ಗುರುವಾರ , ಸೆಪ್ಟೆಂಬರ್ 16, 2021
29 °C
ಅಂತರರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆಯಲ್ಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅಭಿಮತ

ದೇವನಹಳ್ಳಿ: ಮನುಷ್ಯನ ಸ್ವಾರ್ಥಕ್ಕಾಗಿ ಜೀವಸಂಕುಲ ನಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ‘ಮಾನವನ ಜೀವನ ಸುಗಮವಾಗಿ ಸಾಗಬೇಕಾದರೆ ಆಹಾರ, ನೀರು, ಗಾಳಿ, ಬೆಳಕು ಇದ್ದರೆ ಸಾಲದು. ಜೀವಸಂಕುಲವನ್ನು ತನ್ನೊಟ್ಟಿಗೆ ಉಳಿಸಿಕೊಂಡು ಹೋಗುವಂತಹ ಪ್ರವೃತ್ತಿಯನ್ನು ನಾವು ಬೆಳೆಸಿಕೊಳ್ಳಬೇಕು. ಜೀವಸಂಕುಲದ ಅನಿವಾರ್ಯತೆ ಕುರಿತು ಯುವಪೀಳಿಗೆಗೆ ಅರಿವು ಮೂಡಿಸುವಂತಹ ಕೆಲಸವಾಗಬೇಕು’ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಪಟ್ಟಣದ ಸಿಹಿನೀರು ಕೆರೆಯ ಬಳಿ ಜಿಲ್ಲಾಡಳಿತ ಮತ್ತು ಪುರಸಭೆಯಿಂದ ಸೋಮವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಪ್ರಕೃತಿಯಲ್ಲಿನ ಸರೀಸೃಪಗಳಿಂದ ಹಿಡಿದು, ಜಲಚರಗಳು ಕೂಡ ಮಾನವನ ಆರೋಗ್ಯಕರ ಜೀವನಕ್ಕೆ ಸಹಕಾರಿಯಾಗಿವೆ. ಆಧುನಿಕತೆ ಹೆಸರಿನಲ್ಲಿ ಪರಿಸರವನ್ನು ಹಾಳು ಮಾಡಿ ಜೀವಸಂಕುಲಕ್ಕೆ ನೆಲೆಯಿಲ್ಲದಂತೆ ಮಾಡಲಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ಎಚ್ಚರಿಸಿದರು.

ವಿಜ್ಞಾನ ಮತ್ತು ತಂತ್ರಜ್ಞಾನದಡಿ ಮನುಕುಲ ಹಾಗೂ ಪರಿಸರಕ್ಕೆ ಪೂರಕವಾಗುವ ಯೋಜನೆ ಹಮ್ಮಿಕೊಳ್ಳಬೇಕು. ಸಾರ್ವಜನಿಕರಿಗೆ ಮಣ್ಣು ಸವೆತ ತಡೆಗಟ್ಟುವಲ್ಲಿ ಸಹಾಯಕಾರಿಯಾಗುವ ಗಿಡ ಬೆಳೆಸುವುದರ ಬಗ್ಗೆ ಜಾಗೃತಿ ಮೂಡಿಸಬೇಕು. ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರದ ಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದರು.

ಪುರಸಭಾ ಅಧ್ಯಕ್ಷೆ ರೇಖಾ ವೇಣುಗೋಪಾಲ್ ಮಾತನಾಡಿ, ಮನುಷ್ಯನ ಸ್ವಾರ್ಥದಿಂದಾಗಿ ಪರಿಸರವನ್ನು ಹಾಳು ಮಾಡಿ ಜೀವಸಂಕುಲವನ್ನು ಸಂಕಷ್ಟಕ್ಕೆ ದೂಡಲಾಗುತ್ತಿದೆ. ಜೀವವೈವಿಧ್ಯದ ಮೇಲೆ ಇಷ್ಟೊಂದು ಕೋಪ ತೋರಿಸುವುದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದರು.

ಕೋವಿಡ್ ಮಹಾಮಾರಿ ಇಡೀ ಜಗತ್ತಿನ ಮನುಜಕುಲವನ್ನೇ ಕಿತ್ತು ತಿನ್ನುತ್ತಿದೆ. ಕಾಣದ ವೈರಾಣುವಿನ ಈ ಕ್ರೂರತೆಗೆ ನಲುಗಿರುವ ಜನರು ಶುದ್ಧ ಗಾಳಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಆದರೂ, ಅನೇಕರಿಗೆ ಬುದ್ಧಿ ಬಂದಿಲ್ಲ. ಹಣ ಖರ್ಚು ಮಾಡಿ ಆಮ್ಲಜನಕ ಕೊಳ್ಳುವ ಜನರಿಗೆ ಒಂದು ಗಿಡ ನೆಟ್ಟ ಪೋಷಿಸುವ ಸಾಮಾನ್ಯ ಪರಿಸರ ಜ್ಞಾನ ಇಲ್ಲ ಎಂದು ವಿಷಾದಿಸಿದರು.

ಪುರಸಭಾ ಮುಖ್ಯಾಧಿಕಾರಿ ಎ.ಎಚ್. ನಾಗರಾಜ್ ಮಾತನಾಡಿ, ಜೀವವೈವಿಧ್ಯ ದಿನವನ್ನು 1993ರ ಡಿಸೆಂಬರ್‌ನಲ್ಲಿ ಮೊದಲ ಬಾರಿಗೆ ಆಚರಿಸಲಾಯಿತು. 26 ವರ್ಷಗಳಿಂದ ಈ ದಿನ ಆಚರಿಸಲಾಗುತ್ತಿದೆ. ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಿ, ಜೀವವೈವಿಧ್ಯದ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ಸಂಕಲ್ಪ ಮಾಡಲಾಗುತ್ತಿದೆ ಎಂದು ಹೇಳಿದರು.

ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಉಪಾಧ್ಯಕ್ಷೆ ಪುಷ್ಪಲತಾ ಲಕ್ಷ್ಮೀನಾರಾಯಣ, ಸ್ಥಾಯಿಸಮಿತಿ ಅಧ್ಯಕ್ಷ ನಾಗೇಶ್, ಸದಸ್ಯರಾದ ಜಿ.ಎ. ರವೀಂದ್ರ, ವೈ.ಆರ್. ರುದ್ರೇಶ್, ಲೀಲಾವತಿ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಕಾರಹಳ್ಳಿ ಮುನೇಗೌಡ, ಟೌನ್ ಜೆಡಿಎಸ್ ಅಧ್ಯಕ್ಷ ಮುನಿನಂಜಪ್ಪ, ಪ್ರಧಾನ ಕಾರ್ಯದರ್ಶಿ ಸಾಯಿಕುಮಾರ್ ಬಾಬು, ಬಿ.ಕೆ. ಶಿವಪ್ಪ, ಮುನಿಕೃಷ್ಣಪ್ಪ, ಮಾನವ ಹಕ್ಕುಗಳ ಜಾಗೃತಿ ಸಮಿತಿಯ ಟೌನ್ ಅಧ್ಯಕ್ಷ ನಾಣಿ, ಪುರಸಭೆಯ ಆರೋಗ್ಯ ನಿರೀಕ್ಷಕಿ ತೃಪ್ತಿ, ಶ್ರೀದೇವಿ, ಎಂಜಿನಿಯರ್ ಗಂಗಾಧರ್, ಮುಖಂಡರಾದ ಲಕ್ಷ್ಮೀನಾರಾಯಣ, ಭರತ್ ಹಾಜರಿದ್ದರು. ರೈತರನ್ನು ಸನ್ಮಾನಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.