ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿಯುತ ಬದುಕಿಗೆ ಸಂವಿಧಾನದ ದಾರಿ

ದೊಡ್ಡಬಳ್ಳಾಪುರ ಭಗತ್‍ ಸಿಂಗ್ ಕ್ರೀಡಾಂಗಣದಲ್ಲಿ ಕಾರ್ಯಕ್ರಮ
Last Updated 26 ಜನವರಿ 2019, 12:40 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಅಸಮಾನತೆ, ಶೋಷಣೆಗಳನ್ನು ನಿರ್ಮೂಲನೆ ಮಾಡುವ ದಿಸೆಯಲ್ಲಿ ದೇಶದ ಸಂವಿಧಾನ ರೂಪುಗೊಂಡಿದೆ. ಆದರೆ ಇಂದು ಸಂವಿಧಾನದ ಈ ಆಶಯಗಳು ಜಾರಿಯಾಗಿ ಎಲ್ಲರಿಗೂ ತಲುಪಿವೆಯೇ ಎನ್ನುವ ಬಗ್ಗೆ ಚಿಂತನೆ ಅಗತ್ಯ ಎಂದು ಉಪವಿಭಾಗಾಧಿಕಾರಿ ಸಿ.ಮಂಜುನಾಥ್ ಹೇಳಿದರು.

ನಗರದ ಭಗತ್‍ ಸಿಂಗ್ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ 70ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

‘ದೇಶದ ಪ್ರಗತಿ ಹಾಗೂ ಶಾಂತಿಯುತ ಬದುಕಿಗೆ ನಮ್ಮ ಸಂವಿಧಾನದ ಮಹತ್ವದ ದಾರಿ ಮಾಡಿಕೊಟ್ಟಿದೆ. ಜಗತ್ತಿನಲ್ಲಿಯೇ ವಿಶಿಷ್ಟ ಸಂವಿಧಾನ ಎನಿಸಿಕೊಂಡಿದೆ. ಹಲವು ವೈವಿಧ್ಯತೆಗಳ ಹಾಗೂ ಸವಾಲುಗಳ ನಡುವೆಯೂ ಭಾರತ ಪ್ರಗತಿಯಾಗುತ್ತಿರುವುದಕ್ಕೆ ಹೆಮ್ಮೆ ಪಡಬೇಕಾಗಿದೆ. ಎಲ್ಲ ವರ್ಗದ ಜನರನ್ನು ಮುಖ್ಯವಾಹಿನಿಗೆ ತರಲು ಸಂವಿಧಾನ ಮುಖ್ಯವಾಗಿದೆ. ಆದರೆ ಇಂದು ಅನಕ್ಷರತೆ, ನಿರುದ್ಯೋಗ, ಮೇಲುಕೀಳು ಭಾವನೆ, ಗಡಿ ಸಮಸ್ಯೆ, ಅಪೌಷ್ಟಿಕತೆ ಮೊದಲಾದ ಹಲವಾರು ಸಮಸ್ಯೆಗಳ ಸವಾಲುಗಳು ಎದುರಾಗಿದ್ದು, ಇದನ್ನು ಸಮರ್ಪಕವಾಗಿ ಎದುರಿಸಲು ಸಜ್ಜಾಗಬೇಕಿದೆ’ ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನರ ನೀರಿನ ಬವಣೆ ನೀಗಿಸಲು ಎತ್ತಿನಹೊಳೆ ಯೋಜನೆ ಪ್ರಗತಿಯಲ್ಲಿದೆ. ಕೆರೆಗಳಿಗೆ ಶುದ್ಧೀಕರಿಸಿದ ನೀರು ತುಂಬಿಸುವ ಎಚ್‍ಎನ್ ವ್ಯಾಲಿ ಯೋಜನೆ ಕಾರ್ಯಗತವಾಗುತ್ತಿದೆ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ವಿ.ಶ್ರೀವತ್ಸ ಮಾತನಾಡಿ, ದೇಶದಲ್ಲಿನ ಯುವ ಸಮುದಾಯದ ಮೇಲೆ ಜವಾಬ್ದಾರಿ ಹೆಚ್ಚಿದ್ದು ಯುವಶಕ್ತಿ ದೇಶವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯಬೇಕಾದ ಚಿಂತನೆಗಳನ್ನು ಬೆಳಸಿಕೊಳ್ಳಬೇಕು ಎಂದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಂಜುನಾಥರೆಡ್ಡಿ ಮತ್ತು ತಂಡ (ಪರಿಸರ), ಪಿ.ವಿ.ವರ್ಷಿಣಿ (ಯೋಗ), ಮಹೇಶ್ ಕುಮಾರ್, ಜೆ.ಪಾವನಿ (ಕ್ರೀಡೆ), ಬಿ.ಜಿ.ಅಮರನಾಥ್ (ದೈಹಿಕ ಶಿಕ್ಷಣ ಅಧಿಕಾರಿ),ವೀರಭದ್ರಯ್ಯ(ರಕ್ಷಣೆ) ಶಿವಗಂಗಮ್ಮ, ಕೃಷ್ಣಮೂರ್ತಿ (ಕೃಷಿ), ಸಂಜೀವಾನಂದ ಆರ್ಯ, ಎಲ್.ಎನ್.ವಸುಂಧರದೇವಿ (ಸಾಮಾಜಿಕ), ಎ.ನಾಗರಾಜು (ಮಾಧ್ಯಮ), ಬಿ.ಕೆ.ಅಶ್ವಿನಿ (ದೈಹಿಕ ಶಿಕ್ಷಣ) ಅವರನ್ನು ಅಭಿನಂದಿಸಲಾಯಿತು.

ನಗರಸಭೆ ಅಧ್ಯಕ್ಷ ಟಿ.ಎನ್.ಪ್ರಭುದೇವ, ಉಪಾಧ್ಯಕ್ಷೆ ಜಯಲಕ್ಷ್ಮಿನಟರಾಜ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಮೀನಾಕ್ಷಿ ಕೆಂಪಣ್ಣ, ತಹಶೀಲ್ದಾರ್ ಬಿ.ಎ.ಮೋಹನ್, ನಗರ ಸಭೆ ಪೌರಾಯುಕ್ತ ಆರ್.ಮಂಜುನಾಥ್, ತಾಲ್ಲೂಕು ಪಂಚಾಯಿತಿ ಇ.ಒ ದ್ಯಾಮಪ್ಪ, ಪ್ರಭಾರ ಕ್ಷೇತ್ರ ಶಿಕ್ಷಣಾಕಾರಿ ದಾಕ್ಷಾಯಿಣಿ, ನಗರಸಭೆ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರು ಇದ್ದರು.

ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ಜಿ.ಅಮರನಾಥ್ ನೇತೃತ್ವದಲ್ಲಿ ಶಾಲಾ ಮಕ್ಕಳು, ಸೇವಾದಳ, ಪೊಲೀಸ್ ದಳಗಳೊಂದಿಗೆ ಆಕರ್ಷಕ ಕವಾಯಿತು ಹಾಗೂ ಪಥ ಸಂಚಲನ ನಡೆಯಿತು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT