ಮಣ್ಣಿನ ಗಣಪ ವಿಗ್ರಹಕ್ಕೆ ಹೆಚ್ಚಿನ ಬೇಡಿಕೆ

7
ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ವಿಗ್ರಹ ಮಾರಾಟಕ್ಕೆ ತಡೆ, ತಯಾರಿಕೆ ಘಟಕಗಳ ಮೇಲೆ ನಿಗಾ

ಮಣ್ಣಿನ ಗಣಪ ವಿಗ್ರಹಕ್ಕೆ ಹೆಚ್ಚಿನ ಬೇಡಿಕೆ

Published:
Updated:
Deccan Herald

ವಿಜಯಪುರ: ಗಣೇಶ ಚರ್ತುರ್ಥಿಗೆ ಕೆಲವೇ ದಿನ ಬಾಕಿಯಿವೆ. ಎಲ್ಲೆಡೆ ‘ಪರಿಸರ’ಗಣಪಗಳ ಜಪ ಶುರುವಾಗಿದೆ. ವಿಷಬಣ್ಣ ರಹಿತ ಗಣೇಶ ಮೂರ್ತಿಗಳನ್ನೇ ಸ್ಥಾಪಿಸಬೇಕು ಮತ್ತು ಹಬ್ಬ ಸಂಪೂರ್ಣವಾಗಿ ಪರಿಸರ ಸ್ನೇಹಿ ವಿಧಾನದಲ್ಲಿ ಆಚರಿಸಬೇಕೆಂಬ ಎಂಬ ಕೂಗು ಪ್ರತಿ ವರ್ಷ ಪರಿಸರವಾದಿಗಳಿಂದ ಕೇಳಿ ಬರುತ್ತದೆ.

ಈ ಹಿನ್ನೆಲೆಯಲ್ಲಿ ಮಣ್ಣಿನಿಂದ ಮಾಡಿರುವ ಗಣಪತಿ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ. ನಗರದ ಚನ್ನರಾಯಪಟ್ಟಣ ಕ್ರಾಸ್ ನಲ್ಲಿರುವ ಗೋಡನ್ ನಲ್ಲಿ ಕಲಾವಿದರಾದ ಗಗನ್ ಮತ್ತು ವರುಣ್ ಸಹೋದರರು ತಯಾರಿಸುತ್ತಿರುವ ಮಣ್ಣಿನ ಗಣಪತಿ ಮೂರ್ತಿಗಳ ಖರೀದಿಗಾಗಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ.

ನಗರದ ಕೋಲಾರ ರಸ್ತೆ, ಚನ್ನರಾಯಪಟ್ಟಣ ಕ್ರಾಸ್, ಗಣಪತಿ ಮೂರ್ತಿಗಳನ್ನು ಮಾರಾಟ ಮಾಡುತ್ತಿದ್ದು ಮೈಸೂರು, ನಂಜನಗೂಡು, ಮಂಡ್ಯ, ಮದ್ದೂರು, ನೆಲಮಂಗಲ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಸೇರಿದಂತೆ ಅನೇಕ ಕಡೆಗಳಿಂದ ಎರಡು ತಿಂಗಳ ಮುಂಚೆಯೇ ಮಣ್ಣಿನ ಗಣಪತಿಗಳಿಗಾಗಿ ಮುಂಗಡವಾಗಿ ಕಾಯ್ದರಿಸಿ ಖರೀದಿಸಲಾಗುತ್ತಿದೆ ಎಂದು ಕಲಾವಿದ ಗಗನ್ ಹೇಳಿದರು.

ಈಗಾಗಲೇ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ರಾಸಾಯನಿಕ ಬಣ್ಣದಿಂದ ತಯಾರಿಸುವ ಗಣಪತಿ ಮೂರ್ತಿಗಳನ್ನು ತಯಾರಿಸುವಂತಿಲ್ಲ. ಪ್ರತಿಷ್ಠಾಪನೆ ಮಾಡುವಂತಿಲ್ಲ ಎನ್ನುವ ಆದೇಶ ಹೊರಡಿಸಿರುವುದರಿಂದ ಮಣ್ಣಿನ ಗಣಪತಿ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ ಎನ್ನುತ್ತಾರೆ ಕಲಾವಿದೆ ಗೀತಾ.

‘ನಾವು ನಾನಾ ರೂಪದ, ಆಕಾರದ ಮಣ್ಣಿನ ಗಣಪನ ಮೂರ್ತಿಗಳನ್ನು ತಯಾರಿಸಿದ್ದೇವೆ. ಪಿಒಪಿ ಗಣೇಶ ಮೂರ್ತಿಗಳು ನೋಡಲು ಆಕರ್ಷಕವಾಗಿರುತ್ತವೆ. ಅದರ ಹೊಳಪು, ಬಣ್ಣ ಎಂಥವರನ್ನೂ ಸೆಳೆಯುತ್ತದೆ. ಈ ಮೂರ್ತಿಗಳ ಬೆಲೆ ಹೆಚ್ಚು. ಮೊದಲೆಲ್ಲಾ ಈ ರೀತಿಯ ಮೂರ್ತಿಗಳಿಗೆ ಬೇಡಿಕೆ ಜಾಸ್ತಿ ಇತ್ತು. ನೀರಿನಲ್ಲಿ ಸುಲಭವಾಗಿ ಕರಗಲ್ಲ. ಈ ವರ್ಷ ಬಹುತೇಕರು ಮಣ್ಣಿನ ಮೂರ್ತಿಗಳನ್ನೇ ಕೇಳುತ್ತಿದ್ದಾರೆ ಮತ್ತು ಮುಂಗಡ ಬುಕ್ಕಿಂಗ್ ಮಾಡಿದ್ದಾರೆ. ನಮಗೂ ಈ ಬಗ್ಗೆ ಅರಿವಾಗಿ ಪರಿಸರ ಸ್ನೇಹಿ ಗಣೇಶ ಮೂರ್ತಿ ಮಾರಾಟದ ಬಗ್ಗೆ ಫಲಕ ಹಾಕಿದ್ದೇವೆ’ ಎಂದರು.

‘ನಾನು ಬಿ.ಕಾಂ.ಮಾಡಿದ್ದೇನೆ. ಉದ್ಯೋಗ ಸಿಕ್ಕಿಲ್ಲ. ನಮ್ಮ ಕುಟುಂಬದವರೊಂದಿಗೆ ಗಣಪತಿ ಮೂರ್ತಿಗಳನ್ನು ಮಾಡುವಂತಹ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ. ಮಣ್ಣಿನ ಗಣೇಶ ಮೂರ್ತಿಗಳು ಮುಂದಿನ ವರ್ಷಕ್ಕೆ ಉಳಿಯುವುದಿಲ್ಲ. ನಮಗೆ ನಷ್ಟವಾಗುತ್ತದೆ. ಕಳೆದ ಬಾರಿ ಹಲವು ಗಣೇಶನ ಮೂರ್ತಿಗಳನ್ನು ದಾನವಾಗಿ ನೀಡಿದ್ದರಿಂದ ನಮಗೆ ಸಾಕಷ್ಟು ನಷ್ಟವಾಗಿತ್ತು. ಈ ಬಾರಿ ತಾಲ್ಲೂಕಿನಲ್ಲಿ ಗಣೇಶನ ಮೂರ್ತಿಗಳನ್ನು ದಾನ ಮಾಡುವ ದಾನಿಗಳಿಲ್ಲದ ಕಾರಣ ಜನರು ಸ್ವತಃ ಅವರೇ ಖರೀದಿ ಮಾಡಿಕೊಳ್ಳುತ್ತಿದ್ದಾರೆ’ಎಂದು ಕಲಾವಿದ ವರುಣ್ ಅಭಿಪ್ರಾಯಪಟ್ಟರು.

ಸರ್ಕಾರ ಹೆಚ್ಚಿನ ಸೌಲಭ್ಯ ಕಲ್ಪಿಸಿಕೊಟ್ಟರೆ ಒಳ್ಳೆಯದು. ಬ್ಯಾಂಕ್‌ಗಳಿಂದ ಆರ್ಥಿಕ ಸಹಾಯ ಮಾಡಿದರೆ, ಮತ್ತಷ್ಟು ಮೂರ್ತಿಗಳನ್ನು ತಯಾರಿಸಲು ಸಾಧ್ಯವಾಗುತ್ತದೆ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !