ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: ಪೊಲೀಸ್‌ ಠಾಣೆಗಳಲ್ಲಿ ಸಿಬ್ಬಂದಿ ಕೊರತೆ

ಹೆಚ್ಚುತ್ತಿರುವ ಅಪರಾಧ: ಬೆರಳೆಣಿಕೆಯಷ್ಟು ಸಿಬ್ಬಂದಿ-, ಬೆಟ್ಟದಷ್ಟು ಕೆಲಸ
Last Updated 2 ಜನವರಿ 2023, 5:13 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಕುರಿ, ಕೋಳಿ, ದನಗಳಿಂದ ಮೊದಲುಗೊಂಡು, ದೇವಾಲಯಗಳ ಹುಂಡಿ ಕಳವು, ಸರಗಳ್ಳತನ ಸೇರಿದಂತೆ ಬ್ಯಾಂಕ್‌ ದರೋಡೆವರೆಗೂ ಪ್ರತಿ ವಾರಕ್ಕೆ ಒಮ್ಮೆಯಂತೆ ಅಪರಾಧ ಪ್ರಕರಣಗಳು ನಡೆಯುತ್ತಲೇ ಇವೆ. ಆದರೆ, ಪತ್ತೆಯಾಗಿದ್ದು ಮಾತ್ರ ಬೆರಳೆಣಿಕೆಯಷ್ಟು ಮಾತ್ರ. ಹೀಗಾಗಿ ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರಿ’ ಎನ್ನುವ ಮಾತು ತಾಲ್ಲೂಕಿನ ಸಾರ್ವಜನಿಕರಲ್ಲಿ ಜನ ಜನಿತವಾಗಿದೆ.

ನಗರ ಸೇರಿದಂತೆ ತಾಲ್ಲೂಕಿನಲ್ಲಿ ನಾಲ್ಕು ಪೊಲೀಸ್‌ ಠಾಣೆಗಳಿವೆ. ಹೋಬಳಿ ಕೇಂದ್ರಗಳಲ್ಲೂ ಪೊಲೀಸ್‌ ಠಾಣೆಗಳು ಇವೆ. ಆದರೆ ಕಳವು ಪ್ರಕರಣಗಳು ನಿರಂತರವಾಗಿ ನಡೆಯುತ್ತಲೇ ಇವೆ.

ನಗರದಲ್ಲಿ ವಾರದಲ್ಲಿ ಸರಗಳವು, ಮನೆ ಮುಂದೆ ನಿಲ್ಲಿಸಿದ್ದ ಬೈಕ್‌, ಸೈಕಲ್‌ಗಳ ಕಳತನ ಪ್ರಕರಣ ವರದಿಯಾಗುತ್ತಲೇ ಇವೆ. ಇನ್ನು ಗ್ರಾಮೀಣ ಭಾಗದಲ್ಲಿ ಕುರಿ, ಕೋಳಿ, ದನಗಳಿಗೆ ಒಂದು ಕಡೆ ಚಿರತೆಗಳ ಹಾವಳಿಯಾದರೆ, ಮತ್ತೊಂದು ಕಡೆ ಕಳ್ಳರ ಕಾಟ. ಇದರಿಂದ ರೈತರು ಬೇಸತ್ತು ಹೋಗಿದ್ದಾರೆ.

ಕುರಿ, ದನಗಳ ಕಳ್ಳರನ್ನು ಪತ್ತೆ ಮಾಡಿ ನಮ್ಮ ಕುರಿಗಳನ್ನು ಕೊಡಿಸಿ ಎಂದು ತಾಲ್ಲೂಕು ಕಚೇರಿ ಮುಂದೆ ಕನ್ನಡ ಪರ ಸಂಘಟನೆಗಳ ನೇತೃತ್ವದಲ್ಲಿ ರೈತರು ಕುರಿ, ಮೇಕೆಗಳೊಂದಿಗೆ ಪ್ರತಿಭಟನೆ ಮಾಡಿ ತಹಶೀಲ್ದಾರರಿಗೆ ಮನವಿ ಮಾಡಿದ್ದರು ಸಹ ಇಲ್ಲಿಯವರೆಗೂ ಯಾವುದೇ ಉಪಯೋಗವು ಆಗಿಲ್ಲ ಎನ್ನುವ ಅಸಮಧಾನ ರೈತರದ್ದು.

ತಾಲ್ಲೂಕಿನ ನಾಲ್ಕು ಪೊಲೀಸ್‌ ಠಾಣೆಗಳಲ್ಲಿಯೂ ಜನಸಂಖ್ಯೆಗೆ ಅನುಗುಣವಾಗಿ ಸಿಬ್ಬಂದಿ ಇಲ್ಲ. ಸರ್ಕಾರದಿಂದ ಮಂಜೂರಾಗಿರುವ ಸಿಬ್ಬಂದಿಯು ಸಹ ಠಾಣೆಗಳಲ್ಲಿ ಇಲ್ಲದಾಗಿದ್ದಾರೆ. ದೊಡ್ಡಬೆಳವಂಗಲ ಪೊಲೀಸ್‌ ಠಾಣೆಗೆ 2 ಪಿಎಸ್‌ಐ, 3 ಎಎಸ್‌ಐ, 9 ಎಚ್‌ಸಿ ಹಾಗೂ 18 ಪಿಸಿ ಸರ್ಕಾರದಿಂದ ಮಂಜೂರಾಗಿದ್ದಾರೆ. ಆದರೆ, ವಾಸ್ತವದಲ್ಲಿ ಇರುವುದು 16 ಜನ ಪಿಸಿ ಮಾತ್ರ ಇದ್ದಾರೆ. ಹೊಸಹಳ್ಳಿ ಪೊಲೀಸ್‌ ಠಾಣೆಯಲ್ಲಿ 2 ಪಿಎಸ್‌ಐ, 3 ಎಎಸ್‌ಐ, 6 ಎಚ್‌ಸಿ, 16 ಪಿಸಿ ಮಂಜೂರಾಗಿದ್ದು, 12 ಪಿಸಿ ಮಾತ್ರ ಇದ್ದಾರೆ. ನಗರ ಪೊಲೀಸ್‌ ಠಾಣೆಯಲ್ಲಿ 2 ಪಿಎಸ್‌ಐ, 5 ಎಎಸ್‌ಐ, 14 ಎಚ್‌ಸಿ, 30 ಪಿಸಿ ಮಂಜೂರಾಗಿದ್ದರೂ 23 ಪಿಸಿ ಮಾತ್ರ ಇದ್ದಾರೆ. ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಇದೇ ಕಥೆಯಾಗಿದೆ.

ಇದರೊಂದಿಗೆ ಪ್ರತಿ ಪೊಲೀಸ್‌ ಠಾಣೆಯಲ್ಲೂ ಇಬ್ಬರು ಸಿಬ್ಬಂದಿಗೆ ಕೋರ್ಟ್‌ ಕೆಲಸ, ಕೋರ್ಟ್‌ ಸಮನ್ಸ್‌ ಜಾರಿ, ವಾರೆಂಟ್‌ ಜಾರಿ, ಪ್ರತಿದಿನ ಇಬ್ಬರು ಪಾಳಿಯಲ್ಲಿ ಠಾಣಾಧಿಕಾರಿ, ಠಾಣಾ ಬರಹಗಾರರು, ಕಂಪ್ಯೂಟರ್‌ ಸಿಬ್ಬಂದಿ, ಇಸಿಆರ್‌ (112ಗಸ್ತು ವಾಹನ), ಗಣ್ಯ ವ್ಯಕ್ತಿಗಳಿಗೆ ಹೈವೆ ಮೊಬೈಲ್‌, ವಿಚಾರಣಾಧೀನ ಆರೋಪಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದಂತೆ ರಾಜ್ಯದ ಇತರೆ (ಬಳ್ಳಾರಿ) ಕಾರಾಗೃಹಗಳಿಂದ ನ್ಯಾಯಾಲಯಕ್ಕೆ ಕರೆತಂದು, ವಿಚಾರಣೆಯ ನಂತರ ಮತ್ತೆ ಕಾರಾಗೃಹಕ್ಕೆ ಬಿಟ್ಟು ಬರುವ ಕಾಯಕ ಇರುತ್ತದೆ

ಬಂದೋಬಸ್ತ್‌ಗೆ ಬೇಸತ್ತು ಹೋದ ಸಿಬ್ಬಂದಿ: ಪೊಲೀಸ್‌ ಠಾಣೆಗಳು ಸಿಬ್ಬಂದಿ ಕೊರತೆಯಿಂದ ನರಳುತ್ತಿವೆ. ಇಂತಹ ಸಂದರ್ಭದಲ್ಲೂ ಬೆಳಗಾವಿಯಲ್ಲಿ ನಡೆಯುವ ವಿಧಾನ ಮಂಡಲ ಅಧಿವೇಶನದಿಂದ ಮೊದಲುಗೊಂಡು ರಾಜ್ಯದ ಯಾವುದೇ ಮೂಲೆಯಲ್ಲಿ, ಯಾವುದೇ ರೀತಿಯ ಗಲಬೆ, ಗಣ್ಯರ ಭೇಟಿ, ಬೃಹತ್‌ ರಾಜಕೀಯ ಸಮಾವೇಶಗಳು ನಡೆದರು ಸಹ ಇಲ್ಲಿಂದ ಪೊಲೀಸ್‌ ಸಿಬ್ಬಂದಿ ಬಂದೋಬಸ್ತ್‌ ಕೆಲಸಕ್ಕೆ ಕಡ್ಡಾಯವಾಗಿ ಹೋಗಲೇ ಬೇಕು.

ದೇವನಹಳ್ಳಿಯಲ್ಲಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಇರುವುದರಿಂದ ಉತ್ತರ ಕರ್ನಾಟಕ, ನೆರೆಯ ಆಂಧ್ರಪ್ರದೇಶ ಸೇರಿದಂತೆ ನಾನಾ ಭಾಗಗಳಿಂದ ಗಣ್ಯ ವ್ಯಕ್ತಿಗಳು ವಿಮಾನ ನಿಲ್ದಾಣಕ್ಕೆ ಹೋಗಲು ಬರುವಾಗ ತಾಲ್ಲೂಕಿನ ಗಡಿಭಾಗದಲ್ಲಿ ಪೊಲೀಸ್‌ ವಾಹನ ಹಾಜರಿರಬೇಕು. ಗಣ್ಯರು ತೆರುವಳು ವಾಹನದ ಮುಂದೆ ಹೋಗುವ ಕೆಲಸ ಇಲ್ಲಿನ ಪೊಲೀಸ್‌ ಸಿಬ್ಬಂದಿಗೆ ಪ್ರತಿ ದಿನ ಇದ್ದೇ ಇರುತ್ತದೆ.

ಅಪರಾಧಗಳನ್ನು ತಡೆಯಲು ಹೊಸ ಪೊಲೀಸ್‌ ಠಾಣೆಗಳನ್ನು ತೆರದರಷ್ಟೇ ಸಾಲದು. ಇರುವ ಪೊಲೀಸ್‌ ಠಾಣೆಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಸಿಬ್ಬಂದಿ ನೇಮಕ, ಅಪರಾಧಗಳ ತನಿಖೆಗೆ ಅಗತ್ಯ ಇರುವ ಆಧುನಿಕ ಸೌಲಭ್ಯಗಳನ್ನು ಒದಗಿಸುವ ಮೂಲಕ ಪೊಲೀಸ್‌ ಠಾಣೆಗಳನ್ನು ಬಲಪಡಿಸುವ ಅಗತ್ಯವಿದೆ ಎನ್ನುತ್ತಾರೆ ಇಲ್ಲಿನ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು.

ತಾಲ್ಲೂಕಿಗೆ ಸಮೀಪದಲ್ಲೇ ಇರುವ ಬೆಂಗಳೂರು ನಗರ ವ್ಯಾಪ್ತಿಗೆ ಸೇರಿರುವ ಯಲಹಂಕ ಪೊಲೀಸ್‌ ಠಾಣೆಯಲ್ಲಿ ಅಲ್ಲಿನ ಜನ ಸಂಖ್ಯೆಗೆ ಅನುಗುಣವಾಗಿ 120 ಜನ ಸಿಬ್ಬಂದಿ ಜೊತೆಗೆ 4 ಜನ ಪಿಎಸ್‌ಐ. ಇದರೊಂದಿಗೆ ಸಂಚಾರಿ ಪೊಲೀಸ್‌ ಠಾಣೆ ಪ್ರತ್ಯೇಕವಾಗಿ ಇದೆ. ಹೀಗಾಗಿ ಪೊಲೀಸರು ಕಾನೂನು, ಸುವ್ಯವಸ್ಥೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಹಕಾರಿಯಾಗಿದೆ.

ಕುರಿ, ಮೇಕೆ ಮೇಯಿಸಿಕೊಂಡು ಜೀವನ ಮಾಡುವವರು ಬಹುತೇಕ ಬಡ ಕುಟುಂಬಗಳೇ ಆಗಿರುತ್ತವೆ. ಇವುಗಳನ್ನು ರಾತ್ರಿ ವೇಳೆ ಕೂಡಿ ಹಾಕಲು ಭದ್ರವಾದ ಕೂಡು ಇಲ್ಲದವರೇ ಹೆಚ್ಚು. ಹೀಗಾಗಿ ಮನೆ ಮುಂದಿನ ಅಂಗಳದ ತಡಿಕೆಗಳ ದೊಡ್ಡಿಯಲ್ಲಿ ಕೂಡಿಹಾಕಿರುವ ಕುರಿಗಳನ್ನು ಕಳ್ಳವು ಮಾಡಿದರೆ ಕುರಿ ಸಾಕಾಣಿಕೆ ಮಾಡುವ ಜನರ ಜೀವನ ಹೇಗೆ ನಡೆಯಬೇಕು. ಸರ್ಕಾರ ಬರೀ ಪೊಲೀಸ್‌ ಠಾಣೆಗಳನ್ನು ತೆರೆದರೆ ಸಾಲದು ಅಲ್ಲಿಗೆ ಸೂಕ್ತ ಸಿಬ್ಬಂದಿ, ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಪರಿಕರಗಳನ್ನು ನೀಡಬೇಕು. ಬೆಂಗಳೂರು ಸೇರಿದಂತೆ ದೊಡ್ಡ ಜಿಲ್ಲಾ ಕೇಂದ್ರಗಳಲ್ಲಿನ ಪೊಲೀಸರಿಗೆ ನೀಡುವ ಎಲ್ಲಾ ಆಧುನಿಕ ಸೌಲಭ್ಯ ನೀಡಿದರೆ ಕಳ್ಳರನ್ನು ಪತ್ತೆ ಮಾಡಲು, ಅಪರಾಧಗಳನ್ನು ನಿಯಂತ್ರಿಸಲು ಸಾಧ್ಯವಾಗಲಿದೆ ಎಂದು ಪ್ರಾಂತ ರೈತ ಸಂಘದ ಮುಖಂಡ ಸಿ.ಎಚ್‌.ರಾಮಕೃಷ್ಣ ತಿಳಿಸಿದರು.

ನಡೆಯದ ಕುಂದೆಕೊರತೆ ಸಭೆ

ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ವರ್ಷಕ್ಕೆ ಒಮ್ಮೆಯಾದರು ಸಾರ್ವಜನಿಕರ ಕುಂದುಕೊರತೆಗಳ ಸಭೆ ನಡೆಸುವ ಮೂಲಕ ನಮ್ಮ ಸಮಸ್ಯೆ ಹೇಳಿಕೊಳ್ಳುವ ಅವಕಾಶ ಇತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಪೊಲೀಸ್‌ ಇಲಾಖೆಯಿಂದ ಸ್ಥಳೀಯ ಮಟ್ಟದ ಅಧಿಕಾರಿಗಳ ಸಭೆ ಹೊರತು, ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಸಭೆಗಳನ್ನೇ ನಡೆಸುತ್ತಿಲ್ಲ. ಇದರಿಂದ ಇಲ್ಲಿನ ಸಮಸ್ಯೆಗಳು ಇಲಾಖೆಯ ಗಮನಕ್ಕೆ ಹೋಗುವುದೇ ಇಲ್ಲ ಎಂದು ಕನ್ನಡಪರ ಹೋರಾಟಗಾರ
ಜಿ. ಸತ್ಯನಾರಾಯಣ್‌ ತಿಳಿಸಿದರು.

ಗ್ರಾಮಾಂತರಕ್ಕೆ ಅಪರಾಧ ವಿಸ್ತರಣೆ

ಬೆಂಗಳೂರಿನಲ್ಲಿ ಅಪರಾಧ ಚಟುವಳಿಕೆಗಳಲ್ಲಿ ತೊಡಗಿಸಿಕೊಂಡಿರುವವರು ತಲೆಮರೆಸಿಕೊಳ್ಳಲು ಹಾಗೂ ತಮ್ಮ ಕಾರ್ಯ ಚಟುವಟಿಕೆಗಳನ್ನು ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ವಿಸ್ತರಿಸಿಕೊಳ್ಳುತ್ತಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿಯೇ ಇಲ್ಲಿ ಕಳವು ಪ್ರಕರಣ ಸೇರಿದಂತೆ ಎಲ್ಲಾ ರೀತಿಯ ಅಪರಾಧಗಳು ಹೆಚ್ಚಾಗುತ್ತಿವೆ. ದೊಡ್ಡಬಳ್ಳಾಪುರ 1.20 ಲಕ್ಷ ಜನಸಂಖ್ಯೆಯನ್ನೂ ಮೀರಿ ಬೆಳೆದಿದೆ. ಅಲ್ಲದೆ ನಗರದ ಹೊರಭಾಗದಲ್ಲೂ ಬಡಾವಣೆಗಳು ನಿರ್ಮಾಣವಾಗಿವೆ. ಈ ಎಲ್ಲಾ ಪ್ರದೇಶದಲ್ಲಿ ರಾತ್ರಿ ವೇಳೆ ಇರಲಿ ಹಗಲಿನಲ್ಲೂ ಪೊಲೀಸ್‌ ಗಸ್ತು ಅಗತ್ಯವಾಗಿದೆ. ಆದರೆ ನಗರದ ಹೃದಯ ಭಾಗದ ಬಸ್‌ ನಿಲ್ದಾಣದಲ್ಲೇ ಇರುವ ವಾಹನ ದಟ್ಟಣೆಯನ್ನು ನಿಯಂತ್ರಿಸಲು ಪೊಲೀಸ್‌ ಸಿಬ್ಬಂದಿ ಇಲ್ಲದಂತಹ ಸ್ಥಿತಿಗೆ ಬಂದಿವೆ. ಇಲ್ಲಿನ ಪೊಲೀಸ್‌ ಠಾಣೆಗಳು. ಇತ್ತೀಚೀನ ದಿನಗಳಲ್ಲಿ ಪೊಲೀಸ್‌ ಠಾಣೆ ಸಮೀಪ ಹೊರತು ನಗರದ ಇತರೆಡೆಗಳಲ್ಲಿ ಸಮವಸ್ತ್ರದಲ್ಲಿ ಇರುವ ಪೊಲೀಸ್‌ ಸಿಬ್ಬಂದಿಯನ್ನು ಕಾಣುವುದೇ
ಅಪರೂಪವಾಗಿದೆ.

ತುರ್ತು ಪರಿಹಾರಕ್ಕೆ ಆದ್ಯತೆ

‘ನಮ್ಮಲ್ಲಿನ ಪೊಲೀಸ್‌ ಠಾಣೆಗಳಲ್ಲಿ ಇರುವ ಸಿಬ್ಬಂದಿ ಕೊರತೆ, ಆಧುನಿಕ ಪರಿಕರಗಳು, ಸಂಚಾರ ಪೊಲೀಸ್‌ ಠಾಣೆ ಪ್ರಾರಂಭ ಸೇರಿದಂತರೆ ಇತರೆ ಸೌಲಭ್ಯಗಳನ್ನು ಕಲ್ಪಿಸುವಂತೆ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಸಿಬ್ಬಂದಿ ಕೊರತೆಯನ್ನು ತುರ್ತಾಗಿ ಪರಿಹರಿಸಲು ಆಧ್ಯತೆ ನೀಡುವಂತೆಯು ಮನವಿ ಮಾಡಲಾಗಿದೆ’ ಎಂದು ಡಿವೈಎಸ್‌ಪಿ
ಎನ್‌.ನಾಗರಾಜ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT