ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೇವಾ ಮನೋಭಾವನೆ ಬೆಳೆಸಿಕೊಳ್ಳಿ’

ಸಹಕಾರಿ ಸಂಘದ ಸಿಬ್ಬಂದಿಗೆ ‘ಡೇರಿ’ ಅಧ್ಯಕ್ಷ ಗುಂಡಪ್ಪ ಸಲಹೆ
Last Updated 7 ಜುಲೈ 2019, 13:48 IST
ಅಕ್ಷರ ಗಾತ್ರ

ವಿಜಯಪುರ: ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವಂತಹ ಸಿಬ್ಬಂದಿ ಲಾಭದ ದೃಷ್ಟಿ ಹೊಂದದೆ ಸೇವಾ ಮನೋಭಾವನೆಯನ್ನು ಬೆಳೆಸಿಕೊಂಡು ಬದ್ದತೆಯಿಂದ ಕೆಲಸ ಮಾಡಿದಾಗ ಮಾತ್ರ ಸಹಕಾರಿ ಸಂಘಗಳು ಅಭಿವೃದ್ಧಿ ಹೊಂದುತ್ತವೆ ಎಂದು ‘ಡೇರಿ’ ಅಧ್ಯಕ್ಷ ಗುಂಡಪ್ಪ ಹೇಳಿದರು.

ಸಮೀಪದ ಗಂಗವಾರ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾಗಿರುವ ಅವರು ಮುಖಂಡರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

‘ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಅಲ್ಲಿನ ರೈತರು ಹಾಗೂ ಕಬ್ಬು ಬೆಳೆಗಾರರು, ಸರ್ಕಾರವನ್ನು ಅವಲಂಬಿಸದೆ ಅಭಿವೃದ್ಧಿಯ ಮಾರ್ಗವನ್ನು ತಾವೇ ಕಂಡುಕೊಂಡಿದ್ದಾರೆ. ನಮ್ಮಲ್ಲಿ ಶೇ 80 ರಷ್ಟು ರೈತರು ಹೈನುಗಾರಿಕೆಯನ್ನೇ ನಂಬಿಕೊಂಡು ಜೀವನ ಮಾಡುತ್ತಿದ್ದಾರೆ’ ಎಂದರು.

ಹೆಚ್ಚಿನ ಪ್ರಮಾಣದಲ್ಲಿ ಹಾಲು ಉತ್ಪಾದನೆಯಾಗುತ್ತಿದೆ. ಉತ್ಪಾದನೆಯಾಗುತ್ತಿರುವ ಹಾಲು ಗುಣಮಟ್ಟದಿಂದ ಕೂಡಿದ್ದಾಗ ಮಾತ್ರವೇ ಸಂಘದ ಏಳಿಗೆ ಸಾಧ್ಯವಾಗುತ್ತದೆ ಎಂದರು.

ಉಪಾಧ್ಯಕ್ಷ ಮಂಜುನಾಥ್ ಮಾತನಾಡಿ, ಸಂಘಗಳ ಅಭಿವೃದ್ಧಿಗಾಗಿ ಸಹಕರಿಸುವಂತೆ ಕಾರ್ಯದರ್ಶಿಗಳು ಉತ್ಪಾದಕರನ್ನು ಪ್ರೋತ್ಸಾಹಿಸಬೇಕು. ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಪ್ರವೇಶವಾಗಬಾರದು ಎಂದರು.

‘ತೀವ್ರ ಕುಡಿಯುವ ನೀರಿನ ಅಭಾವದ ನಡುವೆಯೂ ಹಾಲಿನ ಉತ್ಪಾದನೆಯಲ್ಲಿ ನಮ್ಮ ಉತ್ಪಾದಕರು ಹಿಂದೆ ಬಿದ್ದಿಲ್ಲ. ಬಹುತೇಕ ಮಹಿಳೆಯರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವುದರಿಂದ ಉದ್ಯಮ ಉತ್ತಮವಾಗಿ ನಡೆಯುತ್ತಿದೆ. ಮತ್ತಷ್ಟು ಪ್ರಗತಿಯತ್ತ ಉದ್ಯಮವನ್ನು ಕೊಂಡೊಯ್ಯಬೇಕಾದರೆ ಉತ್ಪಾದಕರ ಸಹಕಾರವೂ ಬಹಳಷ್ಟು ಮುಖ್ಯವಾಗುತ್ತದೆ’ ಎಂದರು.

ಎಪಿಎಂಸಿ ನಾಮನಿರ್ದೇಶಿತ ನಿರ್ದೇಶಕ ಜಯರಾಮೇಗೌಡ ಮಾತನಾಡಿ, ‘ರೈತರ ಬೆನ್ನೆಲುಬಾಗಿರುವ ಹೈನುಗಾರಿಕೆಯನ್ನು ಪರಿಣಾಮಕಾರಿಯಾಗಿ ಮುಂದುವರೆಸಿಕೊಂಡು ಹೋದಾಗ ಮಾತ್ರವೇ ಬರಡುನಾಡಿನಲ್ಲಿ ಬದುಕುತ್ತಿರುವ ನಾವು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಂದುವರೆಯಲಿಕ್ಕೆ ಸಾಧ್ಯವಾಗುತ್ತದೆ’ ಎಂದರು.

ಈ ನಿಟ್ಟಿನಲ್ಲಿ ಸಿಬ್ಬಂದಿಯಲ್ಲಿನ ಬದ್ಧತೆ, ಪ್ರಾಮಾಣಿಕತೆಯಿಂದ ಮಾತ್ರ ಇದು ಸಾಧ್ಯವಾಗುತ್ತದೆ. ಸಂಘದಿಂದ ಸಿಗುವಂತಹ ಎಲ್ಲಾ ಸೌಲತ್ತುಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ರಾಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು. ಉತ್ಪಾದಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಕಡೆಗೆ ಗಮನಹರಿಸಬೇಕು ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಎಂ. ರಾಜಣ್ಣ ಮಾತನಾಡಿ, ಆರ್ಥಿಕ ವ್ಯವಹಾರದಲ್ಲಿ ರೈತರ ಕಷ್ಟದ ದುಡಿಮೆಯಿಂದ ನಡೆಯುತ್ತಿರುವ ಏಕೈಕ ಸಂಸ್ಥೆ ಹಾಲು ಉತ್ಪಾದಕರ ಸಹಕಾರ ಸಂಘ, ಉತ್ತಮ ಗುಣಮಟ್ಟದ ಹಾಲು ಪೂರೈಕೆ ಮಾಡದಿದ್ದಲ್ಲಿ ಭವಿಷ್ಯದಲ್ಲಿ ಸಂಘಗಳು ದಿವಾಳಿಯಾಗುವುದರ ಜತೆಗೆ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಎಂದರು.

ಗಂಗವಾರ, ಚೌಡಪ್ಪನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮನೇಕಾ, ಸದಸ್ಯ ಸಿ.ಎಸ್. ರಾಜಣ್ಣ, ಡೇರಿ ನಿರ್ದೇಶಕರಾದ ಬೈರೇಗೌಡ, ಈರಣ್ಣ, ಬೈರೇಗೌಡ.ಎ, ಬೈರೇಗೌಡ.ಬಿ, ನಾಗರಾಜು, ಮಂಜುನಾಥ್, ಮುನಿರಾಜು, ನಂಜಮ್ಮ, ವಸಂತ ಮುಖಂಡ ಕೃಷ್ಣಪ್ಪ, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ್, ಹಾಲು ಪರಿವೀಕ್ಷಕ ಶಿವಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT