ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳಿತಾಯದೊಂದಿಗೆ ಅಭಿವೃದ್ಧಿಗೂ ಒತ್ತು

ದೊಡ್ಡಬಳ್ಳಾಪುರ ನಗರಸಭೆ: ₹1.55 ಕೋಟಿ ಉಳಿತಾಯ ಬಜೆಟ್ ಮಂಡನೆ
Published 7 ಮಾರ್ಚ್ 2024, 6:16 IST
Last Updated 7 ಮಾರ್ಚ್ 2024, 6:16 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಮಳೆ ನೀರು ಕೊಯ್ಲು ವ್ಯವಸ್ಥೆಗೆ ಪ್ರೋತ್ಸಾಹ ಧನ, ಕುಡಿಯುವ ನೀರಿಗೆ ಆದ್ಯತೆ, ಭೋಜನ ಕುಟೀರ ನಿರ್ಮಾಣ, ರಸ್ತೆ ದುರಸ್ತಿ, ರಸ್ತೆ ವಿಸ್ತರಣೆ, ಮೂಲ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳಿಗೆ ಜತೆಗೆ ಉಳಿತಾಯಕ್ಕೂ ಆದ್ಯತೆ ನೀಡುವ ಮೂಲಕ ಈ ಬಾರಿ ಉಳಿತಾಯ ಬಜೆಟ್‌ ಮಂಡಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷೆ ಎಸ್‌.ಸುಧಾರಾಣಿ ಲಕ್ಷ್ಮೀನಾರಾಯಣ್ ಹೇಳಿದರು.

ನಗರಸಭೆಯಲ್ಲಿ ಬುಧವಾರ ನಡೆದ 2024-25ನೇ ಸಾಲಿನ ಆಯ-ವ್ಯಯದ ವಿಶೇಷ ಸಭೆಯಲ್ಲಿ ಬಜೆಟ್ ಮಂಡಿಸಿದ ಅವರು, 2024-25ನೇ ಸಾಲಿನ ಪ್ರಾರಂಭಿಕ ಉಳಿತಾಯ ₹12.25 ಕೋಟಿ, ವಿವಿಧ ಮೂಲಗಳ ವರಮಾನ ₹54.96 ಕೋಟಿ ಸೇರಿದಂತೆ ಒಟ್ಟು ₹67.21ಕೋಟಿ ಆದಾಯವನ್ನು ನಿರೀಕ್ಷಿಸಲಾಗಿದೆ. ಇದರಲ್ಲಿ ₹65.66 ಕೋಟಿ ಖರ್ಚಾಗುವುದಂತೆ ಅಂದಾಜಿಸಲಾಗಿದೆ. ಹಾಗಾಗಿ ಇದು ₹1.55 ಕೋಟಿ ಉಳಿತಾಯ ಬಜೆಟ್ ಆಗಿದೆ ಎಂದು ತಿಳಿಸಿದರು.

₹5.60 ಕೋಟಿ ವೆಚ್ಚದಲ್ಲಿ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಸಲು ಉದ್ದೇಶಲಾಗಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ನಗರೋತ್ಥಾನ ಹಂತ-4ರ ಯೋಜನೆಯಡಿ ದೊಡ್ಡಬಳ್ಳಾಪುರ ನಗರಸಭೆಗೆ ₹30 ಕೋಟಿ ಕ್ರಿಯಾಯೋಜನೆ ರೂಪಿಸಲಾಗಿದೆ. ನಗರದ ಮಳೆ ನೀರು ಚರಂಡಿ ಮೂಲಕ ಕೆರೆ ಸೇರಿವುದನ್ನು ತಪ್ಪಿಸಲು ₹3ಕೋಟಿ ವೆಚ್ಚದಲ್ಲಿ ಪ್ರತಿಬಂಧಕ ಹಾಗೂ ತಿರುವು ನಿರ್ಮಾಣಗೊಳಿಸಲಾಗುವುದು. ಇದನ್ನು ಯುಐಡಿಎಫ್‌ಸಿ ಸಂಸ್ಥೆ ಮೂಲಕ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.

ರಾಜ್ಯ ಸರ್ಕಾರದ ಎಸ್‌ಎಫ್‌ಸಿ ವಿಶೇಷ ಅನುದಾನದಡಿ ₹36.72 ಕೋಟಿ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೊಳಿಸಲಾಗುವುದು. ನಗರದ ಮುಖ್ಯ ವೃತ್ತಗಳಲ್ಲಿ ಜನದಟ್ಟಣಿ ಪ್ರದೇಶಗಳಲ್ಲಿ ₹20 ಲಕ್ಷ ವೆಚ್ಚದಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗುವುದು ಎಂದರು.

ನಗರದ ಪ್ರಮುಖ ರಸ್ತೆಗಳ ವಿಸ್ತರಣೆಗಾಗಿ ಸದರಿ ಸಾಲಿನಲ್ಲಿ ಯೋಜನಾ ವರದಿ ತಯಾರಿಸಿ ಹಂತ ಹಂತವಾಗಿ ಯೋಜನೆ ಕೈಗೊಳ್ಳಲು ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.

ನಗರಸಭೆ ಉಪಾಧ್ಯಕ್ಷೆ ಫರ್ಹಾನಾ ತಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್,ಪೌರಾಯುಕ್ತ ಕೆ.ಪರಮೇಶ್, ಲೆಕ್ಕಾಧಿಕಾರಿ ಎನ್.ನಂದೀಶ್ ಇದ್ದರು.

ಬಜೆಟ್‌ ಮುಖ್ಯಾಂಶಗಳು

l ₹1 ಕೋಟಿ ವೆಚ್ಚದಲ್ಲಿ ಕೆ.ಆರ್.ಮಾರುಕಟ್ಟೆಯಲ್ಲಿ ನೂತನ ಮಳಿಗೆ, ಗಳ ನಿರ್ಮಾಣ

l ₹98.20 ಲಕ್ಷ ವೆಚ್ಚದಲ್ಲಿ ಡಿ ಕ್ರಾಸ್ ರಸ್ತೆಯಲ್ಲಿ ನೂತನ ವಾಣಿಜ್ಯ ಮಳಿಗೆ

l ₹20 ಲಕ್ಷ ವೆಚ್ದದಲ್ಲಿ ನಗರಸಭೆ ಕಚೇರಿ ಆವರಣದಲ್ಲಿ ಕೊಂಗಾಡಿಯಪ್ಪ ಪುತ್ಥಳಿ ನಿರ್ಮಾಣ

l ₹30 ಲಕ್ಷ ವೆಚ್ಚದಲ್ಲಿ ನಗರಸಭೆ ಸ್ವತ್ತುಗಳಿಗೆ ತಂತಿ ಬೇಲಿ ಅಳವಡಿಕೆ

l ₹462.93 ಲಕ್ಷ ವೆಚ್ಚದಲ್ಲಿ ನಗರದಲ್ಲಿ ವಿವಿಧ ರಸ್ತೆ, ಚರಂಡಿ ನಿರ್ಮಾಣ

l ₹52.36 ಲಕ್ಷ ವೆಚ್ಚದಲ್ಲಿ ಮಳೆನೀರು ಚರಂಡಿ ಮೇಲಿನ ರಸ್ತೆಗಳಿಗೆ ಕಲ್ಲು ಒದಿಕೆ, ಚರಂಡಿ ಕಾಲುವೆಗಳಿಗೆ ಸ್ಲ್ಯಾಬ್ ಅಳವಡಿಕೆ

l ₹ 25 ಲಕ್ಷದಲ್ಲಿ ಬೀದಿದೀಪ ಅಳವಡಿಕೆ

ಐದು ಕಲ್ಯಾಣಿ ಜೀರ್ಣೋದ್ಧಾರ

ಅಮೃತ 2.0 ಯೋಜನೆಯಡಿ ₹9.15 ಕೋಟಿ ವೆಚ್ಚದಲ್ಲಿ ನಗರದ ₹10ಸಾವಿರ ಸಂಖ್ಯೆ ಕುಡಿಯುವ ನೀರಿನ ಕೊಳಾಯಿ ಸಂಪರ್ಕ ಒದಗಿಸುವ ಕಾಮಗಾರಿ ಕೈಗೊಳ್ಳಲಿದ್ದು, ಮೂರು ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ನಗರಸಭೆ ಅಧ್ಯಕ್ಷೆ ತಿಳಿಸಿದರು. ಇದೇ ಯೋಜನೆಯಡಿ ಜಲಮೂಲ ಅಭಿವೃದ್ಧಿಗೆ ನಗರ ವ್ಯಾಪ್ತಿಯ ₹3.20 ಕೋಟಿ ವೆಚ್ಚದಲ್ಲಿ ಐದು ಕಲ್ಯಾಣಿಗಳ ಜೀರ್ಣೋದ್ಧಾರ.

ನೀರಸ, ನಾಮ್‌ ಕಾ ವಾಸ್ತೆ ಬಜೆಟ್

ಬಜೆಟ್‌ ಕುರಿತು ಸಭೆಯಲ್ಲಿ ಮಾತನಾಡಿದ ಸದಸ್ಯ ಡಿ.ಎಂ.ಆನಂದ್, ರಸ್ತೆ ವಿಸ್ತರಣೆ, ಪ್ಲಾಸ್ಟಿಕ್ ಮುಕ್ತ ನಗರ ಎಂದು ಬಜಟ್‍ನಲ್ಲಿ ಹಣ ಮೀಸಲಿರಿಸಲಾಗುತ್ತಿದೆಯೇ ಹೊರತು ಯಾವುದೇ ಅನುಷ್ಟಾನವಾಗುತ್ತಿಲ್ಲ. ಈ ಬಗ್ಗೆ ಗಂಭಿರ ಚಿಂತನೆ ಅಗತ್ಯವಾಗಿದೆ. ಬಜೆಟ್ ಬರೀ ನಾಮಕಾವಸ್ತೆಯಾಗಿದ್ದು, ನೀರಸವಾಗಿದೆ ಎಂದು ಟೀಕಿಸಿದರು.

ಸರ್ಕಾರದ ಅನುದಾನ ನಿರೀಕ್ಷೆ ಮಾಡುತ್ತಾ ಕೂರುವ ಬದಲು ಸ್ಥಳೀಯ ಸಂಪನ್ಮೂ ಹೆಚ್ಚಿಸಲು ಆದ್ಯತೆ ನೀಡಬೇಕು. ಕಂದಾಯ ವಸೂಲಾತಿ, ವಾಣಿಜ್ಯ ಮಳಿಗೆಗಳ ತೆರಿಗೆಗಳನ್ನು ಸಮರ್ಪಕವಾಗಿ ವಸೂಲಿ ಮಾಡಬೇಕು. ನಗರೋತ್ಥಾನದಲ್ಲಿ ಕಾಮಗಾರಿಗಳು ಬಿರುಸಾಗಬೇಕಿದೆ ಎಂದು ಸದಸ್ಯರಾದ ಎಚ್.ಎಸ್.ಶಿವಶಂಕರ್, ಎಂ.ಮಲ್ಲೇಶ್ ಸಲಹೆ ನೀಡಿದರು.

ನಗರದ ಅಭಿವೃದ್ದಿಗೆ ಜನಪ್ರತಿನಿಧಿಗಳೊಂದಿಗೆ ಅಧಿಕಾರಿಗಳು ಕೈಜೋಡಿಸಬೇಕು, ಬೆಳೆಯುತ್ತಿರುವ ನಗರಕ್ಕೆ ಪೂರಕವಾಗಿ ಬಜೆಟ್‍ನ ರೂಪು ರೇಷೆಗಳು ಸಿದ್ದವಾಗಬೇಕಿವೆ ಎಂದು ಮತ್ತೊಬ್ಬ ಸದಸ್ಯ ಎಂ.ಜಿ.ಶ್ರೀನಿವಾಸ್ ಹೇಳಿದರು. ಸದಸ್ಯ ಟಿ.ಎನ್.ಪ್ರಭುದೇವ್ ಮಾತನಾಡಿ, ಬಜೆಟ್ ವಾಸ್ತವಕ್ಕೆ ಹತ್ತಿರವಿರಬೇಕು. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಬೇಕಿದ್ದು, ನಿರೀಕ್ಷೆ ಮುಟ್ಟಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT