ದೇವನಹಳ್ಳಿ: ‘2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಬುಧವಾರದಿಂದ ನೀತಿ ಸಂಹಿತೆ ಜಾರಿಯಾಗಿದ್ದು, ಜಿಲ್ಲಾಡಳಿತ ಚುನಾವಣೆಗೆ ಸನ್ನದ್ಧವಾಗಿದೆ. ಈ ಬಾರಿ ಹೆಚ್ಚಿನ ಜಾಗೃತಿ ಮೂಡಿಸುವುದರೊಂದಿಗೆ ಮತದಾನ ಪ್ರಕ್ರಿಯೆಯನ್ನು ಹಬ್ಬದಂತೆ ಆಚರಿಸೋಣ’ ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.
ಬುಧವಾರ ಜಿಲ್ಲಾಡಳಿತ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರವಿದೆ. ದೊಡ್ಡಬಳ್ಳಾಪುರ, ಹೊಸಕೋಟೆ ಹೊರತಾಗಿ ನೆಲಮಂಗಲ, ದೇವನಹಳ್ಳಿ ಮೀಸಲು ಕ್ಷೇತ್ರವಾಗಿದೆ’ ಎಂದು ಹೇಳಿದರು.
ಮತದಾರರ ಪಟ್ಟಿಯಲ್ಲಿ ಹೆಸರು ಸೇರಿದವರು ಏಪ್ರಿಲ್ 11ವರೆಗೂ ಒಳಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ‘ಈಗಾಗಲೇ 15 ದಿನಗಳಿಂದ 26 ಕಡೆ ಚೆಕ್ ಪೋಸ್ಟ್ ಸ್ಥಾಪಿಸಿ ತಪಾಸಣೆ ನಡೆಸಲಾಗುತ್ತಿದೆ. ಜಿಲ್ಲೆಯಾದ್ಯಂತ 2,000ಕ್ಕೂ ಅಧಿಕ ಪರವಾನಗಿ ಗನ್‌ಗಳಿವೆ. ಅವುಗಳನ್ನು ಇಲಾಖೆಯ ಸುಪರ್ದಿಗೆ ಪಡೆಯಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಚುನಾವಣಾ ಅಕ್ರಮಗಳಲ್ಲಿ ಸಕ್ರಿಯರಾಗಿರುವ ಒಂದು ಸಾವಿರಕ್ಕೂ ಅಧಿಕ ಮಂದಿಯನ್ನು ಗುರುತಿಸಿ, ಎಚ್ಚರಿಕೆ ನೀಡಲಾಗಿದೆ. ಈಗಾಗಲೇ ಮೂವರ ಮೇಲೆ ರೌಡಿ ಶೀಟರ್ ತೆರೆಯಲಾಗಿದೆ ಎಂದರು.
ಸರ್ಕಾರಿ ಅಧಿಕಾರಿಗಳಿಗಿಲ್ಲ ರಜೆ, ವರ್ಗಾವಣೆ ಅಮಾನತ್ತು: ಜಿಲ್ಲೆ, ತಾಲ್ಲೂಕಿನ ಎಲ್ಲ ಇಲಾಖೆಗಳ ಮುಖ್ಯಸ್ಥರು ರಜೆಯನ್ನು ನೀಡುವುದು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಜಿಲ್ಲಾ ಚುನಾವಣಾಧಿಕಾರಿಗಳ ಅನುಮತಿ ಇಲ್ಲದೇ ಯಾವುದೇ ಸಿಬ್ಬಂದಿಗೂ ರಜೆ ನೀಡಬಾರದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಚುನಾವಣಾ ಪೂರ್ವದಲ್ಲಿ ವರ್ಗಾವಣೆಗೊಂಡಿರುವ ಯಾವುದೇ ಅಧಿಕಾರಿಗಳು ಚುನಾವಣಾ ಪ್ರಕ್ರಿಯೆಯೂ ಪೂರ್ಣಗೊಳ್ಳುವವರೆಗೂ ಆದೇಶ ಅಮಾನತ್ತು ಮಾಡಲಾಗಿದೆ. ಜಿಲ್ಲೆಯಲ್ಲಿ ನಡೆಯುವ ಯಾವುದೇ ರಾಜಕೀಯ ಸಭೆ, ಸಮಾರಂಭಗಳಿಗೆ ಚುನಾವಣಾಧಿಕಾರಿಗಳು, ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಸಿಇಓ ರವಿ ಎಂ ತಿರ್ಲಾಪುರ, ಹೆಚ್ಚುವರಿ ಜಿಲ್ಲಾಧಿಕಾರಿ ಅಮರೇಶ್, ಜಿಪಂ ಉಪ ಕಾರ್ಯದರ್ಶಿ ನಾಗರಾಜ್, ದೇವನಹಳ್ಳಿ ಎಸಿಪಿ ಬಾಲಕೃಷ್ಣ, ಇನ್ಸ್‌ಪೆಕ್ಟರ್ ಧರ್ಮೇಗೌಡ, ವಾರ್ತಾ ಇಲಾಖೆ ಉಪ ನಿರ್ದೇಶಕಿ ರೂಪ ಇದ್ದರು.
ಅಕ್ರಮ ತಡೆಗೆ ಹದ್ದಿನ ಕಣ್ಣು: ಜಿಲ್ಲೆಯಾದ್ಯಂತ ಸ್ಥಾಪಿಸಿರುವ 26 ಚೆಕ್ ಪೋಸ್ಟ್‌ಗಳಲ್ಲಿ ಬಿಗಿ ತಪಾಸಣೆಗಾಗಿ ಎಸ್‌ಎಸ್‌ಟಿ ಅಧಿಕಾರಿಗಳೊಂದಿಗೆ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಈಗಾಗಲೇ ₹1.3 ಕೋಟಿ ಮೌಲ್ಯದ ಬೆಳ್ಳಿ ಆಭರಣ, ಮದ್ಯ, ಡ್ರಗ್ಸ್, ಸೀರೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.
ಜಿಲ್ಲೆಯ ಹೊಂದಿಕೊಂಡಿರುವ ತಮಿಳುನಾಡು ಗಡಿಯಲ್ಲಿ ಅಂತರರಾಜ್ಯ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ. ನೆರೆಯ ಜಿಲ್ಲೆಗಳಿಗೆ ಹೊಂದಿಕೊಂಡಿರುವಂತೆ 8 ಚೆಕ್ ಪೋಸ್ಟ್ ಹಾಗೂ ಜಿಲ್ಲೆಯ ಒಳಗೆ ಒಟ್ಟು 17 ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ. ಈ ಸ್ಥಳಗಳಲ್ಲಿ 104 ಸೆಕ್ಟರ್ ಅಧಿಕಾರಿಗಳು ಕರ್ತವ್ಯ ನಿರ್ವಹಣೆ ಮಾಡಲಿದ್ದಾರೆ. 45 ಜನರ ಫ್ಲೈಯಿಂಗ್ ಸ್ವಡ್, ವಿಡಿಯೋ ಕಣ್ಗಾವಲಿಗೆ 10 ಜನರ ತಂಡ, ವಿಡಿಯೋ ವೀಕ್ಷಣೆಗೆ 8 ಜನರ ತಂಡ ನೇಮಿಸಲಾಗಿದೆ. ಜಿಲ್ಲೆಯ ಎಲ್ಲ ಪ್ರವಾಸಿ ಮಂದಿರಗಳು ತಹಶೀಲ್ದಾರ್‌ರ ಸುಪರ್ದಿಗೆ ನೀಡಲಾಗಿದ್ದು, ಜನಪ್ರತಿನಿಧಿಗಳ ಬಳಿ ಇದ್ದ ಸರ್ಕಾರಿ ವಾಹನಗಳನ್ನು ವಶಕ್ಕೆ ಪಡೆಯಲಾಗುತ್ತದೆ ಎಂದರು.
ಮನೆ ಬಳಿ ಮತದಾನ: ‘ಈ ಬಾರಿ ಜಿಲ್ಲೆಯಾದ್ಯಂತ ಒಟ್ಟು 19,835 ಯುವ ಮತದಾರರು ಮೊಟ್ಟ ಮೊದಲ ಬಾರಿಗೆ ವಿಧಾನ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ. 20,324 ಮಂದಿ ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟವರು, 12,481 ಮತದಾರರು ಅಂಗವಿಕಲ ಮತದಾರರು ಇದ್ದಾರೆ. ವಿಶೇಷವಾಗಿ ಅಂಗವಿಕಲರಿಗೆ ಹಾಗೂ 80 ವರ್ಷಕ್ಕಿಂತ ಹೆಚ್ಚು ವಯಸ್ಸಾದ ಹಿರಿಯ ನಾಗರಿಕರ ಮನೆಗೆ ಹೋಗಿ ನೇರವಾಗಿ ಗೌಪ್ಯ ಮತದಾನ ವ್ಯವಸ್ಥೆಯನ್ನು ಈ ಬಾರಿ ಜಾರಿಗೆ ತರಲಾಗಿದೆ’ ಎಂದು ಜಿಲ್ಲಾಧಿಕಾರಿ ಲಾರ್.ಲತಾ ತಿಳಿಸಿದರು.
ಅವರಿಗೆಲ್ಲಾ ಸಾಧ್ಯವಾದರೇ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ಮಾಡುವಂತೆ ಮನವಿ ಮಾಡಲಾಗುವುದು. ಒಂದೊಮ್ಮೆ ಅವರು ಮನೆಯಲ್ಲಿಯೇ ಮತದಾನ ಮಾಡಲು ಇಚ್ಛಿಸಿದಲ್ಲಿ ತರಬೇತಿ ನಿರತ ಸಿಬ್ಬಂದಿ, ವಿಡಿಯೋ ಚಿತ್ರೀಕರಣದೊಂದಿಗೆ ಈ ಪ್ರಕ್ರಿಯ ಮಾಡುವರು ಎಂದು ತಿಳಿಸಿದರು.
1950ಗೆ ಕರೆ ಮಾಡಿ: ಚುನಾವಣಾ ಅಧಿಕಾರಿಗಳಿಗೆ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಅಧಿಕಾರ ನೀಡಲಾಗಿದ್ದು, ಚುನಾವಣಾ ಅಕ್ರಮಗಳ ತಡೆಗೆ 1950ಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ. ಜಿಲ್ಲೆಯಲ್ಲಿ ಒಟ್ಟು 20 ಮತಗಟ್ಟಯೂ ಪೂರ್ಣ ಪ್ರಮಾಣದಲ್ಲಿ ಮಹಿಳಾ ಸಿಬ್ಬಂದಿಯೇ ನಿರ್ವಹಣೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಎಸ್.ಪಿ ತಿಳಿಸಿದರು.
ಹೊಸಕೋಟೆ ಸೂಕ್ಷ್ಮ: ‘ಸೂಕ್ಷ್ಮ ಮತ ಪ್ರದೇಶಗಳಲ್ಲಿ ಈಗಾಗಲೇ ರ್‍ಯಾಪಿಡ್ ಆಕ್ಷನ್ ಪೋರ್ಸ್ ಪಥ ಸಂಚಾಲನ ನಡೆಸಲಾಗುತ್ತಿದೆ. ಹೆಚ್ಚುವರಿಯಾಗಿ ಮೂರು ಬಿಎಸ್‌ಎಫ್ ತುಕಡಿಗೆ ಇನ್ನೂ ಎರಡು ತಂಡ ಸೆರ್ಪಡೆಯಾಗಲಿದೆ. ಕಾನೂನು ಸುವ್ಯವಸ್ಥೆಯ ಆಧಾರದಲ್ಲಿ ಹೊಸಕೋಟೆ ವಿಧಾನ ಸಭಾ ಕ್ಷೇತ್ರ ಅತ್ಯಂತ ಸೂಕ್ಷ್ಮ ಮತ ಕ್ಷೇತ್ರ ಎಂದು ಗುರುತು ಮಾಡಲಾಗಿದೆ, ಪ್ರತಿಯೊಂದು ಚೆಕ್ ಪೋಸ್ಟ್‌ಗಳಲ್ಲಿ ಸಿಸಿಟಿವಿ, ವಿಡಿಯೋ ಚಿತ್ರೀಕರಣ ಮಾಡಲಾಗುತ್ತಿದೆ’ ಎಂದು ಎಸ್.ಪಿ.ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.