ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: 5ಕ್ಕೆ ಹೆದ್ದಾರಿ ತಡೆಗೆ ತೀರ್ಮಾನ

ಜಿಲ್ಲಾ ಕೇಂದ್ರ ಘೋಷಣೆಗೆ ಆಗ್ರಹ
Last Updated 2 ಸೆಪ್ಟೆಂಬರ್ 2022, 4:48 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಜಿಲ್ಲಾ ಕೇಂದ್ರವಾಗಿ ದೊಡ್ಡಬಳ್ಳಾಪುರವನ್ನೇ ಘೋಷಿಸುವಂತೆ ಒತ್ತಾಯಿಸಿ ವಿವಿಧ ಹಂತದಲ್ಲಿ ಹೋರಾಟ ನಡೆಸುತ್ತಿರುವ ಜಿಲ್ಲಾ ಕೇಂದ್ರ ಹೋರಾಟ ಸಮಿತಿ‌ಯು ಸೆ. 5ರಂದು ಹಿಂದೂಪುರ-ಬೆಂಗಳೂರು ರಾಜ್ಯ ಹೆದ್ದಾರಿ ತಡೆ ನಡೆಸಲು ತಿರ್ಮಾನಿಸಿದೆ.

ನಗರದ ಕನ್ನಡ ಜಾಗೃತ ಭವನದಲ್ಲಿ ಗುರುವಾರ ನಡೆದ ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರ ಹೋರಾಟ‌ ಸಮಿತಿ ಪೂರ್ವಭಾವಿ ಸಭೆಯಲ್ಲಿ ಎಲ್ಲಾ ಸಂಘಟನೆಗಳ ಪ್ರತಿನಿಧಿಗಳ ಜೊತೆ ಚರ್ಚಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಹೋರಾಟ‌ ಸಮಿತಿ ಸಂಚಾಲಕ ರಾಜಘಟ್ಟ ರವಿ ಮಾತನಾಡಿ, ಸೆ. 5ರಂದು ಬೆಳಿಗ್ಗೆ 11ಕ್ಕೆ ನಗರದ ಹಿಂದೂಪುರ-ಬೆಂಗಳೂರು ರಾಜ್ಯ ಹೆದ್ದಾರಿಯ ಡಿ. ಕ್ರಾಸ್‌ ಸಮೀಪದ ಡಾ.ರಾಜ್‌ಕುಮಾರ್‌ ವೃತ್ತದಲ್ಲಿ ರಸ್ತೆ ತಡೆ ನಡೆಸಲಾಗುವುದು. ಸೆ. 8ರಂದು ನಗರದಲ್ಲಿ ನಡೆಯುವ ಜನೋತ್ಸವ ಕಾರ್ಯಕ್ರಮದ ಒಳಗೆ ಸರ್ಕಾರದ ಗಮನ ಸೆಳೆಯಲು ಹೋರಾಟವನ್ನು ತೀವ್ರಗೊಳಿಸಬೇಕು. ಜಿಲ್ಲಾ ಕೇಂದ್ರಕ್ಕೆ ಇರಬೇಕಾದ ಅರ್ಹತೆಗಳು, ಕಾನೂನಾತ್ಮಕ ಹೋರಾಟದ ಸಾಧ್ಯತೆ ಕುರಿತು ಪ್ರತಿಯೊಬ್ಬರು ಮುಕ್ತವಾಗಿ ಅಭಿಪ್ರಾಯ ತಿಳಿಸಬೇಕು ಎಂದು ತಿಳಿಸಿದರು.

ಕನ್ನಡಪರ ಹೋರಾಟಗಾರ ಜಿ. ಸತ್ಯನಾರಾಯಣ ಮಾತನಾಡಿ, ಜಿಲ್ಲಾ ಕೇಂದ್ರ ಹೋರಾಟ ತೀವ್ರಗೊಳಿಸಲು ಬೆರಳೆಣಿಕೆಯಷ್ಟು ಜನರು ಭಾಗವಹಿಸಿದರೆ ಸಾಲದು. ಹೆಚ್ಚು ಜನರು ಪಾಲ್ಗೊಂಡಾಗ ಮಾತ್ರ ಸರ್ಕಾರ ಎಚ್ಚೆತ್ತುಕೊಳ್ಳಲಿದೆ. ಇದಕ್ಕೂ ‌ಮೊದಲು ಜಿಲ್ಲಾ ಕೇಂದ್ರ ಘೋಷಣೆಯಿಂದ ಆಗುವ ಅನುಕೂಲತೆಗಳ ಬಗ್ಗೆ ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.

ಸ್ಥಳೀಯವಾಗಿ ಹಾಗೂ ರಾಜ್ಯ ಮಟ್ಟದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹೆಚ್ಚು ಪ್ರಚಾರ ನಡೆಸಬೇಕು. ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರ ಮನೆ ಬಾಗಿಲಿಗೆ ಹೋಗಿ ಅವರನ್ನು ಹೋರಾಟದಲ್ಲಿ ಭಾಗವಹಿಸಲು ಮನವೊಲಿಸಬೇಕು ಎಂದು ಸಲಹೆ‌ ನೀಡಿದರು.

ಕನ್ನಡ ಜಾಗೃತ ಪರಿಷತ್ ಪ್ರಧಾನ ಕಾರ್ಯದರ್ಶಿ ಡಿ.ಪಿ. ಆಂಜನೇಯ ಮಾತನಾಡಿ, ರಾಜಕೀಯ ಪಕ್ಷಗಳ ಜೊತೆಗೆ ಜನ ಹಾಗೂ ಸಂಘಟನೆಗಳನ್ನು ತೊಡಗಿಸಿಕೊಂಡು ಹೋರಾಟ ರೂಪಿಸಬೇಕು. ಜಿಲ್ಲಾ ಕೇಂದ್ರದ ಅನಿವಾರ್ಯತೆ ಕುರಿತು ಮೊದಲು ಎಲ್ಲರಿಗೂ ಮನವರಿಕೆ ಮಾಡಿಕೊಡಬೇಕು ಎಂದರು.

ಕನ್ನಡ ಪಕ್ಷದ ಸಂಜೀವನಾಯಕ್‌ ಮಾತನಾಡಿ, ಜಿಲ್ಲಾ ಕೇಂದ್ರ ಘೋಷಣೆ ಬಗ್ಗೆ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ನೀಡಿರುವ ಹೇಳಿಕೆ ಹೊರತುಪಡಿಸಿ ಜನರಲ್ಲಿ ಹೋರಾಟದ ಕಾವು ತೀವ್ರಗೊಳ್ಳುವಂತೆ ಮಾಡಬೇಕು. ಸ್ಥಳೀಯ ಬಿಜೆಪಿ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಟ ರೂಪಿಸಬೇಕು ಎಂದರು.

ಜಿಲ್ಲಾ ಕೇಂದ್ರ ಆಗಲು ದೊಡ್ಡಬಳ್ಳಾಪುರಕ್ಕೆ ಇರುವ ಅರ್ಹತೆಗಳ ಪಟ್ಟಿ ಮಾಡಲು ಕನ್ನಡ ಜಾಗೃತ ಪರಿಷತ್‌ ಅಧ್ಯಕ್ಷ ಕೆ. ವೆಂಕಟೇಶ್, ಪ್ರೊ.ಕೆ.ಆರ್‌. ರವಿಕಿರಣ್, ಪತ್ರಕರ್ತ ಡಿ. ಶ್ರೀಕಾಂತ ಹಾಗೂ ಯುವ ಸಂಚಲನ ಅಧ್ಯಕ್ಷ ಚಿದಾನಂದ್ ನೇತೃತ್ವದಲ್ಲಿ ಸಮಿತಿ ರಚಿಸಲಾಯಿತು. ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿ ಸಲಹೆ
ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT