ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೊಡ್ಡಬಳ್ಳಾಪುರ: ಕಾವೇರಿ-2ರಲ್ಲಿ ತಾಂತ್ರಿಕ ದೋಷ

ನಾಲ್ಕು ದಿನದಿಂದ ನೋಂದಣಿಗೆ ಸಮಸ್ಯೆ । ದೊಡ್ಡಬಳ್ಳಾಪುರ ಎ.ಸಿ ಕಚೇರಿಯಲ್ಲಿ ಜನರ ಪರದಾಟ
Published 24 ಫೆಬ್ರುವರಿ 2024, 0:12 IST
Last Updated 24 ಫೆಬ್ರುವರಿ 2024, 0:12 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ನಗರದ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿನ ಕಾವೇರಿ-2 ತಂತ್ರಾಂಶದಲ್ಲಿ ಮತ್ತೆ ತಾಂತ್ರಿಕ ದೋಷ ಉಂಟಾಗಿದ್ದು, ನಾಲ್ಕು ದಿನಗಳಿಂದಲೂ ನಿವೇಶನ, ಜಮೀನು, ವಿವಾಹ ನೋಂದಣಿ ಸೇರಿದಂತೆ ಯಾವುದೂ ಸಹ ನಿಗದಿತ ಸಮಯಕ್ಕೆ ನೋಂದಣಿಯಾಗದೆ ನೋಂದಣಿ ಕಚೇರಿಯಲ್ಲಿ ದಿನಗಟ್ಟಲೆ ಕಾದು ಕುಳಿತುಕೊಳ್ಳುವ ಪರಿಸ್ಥಿತಿ ಉಂಟಾಗಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಕಾವೇರಿ-2 ತಂತ್ರಾಂಶವನ್ನು ಅನುಷ್ಠಾನಕ್ಕೆ ತಂದಾಗ ನೋಂದಣಿ ಪ್ರಕ್ರಿಯೆ ತ್ವರಿತಗತಿಯಲ್ಲಿ ಆಗಲಿದೆ. ಖರೀದಿದಾರರು ಹಾಗೂ ಮಾರಾಟಗಾರರು ಗಂಟೆಗಟ್ಟಲೆ ಕಚೇರಿಯಲ್ಲಿ ಕಾದು ನಿಲ್ಲುವ ಪರಿಸ್ಥಿತಿ ದೂರವಾಗಲಿದೆ ಎಂದು ಪ್ರಚಾರ ಮಾಡಲಾಯಿತು. ಆದರೆ ವಾರದಲ್ಲಿ ಕನಿಷ್ಠ ಮೂರು ದಿನವಾದರೂ ಸರ್ವರ್ ನಿದಾನಗತಿ ಅಥವಾ ಕೆಲವು ಸಮಯ ಇಲ್ಲದಂತೆಯೇ ಆಗಲಿದೆ.

ಇದರಿಂದ ನೋಂದಣಿ ಕಚೇರಿಗೆ ಬರುವ ಹಿರಿಯನಾಗರಿಕರು, ಮಹಿಳೆಯರು ದಿನಗಟ್ಟಲೆ ಕಾದು ನಿಲ್ಲುವಂತಹ ಪರಿಸ್ಥಿತಿ ಮರುಕಳುಹಿಸಿದೆ. ಇದರಿಂದ ಕಾವೇರಿ-2 ತಂತ್ರಾಂಶದ ಮೂಲ ಉದ್ದೇಶವೇ ಮರೆಯಾಗುತ್ತಿದೆ ಎಂದು ನಿವೇಶನ ಮಾರಾಟಕ್ಕೆ ಶುಕ್ರವಾರ ಉಪನೋಂದಣಾಧಿಕಾರಿಗಳ ಕಚೇರಿಗೆ ಬಂದಿದ್ದ ವಿನಾಯಕ ನಗರ ನಿವಾಸಿ ಮುನಿಯಪ್ಪ ದೂರಿದ್ದಾರೆ.

ಕಾವೇರಿ ತಂತ್ರಾಂಶ ಪದೇ ಪದೇ ಸ್ಥಗಿತವಾಗುತ್ತಿರುವ ಕುರಿತಂತೆ ನೋಂದಣಾಧಿಕಾರಿಗಳ ಕಚೇರಿ ಸಿಬ್ಬಂದಿ ಸಹ ತೀವ್ರ ಬೇಸರ ವ್ಯಕ್ತಪಡಿಸುತ್ತಾರೆ. ನೋಂದಣಿಗೆ‌ ಬರುವ ನಾಗರಿಕರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದೇ ದೊಡ್ಡ ತಲೆನೋವಿನ ಕೆಲಸವಾಗಿದೆ. ಇಡೀ ದಿನ ಕಂಪ್ಯೂಟರ್ ಮುಂದೆ ಕೆಲಸ ಇಲ್ಲದೆ ಕುಳಿತು ಯಾವಾಗ ಸರ್ವರ್ ಬರುತ್ತದೆ ಎಂದು ಕಾಯುವಂತಾಗಿದೆ ಎನ್ನುತ್ತಾರೆ.

ತಂತ್ರಾಂಶ ಉನ್ನತೀಕರಣದಿಂದ ಸರ್ವರ್ ಸಮಸ್ಯೆ

ಇಡೀ ರಾಜ್ಯದಲ್ಲಿಯೇ ಸರ್ವರ್ ಸಮಸ್ಯೆ ಇದೆ. ತಂತ್ರಾಂಶವನ್ನು ಸರ್ಕಾರಿ ರಜಾ ದಿನಗಳಲ್ಲಿ ಉನ್ನತೀಕರಿಸಬೇಕು. ಆದರೆ ಕೆಲಸದ ದಿನಗಳಲ್ಲಿಯೇ ತಂತ್ರಾಂಶ ಉನ್ನತೀಕರಿಸುವುದರಿಂದಲೇ ಸರ್ವರ್ ಸಮಸ್ಯೆ ತಲೆದೊರುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುವುದಲ್ಲದೆ ಸರ್ಕಾರದ ಬೊಕ್ಕಸಕ್ಕೆ ಬರುವ ನೋಂದಣಿ ಶುಲ್ಕವು ಸಹ ಕಡಿಮೆಯಾಗಲಿದೆ ಎನ್ನುತ್ತಾರೆ ಉಪನೋಂದಣಿ ಕಚೇರಿಯ ಹೆಸರು ಹೇಳಲು ಇಚ್ಚಿಸದ ಅಧಿಕಾರಿಯೊಬ್ಬರು. ಸರ್ವರ್ ಕೈಕೊಡುತ್ತಿರುವ ಸಮಯದಲ್ಲೆ ದಸ್ತಾ ಮೇಜುಗಳ ನೋಂದಣಿ ಸಮಯವನ್ನು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ಹಾಗೂ 2.30 ರಿಂದ ಸಂಜೆ 4.30ಕ್ಕೆ ನಿಗದಿಪಡಿಸಿದ್ದಾರೆ. ಈ ಹಿಂದೆ ಸಮಯವು ಹೆಚ್ಚುವರಿಯಾಗಿತ್ತು ಸರ್ವರ್ ಸಮಸ್ಯೆಯು ಇರಲಿಲ್ಲ. ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳು ಕಾವೇರಿ- 2 ತಂತ್ರಾಂಶದಲ್ಲಿನ ದೋಷವನ್ನು ತ್ವರಿತವಾಗಿ ಸರಿಪಡಿಸಬೇಕು ಎಂದು ಪತ್ರಬರಹಗಾರರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT