿಜೆಪಿಯಲ್ಲ. ಬಿಜೆಪಿ ವಿಭಿನ್ನವಾಗಿದೆ. ರಾಷ್ಟ್ರೀಯತೆ ಉಳಿವಿಗಾಗಿ ಶ್ರಮಿಸುತ್ತಿದೆ. ರಾಷ್ಟ್ರದ ಪುನರ್ ನಿರ್ಮಾಣವಾಗಬೇಕು. ವಿಶ್ವ ಗುರುವಾಗುವತ್ತ ಗುರಿಯನ್ನಿಟ್ಟುಕೊಂಡು ಸಾಗುತ್ತಿದೆ. ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಪಕ್ಷ ಹಿಂದುಳಿದಿಲ್ಲ. ರಾಜಕೀಯವಾಗಿ ಈ ಭಾಗದಲ್ಲಿ ಹಿಂದುಳಿದಿದ್ದೇವೆ. ಸ್ಥಳೀಯವಾಗಿ ಪ್ರಬಲವಾದ ನಾಯಕತ್ವದ ಕೊರತೆ ಇದ್ದು ಅದನ್ನು ವೃದ್ಧಿಸುವ ಕಾರ್ಯವಾಗಬೇಕಾಗಿದೆ ಎಂದರು.

ಪುರಸಭಾ ಮಾಜಿ ಸದಸ್ಯ ಆರ್.ಸಿ. ಮಂಜುನಾಥ್ ಮಾತನಾಡಿ, ‘ನಾನು ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ಪುರಸಭೆ ಸದಸ್ಯನಾಗಿದ್ದರೂ ರಾಷ್ಟ್ರೀಯ ವಿಚಾರ ಬಂದಾಗ ಪಕ್ಷಭೇದ ಮರೆತು ಕಾಂಗ್ರೆಸ್ ಖಂಡಿಸಿದ್ದೇನೆ. ಅಂಕಿ–ಅಂಶ ಸಮೇತ ನೀಡಿ ಖಂಡಿಸಿದ್ದೇನೆ. ಕಾಂಗ್ರೆಸ್ ಕೆಲ ಬೆಳವಣಿಗೆಗಳಿಂದಾಗಿ ಬೇಸತ್ತು ಈಗ ಬಿಜೆಪಿ ಸೇರ್ಪಡೆಗೊಳ್ಳುತ್ತಿದ್ದೇನೆ’ ಎಂದರು.

‘ಕಾಂಗ್ರೆಸ್ ಮತ್ತು ಜೆಡಿಎಸ್‌ನದ್ದು ಒಂದೇ ರೀತಿಯ ಮನಸ್ಥಿತಿ. ತಾಲ್ಲೂಕಿನಲ್ಲಿ ಶಾಸಕರಾಗಿ ಆಯ್ಕೆಯಾಗಿರುವ ನಿಸರ್ಗ ನಾರಾಯಣಸ್ವಾಮಿ ಲಾಕ್‌ಡೌನ್ ಸಮಯದಲ್ಲಿ ಹೊರಗೆ ಬರಲೇ ಇಲ್ಲ. ಅನ್‌ಲಾಕ್ ಆದನಂತರ ಹೊರಗೆ ಬಂದು ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ನಾಯಕರಿಂದ ಬಡವರ ಏಳಿಗೆ ಸಾಧ್ಯವಿಲ್ಲ’ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಎ.ವಿ. ನಾರಾಯಣಸ್ವಾಮಿ ಟೀಕಿಸಿದರು.

ಮುಖಂಡ ಜಿ. ಚಂದ್ರಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಲೇರಿ ಮಂಜುನಾಥ್, ರಾಜ್ಯ ಪರಿಷತ್ ಸದಸ್ಯ ದೇ.ಸೂ. ನಾಗರಾಜ್, ಪುರಸಭೆ ಸದಸ್ಯೆ ಶಿಲ್ಪಾ ಅಜಿತ್, ಮಂಡಲದ ಅಧ್ಯಕ್ಷ ಸುನೀಲ್ ಸುಂದರೇಶ್, ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ರವಿಕುಮಾರ್, ನಗರ ಘಟಕದ ಅಧ್ಯಕ್ಷ ಚ. ವಿಜಯಬಾಬು, ಕನಕರಾಜು, ಎಸ್. ರವಿಕುಮಾರ್, ಪ್ರಭು, ರಾಮು ಭಗವಾನ್, ರಾಮಕೃಷ್ಣ ಹೆಗಡೆ, ಸಾಗರ್, ಚಂದನ್, ಸಂತೋಷ್, ನಿರಂಜನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT