ಗುರುವಾರ , ಅಕ್ಟೋಬರ್ 22, 2020
27 °C

ದೊಡ್ಡಬಳ್ಳಾಪುರ: ಲೆಕ್ಕಕ್ಕಿಲ್ಲ ಮಾರ್ಗಸೂಚಿ, ಹೆಚ್ಚುತ್ತಿದೆ ಕೊರೊನಾ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ಕೋವಿಡ್-19 ಸೋಂಕಿತರು 3 ಸಾವಿರ ಗಡಿ ದಾಟಿದ್ದು, ಜನಸಂಖ್ಯೆಯ ಶೇ1 ಭಾಗ ಸೋಂಕಿತರಾಗಿದ್ದಾರೆ. ಆದರೆ ಲಾಕ್‍ಡೌನ್ ತೆರವಾದ ಹೊಸತರಲ್ಲಿ ಇದ್ದ ಕೋವಿಡ್ ಮಾರ್ಗಸೂಚಿಗಳು ಈಗ ಎಲ್ಲೂ ಪಾಲನೆಯಾಗುತ್ತಿಲ್ಲ.

ನಗರದ ಬಹಳಷ್ಟು ಸರ್ಕಾರಿ ಕಚೇರಿಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡುವುದು ನಿಂತು ಹೋಗಿದೆ. ನಗರಸಭೆಯಿಂದ ಮೊದಲುಗೊಂಡು ಯಾವ ಕಚೇರಿಯಲ್ಲೂ ಸ್ಯಾನಿಟೈಸರ್ ಕಡ್ಡಾಯವಾಗಿ ಹಾಕುತ್ತಿಲ್ಲ. ಮಾರುಕಟ್ಟೆ ಪ್ರದೇಶದಲ್ಲಿಯೂ ಸಹ ಜನಸಂದಣಿ ಹೆಚ್ಚಾಗಿ, ಅಂತರ ಕಾಪಾಡಿಕೊಳ್ಳದೇ ವ್ಯವಹರಿಸುವುದು ಸಾಮಾನ್ಯವಾಗಿದೆ.

ಕುತ್ತಿಗೆಯಲ್ಲಿ ಮಾಸ್ಕ್‌: ಮಾರುಕಟ್ಟೆ ಪ್ರದೇಶದಲ್ಲಿ ಹಲವು ಮಂದಿ ವ್ಯಾಪಾರಿಗಳು ಮಾಸ್ಕ್ ಧರಿಸಿದ್ದರೂ ಸಹ ಮೂಗು ಬಾಯಿ ಮುಚ್ಚಿಕೊಳ್ಳದೇ ಕುತ್ತಿಗೆಯಲ್ಲಿ ಮಾಸ್ಕ್ ನೇತಾಡುತ್ತಿರುತ್ತದೆ. ಮೊದಲು ತರಕಾರಿಗಳ ಹರಾಜು ಕೂಗಲು ಹಾಗೂ ಗ್ರಾಹಕರೊಡನೆ ವ್ಯವಹರಿಸಲು ಮಾಸ್ಕ್ ಕುತ್ತಿಗೆಯಲ್ಲಿ ನೇತಾಡುತ್ತಿರುತ್ತದೆ.

ಬಸ್‍ಗಳಲ್ಲಿ ಪಾಲನೆಯಾಗದ ನಿಯಮಗಳು: ಕೋವಿಡ್-19 ಅನ್‍ಲಾಕ್ ಆಗಿ ಸಾರಿಗೆ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಾಗ ಮಾಸ್ಕ್‌‌ನ್ನು ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಬಸ್ ಹತ್ತುವಾಗ ಕೈಗೆ ಸ್ಯಾನಿಟೈಸರ್ ಹಾಕಿ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿತ್ತು. ಬಸ್‍ನಲ್ಲಿ 30 ಪ್ರಯಾಣಿಕರು ಮಾತ್ರ ಪ್ರಯಾಣಿಸಲು ಅವಕಾಶವಿತ್ತು. ಆದರೆ ಈಗ ಮಾಸ್ಕ್ ಕಡ್ಡಾಯಗೊಳಿಸಿರುವುದನ್ನು ಬಿಟ್ಟರೆ ಯಾವ ನಿಯಮಗಳು ಪಾಲನೆಯಾಗುತ್ತಿಲ್ಲ. ಬಸ್‍ಗಳ ಸಂಖ್ಯೆ ಕಡಿಮೆಯಾಗಿ, ಪ್ರಯಾಣಿಕರು ಹೆಚ್ಚಾದಾಗ, ಬಸ್ ನಿಲ್ದಾಣಕ್ಕೆ ಬರುತ್ತಿದ್ದಂತೆ ವ್ಯಕ್ತಿಗತ ಅಂತರ ಕಾಪಾಡಿಕೊಳ್ಳದೇ ನೂಕುನುಗ್ಗಲಿನಲ್ಲಿ ಬಸ್ ಹತ್ತುವ ದೃಶ್ಯ ಸಾಮಾನ್ಯವಾಗಿದೆ.

ಮಾಸ್ಕ್ ಧರಿಸದವರಿಗೆ ದಂಡ: ತಾಲ್ಲೂಕಿನಲ್ಲಿ ಕೋವಿಡ್-19 ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್‌ ಧರಿಸದೆ ನಗರದಲ್ಲಿ ಓಡಾಡುವವರಿಗೆ ಪೌರಾಯುಕ್ತ ರಮೇಶ್ ಎಸ್.ಸುಣಗಾರ್ ಹಾಗೂ ಡಿವೈಎಸ್‍ಪಿ ಟಿ.ರಂಗಪ್ಪ ನೇತೃತ್ವದಲ್ಲಿ ಅಧಿಕಾರಿಗಳು ದಂಡ ವಿಧಿಸುತ್ತಿದ್ದಾರೆ.

₹250 ವಿಧಿಸುತ್ತಿದ್ದ ದಂಡ ರಾಜ್ಯ ಸರ್ಕಾರದ ಆದೇಶದಂತೆ ಗುರುವಾರದಿಂದ ₹100 ವಿಧಿಸಲಾಗುತ್ತಿದೆ. ಬೆಳಿಗ್ಗೆ ನಗರದ ಬಸ್ ನಿಲ್ದಾಣ, ಡಿ.ಕ್ರಾಸ್ ವೃತ್ತ, ಬಸವ ಭವನ ವೃತ್ತ ಮೊದಲಾದ ಪ್ರಮುಖ ರಸ್ತೆಗಳಲ್ಲಿ ಮಾಸ್ಕ್ ಇಲ್ಲದೇ ಓಡಾಡುವ ನಾಗರಿಕರಿಗೆ ದಂಡ ವಿಧಿಸಲಾಗುತ್ತಿದೆ. ಸಾರ್ವಜನಿಕರ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಎಚ್ಚರಿಕೆ ನೀಡಲಾಗುತ್ತಿದೆ. ನಗರಸಭೆ ವತಿಯಿಂದ ಏಪ್ರಿಲ್‍ನಿಂದ ಆಗಸ್ಟ್ ಅಂತ್ಯದವರೆಗೆ ₹53,850, ಸೆಪ್ಟೆಂಬರ್‌ನಲ್ಲಿ ₹25,800 ಹಾಗೂ ಅಕ್ಟೋಬರ್ 8ರವರೆಗೆ ₹20 ಸಾವಿರ ಸೇರಿ ₹1ಲಕ್ಷದವರೆಗೆ ದಂಡ ವಸೂಲಿ ಮಾಡಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು