ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪ್ರತಿನಿಧಿಗಳು ಒಗ್ಗೂಡಿದರೆ ಅಭಿವೃದ್ಧಿ ಸಾಧ್ಯ

₹ 1.25 ಕೋಟಿ ಮೊತ್ತದ ಕಾಮಗಾರಿಗೆ ಚಾಲನೆ
Last Updated 2 ಆಗಸ್ಟ್ 2021, 3:01 IST
ಅಕ್ಷರ ಗಾತ್ರ

ಆನೇಕಲ್:ಗ್ರಾಮ ಪಂಚಾಯಿತಿ ಸದಸ್ಯರು ಪರಸ್ಪರ ಒಗ್ಗೂಡಿ ಕೆಲಸ ಮಾಡಿದರೆ ಗ್ರಾಮಗಳ ಅಭಿವೃದ್ಧಿ ಸುಗಮವಾಗುತ್ತದೆ. ಈ ನಿಟ್ಟಿನಲ್ಲಿ ಕಾಚನಾಯಕನಹಳ್ಳಿಯ 14 ಸದಸ್ಯರು ಒಮ್ಮತದ ತೀರ್ಮಾನ ಕೈಗೊಂಡು ಗ್ರಾಮ ಪಂಚಾಯಿತಿಯ ₹ 1.25 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿರುವುದು ಒಳ್ಳೆಯ ಬೆಳವಣಿಗೆ ಎಂದು ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಆರ್‌.ಕೆ. ರಮೇಶ್‌ ತಿಳಿಸಿದರು.

ಅವರು ತಾಲ್ಲೂಕಿನ ಹೆನ್ನಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಚನಾಯಕನಹಳ್ಳಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಯ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗ್ರಾಮದಲ್ಲಿನ ರಸ್ತೆ, ಚರಂಡಿಗಳನ್ನು ಅಭಿವೃದ್ಧಿಪಡಿಸಿ ಸ್ವಚ್ಛತೆ ಮತ್ತು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಯಿಂದ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮುನಿರತ್ನ ಮುನಿರಾಜು ಮಾತನಾಡಿ, ಪಂಚಾಯಿತಿಯ ನೂತನ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ನಂತರ ಗ್ರಾಮದಲ್ಲಿ ಕೈಗೊಂಡಿರುವ ಮೊದಲ ಕಾಮಗಾರಿ ಇದಾಗಿದೆ. ಎಲ್ಲಾ ಸದಸ್ಯರು ಸಹಮತದಿಂದ ತೀರ್ಮಾನ ಕೈಗೊಂಡು ಕಾಮಗಾರಿಗಳನ್ನು ಸೂಚಿಸಿದ್ದಾರೆ. ಇವುಗಳು ಜನರಿಗೆ ಉಪಯೋಗವಾಗುವಂತಹ ಕೆಲಸಗಳಾಗಿವೆ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಚ್‌.ಜೆ. ಪ್ರಸನ್ನಕುಮಾರ್‌ ಮಾತನಾಡಿ, ಕೊರೊನಾ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ದೊರೆತಿರಲಿಲ್ಲ. ಹಾಗಾಗಿ ಕ್ರಿಯಾಯೋಜನೆಯಲ್ಲಿ ಮೀಸಲಿಟ್ಟ ಹಣವನ್ನು ಉಪಯೋಗ ಮಾಡಲು ಸಾಧ್ಯವಾಗಿರಲಿಲ್ಲ ಎಂದರು.

ಪ್ರಸ್ತುತ ಎಲ್ಲಾ ಗ್ರಾಮಗಳಲ್ಲಿ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಾಗುವುದು. ಹೆಚ್ಚು ಸದಸ್ಯರಿರುವ ಗ್ರಾಮ ಕಾಚನಾಯಕನಹಳ್ಳಿಯಾಗಿದ್ದು ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಿದೆ. ಜನದಟ್ಟಣೆ ಹೆಚ್ಚಾಗಿರುವ ಈ ಗ್ರಾಮದಲ್ಲಿ ಮೂಲಸೌಲಭ್ಯ ಕಲ್ಪಿಸಲು ಅನುದಾನ ಮಂಜೂರು ಮಾಡಲಾಗಿದೆ. ಗುಣಮಟ್ಟದ ಕಾಮಗಾರಿಯನ್ನು ಮಾಡಿಸುವ ನಿಟ್ಟಿನಲ್ಲಿ ಎಲ್ಲಾ ಸದಸ್ಯರು ನಿಗಾ ವಹಿಸಬೇಕು ಎಂದು ಹೇಳಿದರು.

ಅತ್ತಿಬೆಲೆ ಕೈಗಾರಿಕಾ ಸಂಘದ ಅಧ್ಯಕ್ಷ ಕೇಶವರೆಡ್ಡಿ, ಗ್ರಾಮ ಪಂಚಾಯಿತಿ ಸದಸ್ಯರಾದ ಕಿರಣ್‌ಕುಮಾರ್, ರಾಮಸ್ವಾಮಿ, ಲೋಕನಾಥ್‌, ಅರುಣ ಮಂಜುನಾಥ್, ಶಿವರಾಜ್‌, ಮನು, ಪುಷ್ಪಾ, ವಿನಯ್‌, ಅನುಸೂಯ, ಶಂಕರ್, ಗಿರೀಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT